ಶನಿವಾರ, ಫೆಬ್ರವರಿ 27, 2021
28 °C

ರೈಲ್ವೆ ಹಳಿ ಮೇಲೆ ನೀರು: ಮಾರ್ಗ ಬದಲಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಗೋಕಾಕ್–ಪಾಶ್ಚಾಪುರ ಬಳಿ ರೈಲಿನ ಹಳಿ ಮೇಲೆ ಮಾರ್ಕಂಡೇಯ ನದಿ ನೀರು ಹರಿದ ಕಾರಣ ಲೋಕಮಾನ್ಯ ತಿಲಕ್‌–ಹುಬ್ಬಳ್ಳಿ ಎಕ್ಸ್‌ಪ್ರೆಸ್‌ ರೈಲನ್ನು ಪುಣೆಯಿಂದ ಸೊಲ್ಲಾಪುರ, ಹೂಟಗಿ, ಗದಗ ಮಾರ್ಗಕ್ಕೆ ಬದಲಾವಣೆ ಮಾಡಲಾಯಿತು.

ಲೋಂಡಾ–ಮೀರಜ್‌ ಮೂಲಕ ಸಾಗಬೇಕಿದ್ದ ಸಂಪರ್ಕಕ್ರಾಂತಿ ಮತ್ತು ವಾಸ್ಕೊ–ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲನ್ನು ಗದಗ–ಹೂಟಗಿ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ ಮಾಡಲಾಯಿತು.

ಬೆಳಗಾವಿ–ದೇಸೂರು ಪ್ಯಾಸೇಂಜರ್‌ ರೈಲನ್ನು ಬೆಳಗಾವಿ–ದೇಸೂರು ನಡುವೆ ರದ್ದು ಮಾಡಲಾಗಿತ್ತು. ಬೆಳಗಾವಿ–ಮೀರಜ್‌ ಪ್ಯಾಸೇಂಜರ್‌ ರೈಲಿನ ಸಂಚಾರವನ್ನು ಬೆಳಗಾವಿ–ಘಟಪ್ರಭಾ ನಡುವೆ, ಮೀರಜ್‌–ಬೆಳಗಾವಿ ಪ್ಯಾಸೇಂಜರ್‌ ರೈಲಿನ ಸಂಚಾರವನ್ನು ಘಟಪ್ರಭಾ–ಬೆಳಗಾವಿ ನಡುವೆ ಸಂಚಾರ ರದ್ದು ಮಾಡಲಾಗಿತ್ತು.

ಪರಿಸ್ಥಿತಿ ಪರಿಶೀಲಿಸಿದ ಅಂಗಡಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಗುರುವಾರ ಹುಬ್ಬಳ್ಳಿ, ಬೆಳಗಾವಿ, ಗೋಕಾಕ್‌ ಮತ್ತು ಚಿಕ್ಕೋಡಿಯಲ್ಲಿ ಮಳೆಯಿಂದ ಆದ ಅನಾಹುತದ ಪರಿಶೀಲನೆ ನಡೆಸಿದರು.

ಸುರೇಶ ಅಂಗಡಿ ಬೆಂಗಳೂರು–ಬೆಳಗಾವಿ ತತ್ಕಾಲ್‌ ವಿಶೇಷ ರೈಲಿನ ಎಂಜಿನ್‌ನಲ್ಲಿ ಕುಳಿತು ಲೋಂಡಾದಿಂದ ಬೆಳಗಾವಿ ತನಕ ಪ್ರವಾಹ ಸ್ಥಿತಿ ನೋಡುವವರಿದ್ದರು. ಆದರೆ, ನಿರಂತರ ಮಳೆಯಿಂದ ರೈಲ್ವೆ ಸಂಚಾರದಲ್ಲಿ ವ್ಯತ್ಯಯವಾದ ಕಾರಣ ಅವರು ರಸ್ತೆ ಮೂಲಕ ತೆರಳಿದರು.

ಪ್ರವಾಹದಿಂದ ದುರಸ್ತಿಗೆ ಒಳಗಾದ ರೈಲ್ವೆ ಟ್ರ್ಯಾಕ್‌ಗಳ ನಿರ್ವಹಣಾ ಕಾರ್ಯವನ್ನು ‌ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್, ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್‌ ವೀಕ್ಷಿಸಿದರು. ಹುಬ್ಬಳ್ಳಿಯಿಂದ ಗುರುವಾರ ಕೂಡ ನೆರೆ ಸಂತ್ರಸ್ತರಿಗೆ ಸಾಮಗ್ರಿಗಳನ್ನು ಪೂರೈಸಲಾಯಿತು.

ಗೋಕಾಕ, ರಾಯಬಾಗ, ಬೆಳಗಾವಿಯಲ್ಲಿ ಅಜಯ ಕುಮಾರ್‌ ಸಿಂಗ್‌ ಸಂತ್ರಸ್ತರಿಗೆ ಆಹಾರ ಸಾಮಗ್ರಿ ವೀಕ್ಷಿಸಿದರು. ಅಲ್ಲಿನ ಪ್ರಯಾಣಿಕರೊಂದಿಗೆ ಊಟ ಮಾಡಿದರು. ಕಳೆದ ಎರಡೂವರೆ ದಿನಗಳಲ್ಲಿ 1,050 ಜನರಿಗೆ ವಸತಿ ಹಾಗೂ ಉಟದ ಸೌಲಭ್ಯ ಕಲ್ಪಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.