ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹಿಂದೂ ಧರ್ಮದ ಅಂತರ್‌ಶುದ್ಧಿ ಅವಶ್ಯಕ'- ವಿಶ್ವ ಹಿಂದೂ ಪರಿಷತ್‌ನ ಮಿಲಿಂದ್ ಪರಾಂಡೆ

Last Updated 3 ಜೂನ್ 2022, 8:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹಿಂದೂ ಧರ್ಮಕ್ಕೆ ಕಂಟಕವಾಗಿರುವ ಹೆಣ್ಣು ಭ್ರೂಣ ಹತ್ಯೆ, ಅಸ್ಪೃಶ್ಯತೆ ಆಚರಣೆಯಂತಹ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಿ, ಅಂತರ್‌ ಶುದ್ಧಿ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಸ್ವಯಂ ಶುದ್ಧೀಕರಣದ ಬಗ್ಗೆ ಸಮಾಜ ಚಿಂತಿಸಬೇಕಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್‌ ಕೇಂದ್ರೀಯ ಮಹಾಮಂತ್ರಿ ಮಿಲಿಂದ್‌ ಪರಾಂಡೆ ಹೇಳಿದರು.

ವಿಶ್ವ ಹಿಂದೂ ಪರಿಷತ್‌ ಉತ್ತರ ಕರ್ನಾಟಕ ಟ್ರಸ್ಟ್‌, ಪ್ರೇರಣಾ ಸೇವಾ ಸಂಸ್ಥೆಯು ಇಲ್ಲಿನ ಪುರುಷೋತ್ತಮ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಧರ್ಮಸಿರಿ ನೂತನ ಕಟ್ಟಡದ ಪ್ರವೇಶ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.

ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಿ ಹಿಂದೂ ಧರ್ಮವನ್ನು ಇನ್ನಷ್ಟು ಸಶಕ್ತಗೊಳಿಸಬೇಕಾಗಿದೆ. ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಿರುವುದು ಇತಿಹಾಸ. ಪುನಃ ವಿಭಜನೆಯಾಗುವ ಅಪಾಯ ಇದ್ದೇ ಇದೆ. ಈ ನಿಟ್ಟಿನಲ್ಲಿ ನಮ್ಮ ಧರ್ಮದ ಅನುಯಾಯಿಗಳನ್ನು ರಕ್ಷಣೆ ಮಾಡುವ ಅವಶ್ಯಕತೆ ಇದೆ. ಅದಕ್ಕಾಗಿ ಕಳೆದ 58 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್‌ ಧರ್ಮ ಹಾಗೂ ಅನುಯಾಯಿಗಳನ್ನು ರಕ್ಷಣೆ ಮಾಡುವಲ್ಲಿ ತೊಡಗಿದೆ ಎಂದು ನುಡಿದರು.

ಹಿಂದೂ ಧರ್ಮದ ಅಡಿಪಾಯವಾಗಿರುವ ವೈವಾಹಿಕ ಪದ್ಧತಿಯೂ ಇಂದು ಅಪಾಯದ ಸ್ಥಿತಿ ಎದುರಿಸುತ್ತಿದೆ. ಕೌಟುಂಬಿಕ ನ್ಯಾಯಾಲಯಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಶೇ 80ರಷ್ಟು ಪ್ರಕರಣಗಳು ಹಿಂದೂ ಕುಟುಂಬಗಳದ್ದಾಗಿವೆ. ಇವುಗಳಲ್ಲಿ ಹೆಚ್ಚಿನವು ವೈವಾಹಿಕ ಜೀವನಕ್ಕೆ ಸಂಬಂಧಿಸಿದ್ದಾಗಿವೆ. ವೈವಾಹಿಕ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ. ಧಾರ್ಮಿಕ ನಾಯಕರು, ಮುಖಂಡರು, ಸಂತರು ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಎರಡು ಸಾವಿರಗಳ ಇತಿಹಾಸ ಹೊಂದಿರುವ ಹಿಂದೂ ಧರ್ಮ ಅನೇಕ ಸವಾಲುಗಳನ್ನು ಎದುರಿಸಿದೆ. ಇತಿಹಾಸ ಕೆಣಕಿ ನೋಡಿದರೆ, ಈಗ ಧರ್ಮಕ್ಕೆ ಅನುಕೂಲಕರ ವಾತಾವರಣ ಇದೆ. ಗೌರವ ಸಮ್ಮಾನ್‌ ಸಿಗುತ್ತಿದೆ. ಮುಸ್ಲಿಂ ಸಂಘಟನೆಗಳು, ಕ್ರೈಸ್ತ್‌ ಮಿಷನರಿಗಳು ಹಾಗೂ ಕಮ್ಯುನಿಸ್ಟರು ನ್ಯಾಯ ಮಾರ್ಗದಲ್ಲಿ ಹಿಂದೂ ಧರ್ಮವನ್ನು ಮಣಿಸದೇ ಇದ್ದಾಗ ಹಿಂಸಾ ಮಾರ್ಗ ಅನುಸರಿಸುತ್ತಿದ್ದಾರೆ. ಇವುಗಳಿಗೆ ತಡೆಯೊಡ್ಡಬೇಕಾಗಿದೆ. ಶಸ್ತ್ರಧಾರಿ ದೇವರುಗಳನ್ನು ಪೂಜಿಸುವ ಹಿಂದೂಗಳು ನಿಶಸ್ತ್ರೀಕರಣ ಆಗಬಾರದು ಎಂದರು.

ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಭಾರತೀಯರಿಗೆ ಧರ್ಮ, ದೇಶ ಮೊದಲ ಆದ್ಯತೆ. ಇವೆರಡೂ ನಮಗೆ ಜೀವಾಳ ಇದ್ದಂತೆ. ಧರ್ಮವೇ ನಿಜವಾದ ಬದುಕು ಎಂದು ನುಡಿದರು.

ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಮಠಾಧೀಶರಲ್ಲಿ ಭಿನ್ನಾಭಿಪ್ರಾಯ ಮೂಡಿದರೆ ಸಮಾಜವನ್ನು ಹಿಡಿದಿಡುವುದು ಕಷ್ಟದ ಕೆಲಸ. ಮಠಾಧೀಶರನ್ನು ಹಾಗೂ ಹಿಂದೂ ಧರ್ಮವನ್ನು ಒಂದುಗೂಡಿಸುವ ಕೆಲಸವನ್ನು ವಿಎಚ್‌ಪಿ ಮಾಡುತ್ತಿದೆ. ನಾವೆಲ್ಲರೂ ಒಂದಾಗಿದ್ದರೆ ನಮ್ಮನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ದೇಶದಲ್ಲಿ ಧರ್ಮಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಗುತ್ತದೆ. ಯುವಕರಿಗೆ ಧರ್ಮ ಶಿಕ್ಷಣವನ್ನು ನೀಡಬೇಕು. ಧರ್ಮ ಸುರಕ್ಷಿತವಾಗಿದ್ದರೆ, ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ವಿಎಚ್‌ಪಿ ಮುಖಂಡ ಗೋಪಾಲಜಿ ಮಾತನಾಡಿ, ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಲಾಗಿದ್ದು, ಲಕ್ಷಾಂತರ ಜನ ಭಕ್ತರು ಭೇಟಿ ನೀಡುತ್ತಿದ್ದಾರೆ. ಅದೊಂದು ಪ್ರಮುಖ ಧಾರ್ಮಿಕ ಸ್ಥಳವಾಗಿ ಮಾರ್ಪಟ್ಟಿದೆ. ಪ್ರತ್ಯೇಕ ಟ್ರಸ್ಟ್‌ವೊಂದನ್ನು ರಚಿಸಿ, ಇದರ ಆಡಳಿತವನ್ನು ಒಪ್ಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಆರ್‌ಎಸ್‌ಎಸ್‌ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರ ಸಂಘಚಾಲಕ ವಿ.ನಾಗರಾಜ ಮಾತನಾಡಿದರು. ವಿಎಚ್‌ಪಿ ಪ್ರಾಂತ ಕಾರ್ಯದರ್ಶಿ ಕೆ.ಗೋವರ್ಧನರಾವ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT