ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ಕೊಡಿಸುವುದಾಗಿ ಹೇಳಿ ಮೋಸ ಮಾಡಿದ ಸಂಸದ: ಮಾಜಿ ಶಾಸಕ ನಿಂಗಪ್ಪ ಆಕ್ರೋಶ

Last Updated 16 ಏಪ್ರಿಲ್ 2018, 12:44 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಕೆಜೆಪಿಯಿಂದ ಬಂದ ರಾಯಸಂದ್ರ ರವಿಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದು ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಶಾಸಕ ಮತ್ತು ಪಕ್ಷದ ಹಿರಿಯ ಮುಖಂಡ ಎಸ್.ನಿಂಗಪ್ಪ ಹಾಗೂ ಸಂಸದರ ಆಪ್ತರಾದ ಬಯಲುಸೀಮೆ ಪ್ರದೇಶಾಭಿವೃದ್ಧಿಮಂಡಳಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜ್ ಅವರು ಆಕ್ರೋಶ ಹೊರಹಾಕಿದ್ದಾರೆ.

ಸೋಮವಾರ ಮಧ್ಯಾಹ್ನ ಕಲ್ಲಹಳ್ಳಿ ದೇವರಾಜ್ ಅವರು ನಿಂಗಪ್ಪ ಅವರ ಮನೆಗೆ ಭೇಟಿ ನೀಡಿ ತಮ್ಮ ರಾಜಕೀಯ ಮುಂದಿನ ನಡೆಯ ಬಗ್ಗೆ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿಂಗಪ್ಪ, ‘ಕಾಂಗ್ರೆಸ್ ಪಕ್ಷದಲ್ಲಿ ಹಲವು ದಶಕಗಳ ಕಾಲ ಕೆಲಸ ಮಾಡಿದ್ದೇನೆ. ಸಂಸದ ಮುದ್ದ ಹನುಮೇಗೌಡ ಅವರು ನನಗೆ ಟಿಕೆಟ್ ಕೊಡಿಸುವುದಾಗಿ ಹೇಳಿಕೊಂಡು ಬಂದು ಕೆಜೆಪಿಯಿಂದ ಬಂದ ವ್ಯಕ್ತಿಗೆ ಮಣೆ ಹಾಕಿ ನನಗೆ ಮೋಸ ಮಾಡಿದ್ದಾರೆ. ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ. ಸ್ಪರ್ಧಿಸಲೇಬೇಕು ಎಂಬ ಅಭಿಪ್ರಾಯ ವ್ಯಕ್ತವಾದರೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ’ ಎಂದು ಹೇಳಿದರು.

ಬಯಲುಸೀಮೆ ಪ್ರದೇಶಾಭಿವೃದ್ಧಿಮಂಡಳಿ ಅಧ್ಯಕ್ಷ ಕಲ್ಲಹಳ್ಳಿ ದೇವರಾಜ್ ಮಾತನಾಡಿ,‘ 35 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ನನಗಾಗಲಿ, ನಿಂಗಪ್ಪ, ದೀಪಕ್ ಹಾಗೂ ಶಾಸಕ ಕೆ.ಎನ್.ರಾಜಣ್ಣ ಅವರ ಮಗ ರಾಜೇಂದ್ರ ಈ ನಾಲ್ವರಲ್ಲಿ ಯಾರಿಗಾದರೂ ಟಿಕೆಟ್ ಕೊಡಿ. ಒಗ್ಗಟ್ಟಿನಿಂದ ಗೆಲುವಿಗೆ ಶ್ರಮಿಸುತ್ತೇವೆ. ಹೊರಗಿನವರಿಗೆ ಮಣೆ ಹಾಕಬಾರದು ಎಂದು ಮನವಿ ಮಾಡಿದ್ದರೂ ನಮ್ಮ ಮನವಿಗೆ ಬೆಲೆ ಕೊಟ್ಟಿಲ್ಲ ಎಂದು ಟೀಕಿಸಿದರು.

ಈಗ ಟಿಕೆಟ್ ಪಡೆದಿರುವ ರಾಯಸಂದ್ರ ರವಿ ಅವರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದ ಊರುಗಳ ರಸ್ತೆಗಳೂ ಗೊತ್ತಿಲ್ಲ. ಅಂತಹವರಿಗೆ ಟಿಕೆಟ್ ಕೊಟ್ಟಿರುವುದು ತುಂಬಾ ಬೇಸರವನ್ನುಂಟು ಮಾಡಿದೆ. ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಭಟನೆಗೆ ಮುಂದಾದ ಬೆಂಬಲಿಗರು: ನಿಂಗಪ್ಪ ಅವರಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಂಗಪ್ಪ ಅವರ ಮನೆಯ ಮುಂದೆ ಬಂದು ಪಕ್ಷದ ವಿರುದ್ಧ ಘೋಷಣೆ ಕೂಗಿದ್ದಾರೆ.

ಈ ವೇಳೆ ನಿಂಗಪ್ಪ ಅವರು ಬೆಂಬಲಿಗರನ್ನು ಸಮಾಧಾನಪಡಿಸಿದ್ದಾರೆ. ಪ್ರತಿಭಟನೆಯಂತಹ ಪ್ರಯತ್ನಕ್ಕೆ ಹೋಗಬಾರದು. ಈಗ ಸಮಾಧಾನವಾಗಿರಿ. ಟಿಕೆಟ್ ಕೈ ತಪ್ಪಿಸಿದ್ದ ಬಗ್ಗೆ ಮುಖಂಡರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT