ಗುರುವಾರ , ಸೆಪ್ಟೆಂಬರ್ 23, 2021
26 °C

ಸೂರ್ಯಗ್ರಹಣ: ಹುಬ್ಬಳ್ಳಿ ರಸ್ತೆಗಳು ಬಣ ಬಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಣ್ಣೆತ್ತಿನ ಅಮಾವಾಸ್ಯೆಯೊಂದಿಗೆ ಭಾನುವಾರ ಸಂಭವಿಸಿದ ರಾಹುಗ್ರಸ್ಥ ಸೂರ್ಯಗ್ರಹಣದಿಂದ ಇಡೀ ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಯಿತು. ಗ್ರಹಣದ ಪರಿಣಾಮ ಜನ ರಸ್ತೆಗೆ ಇಳಿಯಲಿಲ್ಲ. ಮಧ್ಯಾಹ್ನ 2ರವರೆಗೂ ವಾಹನ ಹಾಗೂ ಜನ ಸಂಚಾರ ವಿರಳವಾಗಿತ್ತು. ದೇವಾಲಯಗಳು, ಹೋಟೆಲ್‌ಗಳು ಗ್ರಹಣ ಮುಗಿಯುವವರೆಗೂ ಮುಚ್ಚಿದ್ದವು. ರಸ್ತೆಗಳಲ್ಲಿ ಬೆರಳೆಣಿಕೆ ವಾಹನಗಳ ಓಡಾಟ ಕಂಡು ಬಂದಿತು.

ಬಹುತೇಕರು ಮನೆಗಳಲ್ಲೇ ಉಳಿದು, ಟಿವಿ ವಾಹಿನಿಗಳಲ್ಲಿ ಗ್ರಹಣ ವೀಕ್ಷಿಸಿದರು. ಗ್ರಹಣದ ಮೋಕ್ಷಕಾಲ ಮುಗಿದ ಬಳಿಕ ವಾಹನಗಳನ್ನು ಶುಚಿಗೊಳಿಸಿ ಪೂಜೆ ಸಲ್ಲಿಸಿದರು. ದೇವಾಲಯಗಳನ್ನೂ ಶುಚಿಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಿದ್ಧಾರೂಢ ಮಠ, ಮೂರುಸಾವಿರ ಮಠ, ದುರ್ಗದಬೈಲಿನ ಅಂಬಾಭವಾನಿ ದೇವಸ್ಥಾನ, ಶಿರಡಿ ಸಾಯಿಬಾಬಾ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನದ ಸೇರಿದಂತೆ ಎಲ್ಲ ದೇಗುಲಗಳಲ್ಲಿ ಮಧ್ಯಾಹ್ನದ ನಂತರ ವಿಶೇಷ ಪೂಜೆ ನಡೆಯಿತು.

ಬೆಳಿಗ್ಗೆ ಸೂರ್ಯಗ್ರಹಣ ಆರಂಭವಾಗುತ್ತಿದ್ದಂತೆ ನಗರದ ಅಂಬೇಡ್ಕರ್‌ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳು ಉಪ್ಪಿಟ್ಟು ಸೇವಿಸಿ ಮೌಡ್ಯದ ವಿರುದ್ಧ ಜಾಗೃತಿ ಮೂಡಿಸಿದರು. ಗ್ರಹಣದ ವೇಳೆ ಊಟ, ಉಪಾಹಾರ ಸೇವಿಸಿದರೆ ಕೆಟ್ಟದಾಗುತ್ತದೆ ಎಂಬುದು ಮೂಢನಂಬಿಕೆ. ಸಾರ್ವಜನಿಕರು ಇಂಥ ಮೌಢ್ಯಗಳಿಂದ ದೂರ ಇರಬೇಕು ಎಂದು ಸಂಘಟನೆ ಮುಖಂಡರು ತಿಳಿಸಿದರು.

ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ರಾಹುಗ್ರಸ್ಥ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ನಗರದ ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಹಣ ಪ್ರಾರಂಭಕ್ಕೂ ಮುನ್ನ ಈಶ್ವರನಿಗೆ ಪೂಜೆ ಸಲ್ಲಿಸಿದ ಅರ್ಚಕರು ದೇವಾಲಯದ ಬಾಗಿಲು ಮುಚ್ಚಿದರು. ಗ್ರಹಣ ಮುಗಿದ ಬಳಿಕ ದೇವಾಲಯಗಳನ್ನು ಸ್ವಚ್ಛಗೊಳಿಸಿ ಮತ್ತೆ ವಿಶೇಷ ಪೂಜೆ ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು