ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಿಂದಲೇ ‘ವಂದೇ ಭಾರತ್’ ರೈಲು ಸಂಚಾರ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ರೈಲ್ವೇ ಸಚಿವ ಅಶ್ವಿನಿ ಭರವಸೆ
Last Updated 12 ಅಕ್ಟೋಬರ್ 2022, 3:12 IST
ಅಕ್ಷರ ಗಾತ್ರ

ಧಾರವಾಡ: ‘ಹುಬ್ಬಳ್ಳಿ ಬದಲು ಧಾರವಾಡದಿಂದ ‘ವಂದೇ ಭಾರತ್’ ರೈಲು ಸಂಚಾರ, ವಾರಣಾಸಿಗೆ ವಾರಕ್ಕೆ ಎರಡು ದಿನ ರೈಲು ಹಾಗೂ ನಿಜಾಮುದ್ದೀನ್ ರೈಲಿಗೆ ಸವಾಯಿ ಗಂದರ್ವರ ಹೆಸರು ಇಡಲು ಕ್ರಮ ವಹಿಸಲಾಗುವುದು’ ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ ಭರವಸೆ ನೀಡಿದರು.

₹20ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿರುವ ಇಲ್ಲಿನ ರೈಲು ನಿಲ್ದಾಣವನ್ನು ಮಂಗಳವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‌‘ವಿಶ್ವದ ಗಮನ ಸೆಳೆದಿರುವ ‘ವಂದೇ ಭಾರತ್‌’ ರೈಲನ್ನು ಈ ಮೊದಲು ಹುಬ್ಬಳ್ಳಿಯಿಂದ ಬೆಂಗಳೂರು ನಡುವೆ ಓಡಿಸಲು ನಿರ್ಧರಿಸಲಾಗಿತ್ತು. ಅದನ್ನು ಧಾರವಾಡದಿಂದ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ ಅವರು ವಾಟ್ಸ್ಆ್ಯಪ್ ಮೂಲಕ ಬಂದ ತಪೋವನ ಬಳಿ ಎಲ್‌ಸಿ300 ಮೇಲುಸೇತುವೆಗೆ ಅನುಮೋದನೆ ಪ್ರತಿಯನ್ನು ಓದಿ ಹೇಳಿದರು.

‘ವಿಶ್ವದರ್ಜೆಯ ಹಾಗೂ ಅತ್ಯಂತ ವೇಗವಾಗಿ ಸಂಚರಿಸುವ ರೈಲು ನಿರ್ಮಾಣದ ಕನಸು ಪ್ರಧಾನಿ ಮೋದಿ ಅವರದ್ದಾಗಿತ್ತು. ಅದರಂತೆ 2018ರಲ್ಲಿ ‘ವಂದೇ ಭಾರತ್‌’ ಹೆಸರಿನ ಎರಡು ರೈಲುಗಳನ್ನು ನಿರ್ಮಿಸಲಾಗಿತ್ತು. 2019ರಿಂದ ಸಂಚಾರ ಆರಂಭಿಸಿರುವ ಈ ರೈಲುಗಳು ಈವರೆಗೂ 18ಲಕ್ಷ ಕಿ.ಮೀ. ಕ್ರಮಿಸಿವೆ. ಈ ಸಂದರ್ಭದಲ್ಲಿ ಯಾವುದೇ ಗಂಭೀರ ಸಮಸ್ಯೆಗಳು ಕಂಡುಬಂದಿಲ್ಲ. ಹೀಗಾಗಿ ಇಂಥದ್ದೇ 75 ರೈಲುಗಳನ್ನು ನಿರ್ಮಿಸಲಾಗುತ್ತಿದೆ. ಬುಲೆಟ್ ರೈಲು 0 ಯಿಂದ 100 ಕಿ.ಮೀ. ವೇಗ ಪಡೆದುಕೊಳ್ಳಲು 55 ಸೆಕೆಂಡುಗಳನ್ನು ತೆಗೆದುಕೊಂಡರೆ, ವಂದೇ ಭಾರತ್ 52 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಇಂಥ ವಿಶೇಷತೆಯ ರೈಲು ನಿರ್ಮಿಸಿದ ಶ್ರೇಯ ಭಾರತೀಯ ಎಂಜಿನಿಯರ್‌ಗಳದ್ದಾಗಿದೆ’ ಎಂದು ಶ್ಲಾಘಿಸಿದರು.

‘ಈಗಾಗಲೇ ಶೇ 70ರಷ್ಟು ರೈಲು ಮಾರ್ಗದ ವಿದ್ಯುಧೀಕರಣ ಕಾಮಗಾರಿ ಪೂರ್ಣಗೊಂಡಿದೆ. ಫೆಬ್ರುವರಿ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಹೊಸ ರೈಲುಗಳ ಸಂಚಾರ ಆರಂಭಿಸಲಾಗುವುದು’ ಎಂದು ಅಶ್ವಿನಿ ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ‘ರೈಲ್ವೇ ಇಲಾಖೆಯಲ್ಲಿ ಸಚಿವರು ಆಧುನಿಕ ತಂತ್ರಜ್ಞಾನ ತರುತ್ತಿದ್ದಾರೆ. ರೈಲಿನಲ್ಲಿ ಪ್ರಯಾಣಿಸುವವರಿಗೆ ₹60ಸಾವಿರ ಸಬ್ಸಿಡಿಯನ್ನು ಸರ್ಕಾರ ನೀಡುತ್ತಿದೆ.ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಕವಚ ಎಂಬ ವಿಶ್ವದರ್ಜೆ ರೇಲ್ವೆ ಸುರಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. 2014-2022 ರ ಅಭಿವೃದ್ಧಿಯಲ್ಲಿ 30,446 ಕಿ.ಮೀ ವಿದ್ಯುದ್ಧಿಕರಣ ಮಾಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ‘ಕಳೆದ 68 ವರ್ಷಗಳಲ್ಲಿ ರೈಲ್ವೇ ಎಂದರೆ ಕಣ್ಣು, ಮೂಗು, ಕಿವಿ ಮುಚ್ಚಿಕೊಂಡೇ ಹೋಗಬೇಕಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ನಂತರ ರೈಲು ನಿಲ್ದಾಣವೂ ವಿಮಾನ ನಿಲ್ದಾಣಗಳಿಗಿಂತ ಕಡಿಮೆ ಇಲ್ಲದಂತೆ ಅಭಿವೃದ್ಧಿಗೊಂಡಿದೆ’ ಎಂದರು.

ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ಜಂಗಲ್ ಲಾಡ್ಜ್‌ ಮತ್ತು ರೆಸಾರ್ಟ್‌ ಅಧ್ಯಕ್ಷ ರಾಜಶೇಖರ ಕೋಟೆಣ್ಣವರ, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜಯ ಕಿಶೋರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT