ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯನ, ವಾದನ, ನರ್ತನದ ಸಮ್ಮಿಲನ

ಸಿತಾರ್‌ರತ್ನ ರಹೀಮತ್ ಖಾನ್ ಅವರ 68ನೇ ಪುಣ್ಯಸ್ಮರಣೆ ಸಂಗೀತೋತ್ಸವಕ್ಕೆ ತೆರೆ
Last Updated 5 ಡಿಸೆಂಬರ್ 2022, 4:10 IST
ಅಕ್ಷರ ಗಾತ್ರ

ಧಾರವಾಡ: ವಾರಾಂತ್ಯ ಭಾನುವಾರದ ಸಂಜೆಯ ಸೂರ್ಯ ಮುಳುಗುವ ಹೊತ್ತಿಗೆ ಹೊರಹೊಮ್ಮಿದ ಯುಗಳ ಗಾಯನ, ದ್ವಂದ್ವ ವಾದನದ ನಾದ ಲೀಲೆಯೊಂದಿಗೆ ಸಿತಾರ್ ರತ್ನ ರಹೀತಮ್‌ ಖಾನ್ ಅವರಿಗೆ ಸ್ಮರಣೆಯ ಸಂಗೀತೋತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿತು.

ಸಿತಾರ್‌ರತ್ನ ಸಮಿತಿಯು ಉಸ್ತಾದ್ ರಹೀಮತ್ ಖಾನ್ ಅವರ 68ನೇ ಪುಣ್ಯಸ್ಮರಣೆ ಅಂಗವಾಗಿ ನಗರದ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಂಗೀತೋತ್ಸವದಲ್ಲಿ ಗಾಯನ, ವಾದನ ಹಾಗೂ ನರ್ತನಗಳು ಮೇಳೈಸಿದವು. ಶುಕ್ರವಾರ ಹಾಗೂ ಶನಿವಾರ ಸಂಜೆಗಷ್ಟೇ ಸೀಮಿತವಾಗಿದ್ದ ಸಂಗೀತೋತ್ಸವ, ಭಾನುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಂಗೀತದ ರಸದೌತಣ ಬಡಿಸಿತು.

ಭಾನುವಾರದ ಮೊದಲ ಕಛೇರಿ ರಯೀಸ್ ಖಾನ್ ಅವರು ಸಾಲಗ ವರಾಲಿ ತೋಡಿ ರಾಗದೊಂದಿಗೆ ತಮ್ಮ ಕಛೇರಿ ಆರಂಭಿಸಿದರು. ಕಬೀರರ ಭಜನೆ ಮೂಲಕ ನಾದಲೀಲೆಯಲ್ಲಿ ಶ್ರೋತೃತಗಳನ್ನು ತೇಲಿಸಿದರು. ಅಂತಿಮವಾಗಿ ‘ನರಜನ್ಮ ಬಂದಾಗ...’ ಎಂಬ ಪುರಂದರ ದಾಸರ ಕೀರ್ತನೆಯೊಂದಿಗೆ ಕಛೇರಿಗೆ ವಿರಾಮ ಹಾಡಿದರು.

ಇವರಿಗೆ ತಬಲಾದಲ್ಲಿ ಡಾ. ಉದಯ ಕುಲಕರ್ಣಿ. ಹಾರ್ಮೋನಿಯಂನಲ್ಲಿ ಗುರುಪ್ರಸಾದ ಹೆಗಡೆ ಸಾಥ್ ನೀಡಿದರು.

ನಂತರದ್ದು ಬೆಂಗಳೂರಿನ ವಿದುಷಿ ಡಾ. ಪ್ರಿಯಾ ಗಣೇಶ, ವಿದ್ವಾನ್ ಅನಿಲ್ ಕುಮಾರ್, ಅವನಿ ಹಾಗೂ ಶಾಲೋರ್ವಿ ಅವರ ಭರತನಾಟ್ಯ ಪ್ರದರ್ಶನ. ನರ್ತನದಲ್ಲೂ ಕೃಷ್ಣದ್ದೇ ಧ್ಯಾನ.

ಸಂಜೆಯ ಅವಧಿಯಲ್ಲಿ ಶಿವಮೊಗ್ಗದ ನೌಷಾದ್ ಮತ್ತು ನಿಷಾದ್ ಹರ್ಲಾಪುರ ಸಹೋದರರು ದ್ವಂದ್ವ ಗಾಯನದ ಮೂಲಕ ಸಭೆಯಲ್ಲಿ ನಾದಸುಧೆಯ ಹರಿಸಿದರು.ಮಧುವಂತಿ ರಾಗದೊಂದಿಗೆ ಆರಂಭವಾದ ದ್ವಂದ್ವ ಗಾಯನ ಹಲವು ಆಲಾಪಗಳೊಂದಿಗೆ ಸಂಗೀತ ಪ್ರಿಯರನ್ನು ರಂಜಿಸಿತು. ನಂತರ ಗುರುನಾನಕರ ಭಜನೆಯ ಮೂಲಕ ಕೇಳುಗರನ್ನು ಭಾವಪರವಶರನ್ನಾಗಿಸಿದರು.

ಇವರಿಗೆತಬಲಾದಲ್ಲಿ ಉಸ್ತಾದ್ ನಾಸೀರ್ ಅಹ್ಮದ್ ಹಾಗೂ ಹಾರ್ಮೋನಿಯಂನಲ್ಲಿ ಬಸವರಾಜ ಹಿರೇಮಠ ಸಾಥ್ ಸಂಗತ್ ನೀಡಿದರು.

ನಂತರ ನಡೆದದ್ದು ತಂತಿಗಳಿಂದ ಹೊರಹೊಮ್ಮಿದ ನಾದ ಲೀಲೆ.ಉಸ್ತಾದ್ ರಫೀಕ್ ಖಾನ್ ಅವರ ಸಿತಾರ್ ವಾದನದೊಂದಿಗೆ ಸತ್ಯೇಂದ್ರ ಸೋಲಂಕಿ ಅವರ ಸಂತೂರ್‌ ವಾದನ ಕೇಳುಗರ ಮನ ತಣಿಸಿತು. ಪಂ. ರಾಜೇಂದ್ರ ನಾಕೋಡ ಅವರ ತಬಲಾ ಮೋಡಿಯೂ ತಂತಿ ವಾದನದ ಆಲಾಪವನ್ನು ಇನ್ನಷ್ಟು ಇಂಪಾಗಿಸಿತು.

ದಿನದ ಕೊನೆ ಚರಣ ಮುಂಬೈನ್ ಪಂಡಿತ್ ಕೃಷ್ಣ ಭಟ್ ಅವರ ಗಾಯನಕ್ಕೆ ಮೀಸಲಾಗಿತ್ತು. ರಾಗ ನಟ ಕೇದಾರ್ ಮೂಲಕ ಕಛೇರಿ ಆರಂಭಿಸಿದ ಅವರು, ನಂತರ ರಾಗ ಸಹಾನದಲ್ಲಿ ಗೀತೆಗಳನ್ನು ಪ್ರಸ್ತುತಪಡಿಸಿದರು. ಇವರಿಗೆ ಪಂ. ರಘುನಾಥ ನಾಕೋಡ ಅವರು ತಬಲಾದಲ್ಲಿ ಮತ್ತು ಗುರುಪ್ರಸಾದ ಹೆಗಡೆ ಅವರು ಹಾರ್ಮೋನಿಯಂನಲ್ಲಿ ಸಮರ್ಥ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT