ಸೋಮವಾರ, ಮೇ 16, 2022
30 °C

ತ್ಯಾಜ್ಯ ವಿಂಗಡಣೆ; ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪರಿಸರ ಕಾಯ್ದೆಯಲ್ಲಿ ತಿಳಿಸಿರುವಂತೆ ತ್ಯಾಜ್ಯ ಉತ್ಪಾದಕರೇ ತ್ಯಾಜ್ಯ ನಿರ್ವಹಣೆ ಹೊಣೆ ಹೊರಬೇಕು. ಪ್ರಾಥಮಿಕ ಹಂತದಲ್ಲಿ ಹಸಿರು, ಒಣ ಹಾಗೂ ವೈದ್ಯಕೀಯ ತ್ಯಾಜ್ಯ ವಿಂಗಡಣೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಹಾಗೂ ನ್ಯಾಯಮೂರ್ತಿ ಸುಭಾಶ್ ಬಿ. ಆಡಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಘನತ್ಯಾಜ್ಯ, ಕಟ್ಟಡ ತಾಜ್ಯ, ಜೀವ ವೈದ್ಯಕೀಯ ತಾಜ್ಯ ನಿರ್ವಹಣೆ ನಿಯಮಗಳು 2016ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರೈಲು ನಿಲ್ದಾಣ, ಸೇತುವೆಗಳು ಹಾಗೂ ಹಳಿಗಳ ಬಳಿ ಸಾರ್ವಜನಿಕರು ತ್ಯಾಜ್ಯಗಳನ್ನು ಸುರಿಯುತ್ತಾರೆ. ಗುಣಮಟ್ಟದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಸಾರ್ವಜನಿಕರು ಪ್ರಯಾಣದ ಅವಧಿಯಲ್ಲಿ ಪ್ಲಾಸ್ಟಿಕ್ ಬಳಸದಂತೆ ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ?’ ಎಂದು ನೈರುತ್ಯ ರೈಲ್ವೆಯ ಮುಖ್ಯ ವ್ಯವಸ್ಥಾಪಕರನ್ನು ನ್ಯಾಯಮೂರ್ತಿ ಪ್ರಶ್ನಿಸಿದರು.

‘ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕುರುಡುತನ ಪ್ರದರ್ಶಿಸುವಂತಿಲ್ಲ. ನಿಲ್ದಾಣಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಿ, ನಿಯಮ ಮೀರಿದವರಿಗೆ ದಂಡ ವಿಧಿಸಬೇಕು. ತಿಂಗಳಿಗೆ 300 ಟನ್ ತ್ಯಾಜ್ಯ ಉತ್ಪಾದಿಸುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಹೊಂದಿರಬೇಕು’ ಎಂದು ಸೂಚಿಸಿದರು.

‘ಸಂಸ್ಕರಣೆಗೊಳ್ಳದ ಯಾವ ಕಸ ಭೂಮಿಗೆ ಸೇರಬಾರದು. ಮಹಾನಗರ ಪಾಲಿಕೆ ಇದರ ಬಗ್ಗೆ ಕ್ರಮ ವಹಿಸಬೇಕು. ಕಟ್ಟಡ ಪರವಾನಗಿ ಸಂದರ್ಭದಲ್ಲಿ ಕಟ್ಟಡ ತ್ಯಾಜ್ಯಗಳ ವಿಲೇವಾರಿ ಬಗ್ಗೆ ಮನೆಗಳ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಬೇಕು. ಹಳೇ ಕಟ್ಟಡ ತೆರವುಗೊಳಿಸಿದ ಸಂದರ್ಭದಲ್ಲಿ ಬರುವ ಮರುಬಳಕೆ ವಸ್ತುಗಳನ್ನು ಹೊಸ ನಿರ್ಮಾಣದ ಸಂದರ್ಭದಲ್ಲಿ ಬಳಸಬೇಕು’ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌, ಜಿಲ್ಲಾ ಪಂಚಾಯ್ತಿ ಸಿಇಒ ಬಿ.ಸುಶೀಲಾ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹಮದ್, ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನಕರ, ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯಕುಮಾರ ಕಡಕಬಾವಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು