ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ ಸುದ್ದಿಲ್ಲ, ಅಪ್ಪನ ನೋಡಿ ಕನ್ಯಾ ಕೊಡಿ!

ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿಯವರನ್ನು ಗೇಲಿ ಮಾಡಿದ ವಿನಯ ಕುಲಕರ್ಣಿ
Last Updated 13 ಏಪ್ರಿಲ್ 2019, 7:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಹ್ಲಾದ ಜೋಶಿ ಹೇಗೆ ಎಂಬುದು ಜಿಲ್ಲೆಯ ಜನರಿಗೆ ಗೊತ್ತಿದೆ. ಅವರನ್ನು ನೋಡಿ ಜನ ವೋಟ್‌ ಹಾಕಲ್ಲ ಎಂಬುದು ಬಿಜೆಪಿಯವರಿಗೆ ತಿಳಿದ ಮೇಲೆ ಮೋದಿ ನೋಡಿ ವೋಟ್‌ ಹಾಕಿ ಎಂದು ಪ್ರಚಾರ ಮಾಡತೊಡಗಿದ್ದಾರೆ. ಬಿಜೆಪಿಗರ ಪರಿಸ್ಥಿತಿ ಹೇಗಾಗಿದೆ ಎಂದರೆ ಮಗನಿಗೆ(ಜೋಶಿ) ಕನ್ಯಾ ಹುಡುಕಲು ಹೊರಟಿದ್ದಾರೆ.

ಆದರೆ, ಮಗ ಸುದ್ದಿಲ್ಲ. ಹೀಗಾಗಿ ಅಪ್ಪನ(ಮೋದಿ) ನೋಡಿ ಕನ್ಯಾ ಕೊಡಿ ಎಂಬಂತಾಗಿದೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಗೇಲಿ ಮಾಡಿದರು.

ಇಲ್ಲಿನ ಕೊಪ್ಪಿಕರ್‌ ರಸ್ತೆಯ ಸೆಟಲೈಟ್‌ ಕಾಂ‍ಪ್ಲೆಕ್ಸ್‌ನಲ್ಲಿ ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ಚುನಾವಣಾ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕುತಂತ್ರ ರಾಜಕಾರಣಿಗಳಲ್ಲಿ ಜೋಶಿ ಪ್ರಥಮರಾಗಿದ್ದಾರೆ. ಅವರಂತಹ ಕುತಂತ್ರಿಯನ್ನು ಜಿಲ್ಲೆಯಲ್ಲಿ ಹುಡುಕುತ್ತಾ ಹೋದರೂ ಸಿಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಲಿಂಗಾಯತರ ವಿರುದ್ಧ ಪ್ರಹ್ಲಾದ ಜೋಶಿ ಏನೆಲ್ಲ ಕುತಂತ್ರ ಮಾಡಿದ್ದಾರೆ ಎಂಬುದು ಸಮಾಜದವರಿಗೆ ಗೊತ್ತಾಗಿದೆ. ಲಿಂಗಾಯತ ಸಮಾಜಕ್ಕೆ ಬಿಜೆಪಿ ಏನು ಮಾಡಿದೆ ಎಂಬುದೂ ತಿಳಿದಿದೆ. ರಾಜ್ಯದಿಂದ ಕಳೆದ ಬಾರಿ 9 ಜನ ಲಿಂಗಾಯತರು ಸಂಸದರಾಗಿ ಆಯ್ಕೆಯಾಗಿದ್ದರೂ ಸಹ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ ಎಂದು ಆರೋಪಿಸಿದರು.

ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಚಿತ್ರ ಅಳವಡಿಕೆ, ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಆರಂಭ ಹಾಗೂ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ವಿವಿ ಎಂದು ನಾಮಕರಣವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಲಾಯಿತು ಎಂದು ಹೇಳಿದರು.

ದೇಶದಲ್ಲಿ ವಿರೋಧ ಪಕ್ಷಗಳ ಮುಖಂಡರನ್ನು ಹಣಿಯಲು ಬಿಜೆಪಿ ಪ್ರಾಯೋಜಿತ ಐಟಿ ದಾಳಿ ಎಲ್ಲೆಡೆ ನಡೆಯುತ್ತಿವೆ. ಬಿಜೆಪಿಯವರು ದುಡ್ಡಿಲ್ಲದೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ ಎಂದರು.

ನಿಮ್ಮ ಮೇಲೂ ಐಟಿ ದಾಳಿ ನಿರೀಕ್ಷೆ ಇದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಜೋಶಿ ಅವರ ಬಳಿ ಇರುವಂತೆ ನನ್ನ ಬಳಿ ಯಾವುದೇ ಲೇಔಟ್‌ಗಳು, ಇಂಡಸ್ಟ್ರೀಸ್‌ಗಳಿಲ್ಲ. ನಾನೇನಿದ್ದರೂ ಹಾಲು ಹಿಂಡಿ, ಗೊಬ್ಬರ ಮಾರಾಟ ಮಾಡುವವ. ಹೀಗಾಗಿ ಐಟಿ ದಾಳಿ ನಡೆದರೆ ಏನು ಸಿಗುತ್ತದೆ’ ಎಂದು ಮರು ಪ್ರಶ್ನಿಸಿದರು.

ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದು ಮೋದಿ ಹೇಳಿದರು. ಆದರೆ, ಫಸಲ್‌ ಬೀಮಾ ಯೋಜನೆಯಡಿ ರೈತರ ಕೋಟ್ಯಂತರ ರೂಪಾಯಿ ಲೂಟಿ ಹೊಡೆದರು. ಸ್ವಾಮಿನಾಥನ್‌ ವರದಿ ಜಾರಿಗೆ ಕ್ರಮಕೈಗೊಳ್ಳಲಿಲ್ಲ. ಬರದಿಂದ ತತ್ತರಿಸಿದ ರೈತರ ಸಾಲ ಮನ್ನಾ ಮಾಡಲಿಲ್ಲ. ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದ್ದನ್ನೂ ಮೋದಿ ಟೀಕಿಸಿದರು. ಅವರ ಸರ್ಕಾರವು ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಎಐಸಿಸಿ ಕಾರ್ಯದರ್ಶಿ ಯಶೋಮತಿ ಠಾಕೂರ, ಲಿಡ್ಕರ್‌ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಎ.ಎಂ.ಹಿಂಡಸಗೇರಿ, ಅನ್ವರ್‌ ಮುಧೋಳ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT