ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಪ್ಲಾಸ್ಟಿಕ್‌ ಮುಕ್ತ ರೈಲ್ವೆ ನಿಲ್ದಾಣಕ್ಕೆ ವಾಕಾಥಾನ್‌

Published:
Updated:
Prajavani

ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ನೈರುತ್ಯ ರೈಲ್ವೆಯ ಬುಧವಾರ ನಗರದಲ್ಲಿ ವಾಕಾಥಾನ್‌ ಹಮ್ಮಿಕೊಂಡಿತ್ತು.

ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮದಿನದ ಅಂಗವಾಗಿ ನೈರುತ್ಯ ರೈಲ್ವೆ ಸೆ. 11ರಿಂದ ಅ. 2ರ ತನಕ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ನಿತ್ಯ ಒಂದೊಂದು ಕಾರ್ಯಕ್ರಮ ಆಯೋಜಿಸಿದೆ. ಸ್ವಾತಂತ್ರೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಅ. 2ರಿಂದ ಪ್ಲಾಸ್ಟಿಕ್‌ ಮುಕ್ತ ಮಾಡಬೇಕು ಎಂದು ಕರೆ ನೀಡಿದ್ದಾರೆ. ಆದ್ದರಿಂದ ರೈಲ್ವೆ ಕೂಡ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದೆ.

ಡಿಆರ್‌ಎಂ ಕಚೇರಿಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ತನಕ ನಡೆದ ವಾಕಾಥಾನ್‌ನಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಹಾಗೂ ವಿದ್ಯಾರ್ಥಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್ ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪ್ಲಾಸ್ಟಿಕ್‌ ಬದಲು ಬಟ್ಟೆ ಚೀಲಗಳನ್ನು ಬಳಸುವಂತೆ ಪ್ರಯಾಣಿಕರಿಗೆ ಮನವಿ ಮಾಡಿಕೊಂಡರು. ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು.

ಬಳಿಕ ಅಜಯಕುಮಾರ್‌ ಸಿಂಗ್‌ ಗಾಲ್ಫ್‌ ಲಿಂಕ್‌ನಲ್ಲಿರುವ ಗಾಲ್ಫ್‌ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಧ್ಯಾನವಾಟಿಕಾ ಉದ್ಘಾಟಿಸಿದರು.

ನೈರುತ್ಯ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್, ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಬಿ.ಬಿ.ಸಿಂಗ್, ಹಿರಿಯ ಅಧಿಕಾರಿ ರಾಜೀವ್ ಸಕ್ಸೇನಾ, ಪ್ರಧಾನ ಮುಖ್ಯ ಮೆಕಾನಿಕಲ್‌ ಎಂಜಿನಿಯರ್‌ ಪಿ. ರವಿ ಕುಮಾರ್, ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಶಿವರಾಜಸಿಂಗ್‌, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯಾ, ವಿಭಾಗೀಯ ಹೆಚ್ಚುವರಿ ಮ್ಯಾನೇಜರ್‌ಗಳಾದ ಎಸ್‌.ಕೆ. ಝಾ, ಮುರಳಿಕೃಷ್ಣ, ವಿಭಾಗೀಯ ಪರಿಸರ ಅಧಿಕಾರಿ ಎಸ್‌.ಕೆ. ಭಟ್ಟಾಚಾರ್ಯ ಇದ್ದರು.

Post Comments (+)