ಶನಿವಾರ, ಮಾರ್ಚ್ 6, 2021
18 °C

ಜೀವ ಜಲವೂ... ಜನರ ಜೀವವೂ...

ಇ.ಎಸ್‌. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಒಂದೆಡೆ ಈಗಲೋ ಆಗಲೋ ಒಡೆಯುತ್ತದೆ ಎಂಬ ಭೀತಿಯಿಂದಲೇ ಬದುಕುತ್ತಿರುವ ಜನ, ಮತ್ತೊಂದೆಡೆ ಬಹಳಾ ವರ್ಷಗಳ ನಂತರ ತುಂಬಿದ ಕೆರೆಯಲ್ಲಿ ನೀರು ಉಳಿಸಿಕೊಳ್ಳುವ ಅಧಿಕಾರಿಗಳ ಪ್ರಯಾಸ. ಇದರಲ್ಲಿ ಯಾವುದು ಮುಖ್ಯ ಎನ್ನುವುದು ಇಲ್ಲಿನ ಜನರ ಪ್ರಶ್ನೆ.

ಅಳ್ನಾವರ ತಾಲ್ಲೂಕಿನ ಕಡಬಗಟ್ಟಿ ಗ್ರಾಮದಲ್ಲಿರುವ ಹೂಲಿಕೆರೆ ಕೋಡಿಬಿದ್ದು ಸತತವಾಗಿ 4 ದಿನಗಳಿಂದಲೂ ಉಕ್ಕಿಹರಿಯುತ್ತಲೇ ಇದೆ. ಕೆರೆ ಒಡೆದರೆ ಕೆಳಗಿನ 600ಕ್ಕೂ ಹೆಚ್ಚು ಎಕರೆ ಪ್ರದೇಶ ಜಲಾವೃತವಾಗಲಿದೆ ಎಂದು ಅಧಿಕಾರಿಗಳ ಹೇಳಿಕೆ ಜನರಲ್ಲಿ ಭೀತಿ ಮೂಡಿಸಿದೆ. ಇಂಥ ಸಂದರ್ಭದಲ್ಲಿ ಜನ ಮುಖ್ಯವೋ, ಜಲ ಮುಖ್ಯವೋ ಎಂಬ ತಾರ್ಕಿಕ ಪ್ರಶ್ನೆಯನ್ನು ಮುಂದಿಟ್ಟಿರುವ ನಾಗರಿಕರು, ಕೆರೆ ಕೋಡಿಯ ಸ್ವಲ್ಪ ಭಾಗವನ್ನು ಒಡೆಯುವಂತೆ ಪಟ್ಟುಹಿಡಿದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅಳ್ನಾವರದ ನಾಗರಿಕ ಎಸ್‌.ವಿ.ಸೊಪ್ಪಿನ್, ‘ಕೋಡಿಬಿದ್ದಿರುವ ಕೆರೆಯ ನೀರು ರಭಸದಿಂದ ಹರಿಯುತ್ತಿದ್ದು, ಇದು ಒಡೆಯಲಿದೆ ಎಂದು ಅಧಿಕಾರಿಗಳು ಭೀತಿ ಹುಟ್ಟಿಸಿ ಸ್ಥಳಾಂತರಿಸಿದ್ದಾರೆ. ಇಂಥ ಭಯದಲ್ಲಿ ಬದುಕುವುದಕ್ಕಿಂತ ಬಾಂದಾರಿನ ಒಂದಷ್ಟು ಭಾಗವನ್ನು ಒಡೆದು ಕೆರೆಯನ್ನು ಖಾಲಿ ಮಾಡುವುದೇ ಸೂಕ್ತ’ ಎಂದರು.

ಅಳ್ನಾವರ ಪುರಸಭೆಯ ಮಾಜಿ ಅಧ್ಯಕ್ಷ ಎಂ.ಸಿ.ಹಿರೇಮಠ ಮಾತನಾಡಿ, ‘51 ಚದರ ಕಿಲೋಮೀಟರ್‌ನಷ್ಟು ಜಲಾನಯನ ಪ್ರದೇಶ ಹೊಂದಿರುವ ಈ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿದೆ. ಆದರೆ ಅಧಿಕಾರಿಗಳು ಇಷ್ಟು ದಿನ ಇತ್ತ ಮುಖವನ್ನೇ ಹಾಕಿಲ್ಲ. ನೀರಿನ ಮಟ್ಟ ಏರುತ್ತಿದ್ದರೂ, ಅದರ ಮಾಹಿತಿಯೇ ಇಲ್ಲದ ಅಧಿಕಾರಿಗಳು, ನೀರು ಹೊರಬಿಡುವ ಗೇಟುಗಳನ್ನು ತೆರೆದಿರಲಿಲ್ಲ. ನಂತರ ಅದನ್ನು ತೆಗೆಯಲು ಸಾಧ್ಯವಾಗದೆ ಜನರು ಪ್ರಾಣ ಭೀತಿ ಎದುರಿಸುವಂತಾಗಿತ್ತು’ ಎಂದರು.

‘ಎನ್‌ಡಿಆರ್‌ಎಫ್ ತಂಡ ಬಂದು ಗೇಟುಗಳನ್ನು ತೆರೆಯದಿದ್ದರೆ ಪರಿಸ್ಥಿತಿ ಗಂಭೀರವಿತ್ತು. ಆದರೆ ಎಷ್ಟೋ ವರ್ಷಗಳಿಂದ ತೆರೆಯದ ಜಾಮ್ ಆಗಿದ್ದ  ಗೇಟುಗಳನ್ನು ತೆರೆಯಲು ಅಗತ್ಯವಿದ್ದ ಗ್ರೀಸ್ ನೀಡಲು ಮೂರು ಗಂಟೆ ತೆಗೆದುಕೊಂಡಿದ್ದಾರೆ ಎಂದರೆ ಕೆರೆ ಸಂರಕ್ಷಿಸುವ ಇವರ ಪ್ರೀತಿ ಹೇಗಿದೆ ಎಂಬುದು ಅರ್ಥವಾಗುತ್ತದೆ. ಸದ್ಯ ಮಳೆ ಕಡಿಮೆಯಾಗಿರುವುದರಿಂದ ಕೆರೆ ಒಡೆಯುವ ಭೀತಿ ಇಲ್ಲದಿರಬಹುದು. ಆದರೆ ಇದನ್ನು ಈಗಲೇ ಸರಿಪಡಿಸಿ, ಭವಿಷ್ಯದಲ್ಲಿ ಎದುರಾಗಬಹುದಾದ ಜಲಸಂಕಷ್ಟವನ್ನು ನೀಗಿಸುವ ಕಡೆ ಗಮನ ನೀಡಬೇಕು’ ಎಂದು ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ದೇವರಾಜ ಶಿಗ್ಗಾವಿ, ‘ಸದ್ಯ ಮಳೆ ಕಡಿಮೆಯಾಗಿರುವುದರಿಂದ ಕೆರೆ ಒಡೆಯುವ ಭೀತಿ ಇಲ್ಲ. ಆದರೆ ಮತ್ತೆ ಮಳೆಯಾಗಿ ನೆರೆ ಬಂದರೆ ಕೆರೆ ಒಡೆಯದಂತೆ ಮರಳಿನ ಚೀಲಗಳನ್ನು ಇಡಲಾಗಿದೆ. ಆದರೆ ಕೆರೆ ಒಡೆದು ಖಾಲಿ ಮಾಡಿದರೆ ಕಳೆದುಕೊಂಡ ನೀರು ಮತ್ತೆ ಸಿಗದು. ಹೀಗಾಗಿ ಸಾಧ್ಯವಾದಷ್ಟು ಕೆರೆ ಮತ್ತು ನೀರು ಉಳಿಸುವ ಪ್ರಯತ್ನ ನಡೆಸಿದ್ದೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು