ಮಂಗಳವಾರ, ಆಗಸ್ಟ್ 20, 2019
24 °C
ತುಪ್ಪರಿಹಳ್ಳ ಪ್ರವಾಹಕ್ಕೆ ನಲುಗಿದ ಮೊರಬ, ಶಿರಕೋಳ, ಹಣಸಿ ಗ್ರಾಮಗಳು

ನೆಲ ಕಚ್ಚಿದ ಮನೆಗಳಲ್ಲಿ ಬದುಕಿನ ಹುಡುಕಾಟ...

Published:
Updated:
Prajavani

ನವಲಗುಂದ: ಆ ಮೂರು ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳು ಪುನರ್ವಸತಿ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಪ್ರವಾಹ ಸಂತ್ರಸ್ತರಿಂದ ತುಂಬಿ ಹೋಗಿವೆ. ಕೆಲ ಕೋಣೆಗಳಲ್ಲಿ ಜನರಿದ್ದರೆ, ಉಳಿದೆಡೆ ಜಾನುವಾರುಗಳು. ಜೀವ ಉಳಿದರೂ, ಮುಂದೆ ಬದುಕು ಸಾಗಿಸಲು ಬೇಕಾದ ಸರ್ವಸ್ವವನ್ನು ಕಳೆದುಕೊಂಡ ಜನರು ಕ್ಷಣ ಕ್ಷಣಕ್ಕೂ ಮಳೆ ಜತೆಗೆ, ಊರ ಮಗ್ಗುಲಲ್ಲಿರುವ ತುಪ್ಪರಿಹಳ್ಳವನ್ನು ಶಪಿಸುತ್ತಿದ್ದಾರೆ...

ನವಲಗುಂದ ತಾಲ್ಲೂಕಿನ ತುಪ್ಪರಿಹಳ್ಳ ತೀರದ ಗ್ರಾಮಗಳಾದ ಮೊರಬ, ಶಿರಕೋಳ ಹಾಗೂ ಹಣಸಿ ಗ್ರಾಮಗಳ ಸ್ಥಿತಿ ಇದು. ಹಳ್ಳದ ಪ್ರವಾಹಕ್ಕೆ ನಲುಗಿ ಹೋಗಿರುವ ಈ ಗ್ರಾಮಗಳ 800ಕ್ಕೂ ಹೆಚ್ಚು ಜನರು ಮೂರು ದಿನಗಳಿಂದ ಊರಿನ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿದ್ದಾರೆ.

ಬಿಡದೆ ಸುರಿಯುತ್ತಿದ್ದ ಮಳೆ ಶನಿವಾರ ಸ್ವಲ್ಪ ಬಿಡುವು ಕೊಟ್ಟಿತ್ತು. ಹಾಗಾಗಿ, ಪುನರ್ವಸತಿ ಕೇಂದ್ರಗಳಲ್ಲಿದ್ದವರು ಮನೆ ಮಂದಿಯೊಂದಿಗೆ, ನೆಲ ಕಚ್ಚಿರುವ ತಮ್ಮ ಮನೆಯ ಅವಶೇಷಗಳಡಿ ಸಿಲುಕಿದ್ದ ಪಾತ್ರೆ, ಬಟ್ಟೆ, ದಾಖಲೆ ಪತ್ರ, ಮಕ್ಕಳ ಪುಸ್ತಕ ಸೇರಿದಂತೆ ವಿವಿಧ ವಸ್ತುಗಳನ್ನು ಆರಿಸಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

2 ದಿನದಿಂದ ಜಲಾವೃತ:

ಮೂರು ಹಳ್ಳಿಗಳ ಪೈಕಿ ಹೋಬಳಿ ಕೇಂದ್ರವಾದ ಮೊರಬ ಅತಿ ಹೆಚ್ಚು ಹಾನಿಗೊಳಗಾಗಿದೆ. ಇಲ್ಲಿನ ಹಳ್ಳಿಗೇರಿ, ತಗ್ಗಿ ಒಣಿ, ಖಾದಿ ಕೇಂದ್ರ ಹಾಗೂ ಅಂಬೇಡ್ಕರ್‌ನಗರ ಸೇರಿದಂತೆ ಗ್ರಾಮದ ಇತರ ಓಣಿಗಳು ಸೇರಿದಂತೆ ಅಂದಾಜು 300 ಮನೆಗಳು ಎರಡು ದಿನದಿಂದ ಜಲಾವೃತ ಸ್ಥಿತಿಯಲ್ಲಿದ್ದವು. ಈ ಪೈಕಿ, 30ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ. ನವಲಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕೊಚ್ಚಿ ಹೋಗಿದೆ.

ಹಣಸಿಯಲ್ಲಿ 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದರೆ, ಶಿರಕೋಳದ ಜಾಡರಪೇಟೆ ಹಾಗೂ ಕಬ್ಬೂರಿ ಓಣಿಗಳ ಮನೆಗಳಲ್ಲಿ ಎರಡು ದಿನದಿಂದ ನೀರು ನಿಂತಿದ್ದರಿಂದ ಮನೆ ತುಂಬಾ ಕೆಸರು ರಾಡಿಯಾಗಿದೆ.

ನೀರಿಗೂ ಹಾಹಾಕಾರ:

ಮನೆ ಸುತ್ತಲೂ ನೆರೆಯ ನೀರು ಇದ್ದರೂ ಕುಡಿಯುವ ನೀರು ಇಲ್ಲದೆ ಜನರು ಪರದಾಡುತ್ತಿದ್ದ ದೃಶ್ಯ ಈ ಮೂರೂ ಗ್ರಾಮಗಳಲ್ಲಿ ಕಂಡುಬಂತು.

‘ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವುದರಿಂದ ಪಂಚಾಯ್ತಿಯವರು ಬೇರೆ ಊರಿನಿಂದ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿದ್ದಾರೆ. ಆದರೂ ಸಾಲುತ್ತಿಲ್ಲ. ಇದರಿಂದಾಗಿ, ಜನರು ಪ್ರವಾಹದ ನೀರನ್ನು ಅನಿವಾರ್ಯವಾಗಿ ಬಳಸಬೇಕಾಗಿದೆ’ ಎಂದು ಮೊರಬದ ಮಲ್ಲಪ್ಪ ಗುರುಪಾದಪ್ಪ ಬೆಟಸೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬೆಳೆ ನೀರು ಪಾಲು:

ಪ್ರವಾಹದಿಂದಾಗಿ ತುಪ್ಪರಿಹಳ್ಳದ ಅಂಚಿನ ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ಗೋವಿನ ಜೋಳ, ಪೇರಲ, ಹೆಸರು ಸೇರಿದಂತೆ ಹಲವು ಬೆಳೆಗಳು ಕೊಚ್ಚಿಕೊಂಡು ಹೋಗಿವೆ.

‘ಮುಂಗಾರು ಬೆನ್ನಲ್ಲೇ ಬಿತ್ತಿದ್ದ ಬಹುತೇಕ ಬೆಳೆಗಳು ತುಪ್ಪರಿಹಳ್ಳದ ಪ್ರವಾಹಕ್ಕೆ ಆಹುತಿಯಾಗಿವೆ. ಸ್ವಂತ ಜಮೀನು ಇದ್ದವರಿಗೆ ಪರಿಹಾರ ಸಿಗುತ್ತದೆ. ಆದರೆ, ಗುತ್ತಿಗೆ ಜಮೀನು ಮಾಡಿಕೊಂಡವರಿಗಾದ ನಷ್ಟು ಭರಿಸುವವರು ಯಾರು?’ ಎಂದು ಶಿರಕೋಳದ ರೈತ ಕಲ್ಲಪ್ಪ ಹೆಬಸೂರ ಪ್ರಶ್ನಿಸಿದರು.

ಪ್ರವಾದಿಂದ ನಲುಗಿರುವ ಮೂರೂ ಗ್ರಾಮಗಳಲ್ಲಿ ವೈದ್ಯರ ತಂಡಗಳು ಬೀಡು ಬಿಟ್ಟಿದ್ದು, ಜನರಿಗೆ ಉಚಿತ ಚಿಕಿತ್ಸೆ ಜತೆಗೆ ಔಷಧಗಳನ್ನು ವಿತರಿಸುತ್ತಿವೆ.

Post Comments (+)