ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಹುಬ್ಬಳ್ಳಿ: ಗಲಭೆ ರಾತ್ರಿ 12 ಸಾವಿರಕ್ಕೂ ಹೆಚ್ಚು ಮೊಬೈಲ್ ಕರೆ

Last Updated 24 ಏಪ್ರಿಲ್ 2022, 11:17 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿ ಗಲಭೆ ನಡೆದ ದಿನವಾದ ಶನಿವಾರ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಸುತ್ತಲಿನ ಐದು ಮೊಬೈಲ್‌ ಟವರ್‌ಗಳಲ್ಲಿ ರಾತ್ರಿ 8 ರಿಂದ 12ರವರೆಗಿನ ಸಮಯದಲ್ಲಿ ಎಂದಿಗಿಂತ ದುಪ್ಪಟ್ಟು ಕರೆಗಳು ದಾಖಲಾಗಿವೆ.

ಠಾಣೆ ಸುತ್ತ–ಮುತ್ತಲಿನ ಕೆಲವು ಕಟ್ಟಡಗಳಲ್ಲಿ ವಿವಿಧ ಕಂಪನಿಗಳ ಸಿಗ್ನಲ್‌ ಟವರ್‌ಗಳಿದ್ದು, ಗಲಭೆ ವೇಳೆ ದಾಖಲಾದ ಕರೆಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಆ ಮಾಹಿತಿ ಸಂಗ್ರಹಕ್ಕಾಗಿಯೇ ಪ್ರತ್ಯೇಕ ತಂಡ ರಚಿಸಲಾಗಿದೆ.

ನಿತ್ಯ ರಾತ್ರಿ ಆರು ಸಾವಿರ ಕರೆಗಳು ಠಾಣಾ ಸುತ್ತಮುತ್ತಲಿನ ಟವರ್‌ಗಳಲ್ಲಿ ದಾಖಲಾಗುತ್ತಿದ್ದವು. ಆದರೆ, ಗಲಭೆ ನಡೆದ ದಿನ ರಾತ್ರಿ 12 ಸಾವಿರಕ್ಕೂ ಹೆಚ್ಚು ಕರೆಗಳು ದಾಖಲಾಗಿವೆ. ಗಲಭೆ ನಡೆಯುವ ಸ್ಥಳಕ್ಕೆ ಜನರನ್ನು ಕರೆಯಲು ಕರೆ ಮಾಡಲಾಗಿದೆಯೇ? ಭಯಗೊಂಡ ಸಾರ್ವಜನಿಕರು, ಗಲಭೆ ಕುರಿತು ಮಾಹಿತಿ ನೀಡಲು ತಮ್ಮ ಪರಿಚಯದರು ಹಾಗೂ ಸಂಬಂಧಿಕರಿಗೆ ಕರೆ ಮಾಡಿದ್ದರೇ ಎನ್ನುವ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ವಿದ್ಯುತ್‌ ವ್ಯತ್ಯಯ: ಗಲಭೆ ವೇಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು ಪೊಲೀಸರ ಅನುಮಾನ ಹೆಚ್ಚಿಸಿದೆ. ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

ವಿದ್ಯುತ್ ಸರಬರಾಜು ವ್ಯತ್ಯಯದ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಲ್ಲಿರುವ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯ ಸಮೀಪದಲ್ಲಿರುವ ಅರವಿಂದ ನಗರ ಭಾಗದಿಂದ ಬಂದ ಉದ್ರಿಕ್ತರ ಗುಂಪು ಠಾಣೆಯ ಸನಿಹವಿರುವ ಪರಿವರ್ತಕದಿಂದ ವಿದ್ಯುತ್ ಸರಬರಾಜಿಗೆ ಅಡ್ಡಿ ಮಾಡಿದ್ದರು ಎನ್ನುವ ಪ್ರಾಥಮಿಕ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಗಲಭೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಗಾಂಜಾ, ಅಫೀಮು‌ ಸೇವನೆ ಮಾಡಿದ್ದರು ಎಂದು ತಿಳಿದು ಬಂದಿದೆ. ಬಂಧಿತ ಕೆಲ ಆರೋಪಿಗಳು ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT