ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | 5 ದಿನಕ್ಕೊಮ್ಮೆ ನೀರು ಪೂರೈಕೆಗೆ ತಾಕೀತು; ಕಾಮಗಾರಿಗೆ ಮೇಯರ್ ಗಡುವು

ಪಾಲಿಕೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಚರ್ಚೆ
Last Updated 28 ಜುಲೈ 2022, 13:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರದಲ್ಲಿ ಮೂರು ತಿಂಗಳಿಂದ ಬಿಗಡಾಯಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರವೆಂಬಂತೆ, ಇನ್ನು ಮುಂದೆ ಐದು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕು ಎಂದು ಪಾಲಿಕೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.ಮೂರೂವರೆ ತಾಸು ನಡೆದ ಸಭೆಯಲ್ಲಿ, ಸಮಸ್ಯೆಯ ವಿವಿಧ ಆಯಾಮಗಳನ್ನು ಸದಸ್ಯರು ಬಿಚ್ಚಿಟ್ಟರು.

ಮಹಾನಗರಕ್ಕೆ ನೀರು ಪೂರೈಕೆಯ ಹೊಣೆ ಹೊತ್ತ ಎಲ್‌ ಆ್ಯಂಡ್ ಕಂಪನಿ, ಮಧ್ಯಸ್ಥ ಸಂಸ್ಥೆ ಕೆಯುಐಡಿಎಫ್‌ಸಿ, ಹಿಂದಿನ ಜಲಮಂಡಳಿ ಹಾಗೂ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲಾಗದೆ ಅಸಹಾಯಕತೆ ತೋರುತ್ತಿರುವ ಪಾಲಿಕೆ ಆಯುಕ್ತರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪರಿಹಾರಕ್ಕೆ ಗಡುವು, ದಂಡದ ಎಚ್ಚರಿಕೆ: ‘ಐದು ದಿನಕ್ಕೊಮ್ಮೆ ನೀರು ಪೂರೈಕೆ ಜೊತೆಗೆ, ಎಂಟು ದಿನಗಳೊಳಗೆ ಎಲ್‌ ಆ್ಯಂಡ್ ಟಿ ಕಂಪನಿಯವರು ಮಹಾನಗರ ಕೊಳವೆಬಾವಿಗಳನ್ನು ದುರಸ್ತಿ ಮಾಡಬೇಕು. ಇಲ್ಲದಿದ್ದರೆ, ಆಯುಕ್ತರೇ ವಲಯ ಕಚೇರಿ ಮೂಲಕ ದುರಸ್ತಿಗೆ ಮುಂದಾಗಬೇಕು’ ಎಂದುಮೇಯರ್ ಈರೇಶ ಅಂಚಟಗೇರಿ ಸೂಚಿಸಿದರು.

‘ಕುಡಿಯುವ ನೀರಿಗೆ ಕೊಳಚೆ ಮಿಶ್ರಣವಾಗಿ ಬರುತ್ತಿರುವುದನ್ನು ಗುರುತಿಸಿ, ಅಂತಹ ಪೈಪ್‌ಲೈನ್‌ ಅನ್ನು 30 ದಿನಗಳಲ್ಲಿ ದುರಸ್ತಿ ಮಾಡಬೇಕು. ಇಲ್ಲದಿದ್ದರೆ, ಮುಂದಾಗುವ ಅನಾಹುತಗಳಿಗೆ‌‌ ಕಂಪನಿಯೇ ಹೊಣೆ. ಜೊತೆಗೆ, ಮುಂದಿನ 15 ದಿನದೊಳಗೆ ನೀರು ಸಂಗ್ರಹಣಾಗಾರಗಳ ಕೆಲಸವನ್ನು ಆರಂಭಿಸಬೇಕು.‌ ಇಲ್ಲದಿದ್ದರೆ, ದಿನಕ್ಕೆ ₹25 ಸಾವಿರ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

33 ಕಡೆಯಷ್ಟೇ ಕಾರ್ಯಾಚರಣೆ:ನೀರು ಪೂರೈಕೆ ಮತ್ತು 24X7 ಕಾಮಗಾರಿ ಕುರಿತು ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಎಲ್ ಅಂಡ್‌ ಟಿ ಕಂಪನಿಯ ಗ್ರಾಹಕ ಸೇವಾ ವ್ಯವಸ್ಥಾಪಕಿ ಶಿಲ್ಪಾ ಜೋಶಿ, ‘ಒಪ್ಪಂದದ ಪ್ರಕಾರ ಡೆಮೊ ವಲಯಗಳು ಸೇರಿದಂತೆ 33 ವಾರ್ಡ್‌ಗಳಲ್ಲಿ ಮಾತ್ರ ನಾವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಜಲಮಂಡಳಿ ನೌಕರರು ನಮ್ಮಲ್ಲಿ ನೋಂದಣಿ ಮಾಡಿಕೊಳ್ಳದ ಹೊರತು, ಉಳಿದೆಡೆ ಮಾಡಲು ಬರುವುದಿಲ್ಲ’ ಎಂದರು.

ಅದಕ್ಕೆ ದನಿಗೂಡಿಸಿದ ಪಾಲಿಕೆ ಆಯುಕ್ತ, ‘ಎರಡು ವರ್ಷ ಕೆಲಸ ಮಾಡಿ ಎಂದು ಕೋರ್ಟ್‌ ಆದೇಶ ನೀಡಿದ್ದರೂ, ಸಿಬ್ಬಂದಿ ನೋಂದಣಿ ಮಾಡಿಕೊಳ್ಳದಿದ್ದರಿಂದ ಸಮಸ್ಯೆ ಬಿಗಡಾಯಿಸಿದೆ. ಅದಕ್ಕಾಗಿ ಕೋರ್ಟ್ ಮೊರೆ ಹೋಗಿದ್ದೇವೆ’ ಎಂದು ಹೇಳಿದರು.

ಲೋಕಲ್ ಖರೀದಿ:24X7 ಯೋಜನೆಯ ಕಾಮಗಾರಿಗಳಿಗೆ ಅಗತ್ಯವಿರುವ ಪರಿಕರಗಳನ್ನು ಕಂಪನಿಗಳ ಬದಲು, ಸ್ಥಳೀಯರಿಂದ ಖರೀದಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಪರಿಕರಗಳನ್ನು ಪರಿಶೀಲಿಸಬೇಕು. ಇಲ್ಲದಿದ್ದರೆ, ಕಳಪೆ ಪರಿಕರವನ್ನೇ ಬಳಸಿ ಯೋಜನೆಯನ್ನು ಹಳ್ಳ‌ ಹಿಡಿಸುತ್ತಾರೆ ಎಂದು ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಒತ್ತಾಯಿಸಿದರು.

‘ಅನುದಾನ ಬಳಸಿಕೊಳ್ಳಿ’:‘ಪಾಲಿಕೆಗೆ ಆರ್ಥಿಕ ತೊಂದರೆ ಇರುವುದರಿಂದ ವಾರ್ಡ್ ಸದಸ್ಯರು ತಮ್ಮ ₹50 ಲಕ್ಷ ಅನುದಾನದಲ್ಲಿ ಕೊಳವೆಬಾವಿ ಕೊರೆಯಿಸಿಕೊಳ್ಳಬೇಕು’ ಎಂದರು. ಅದಕ್ಕೆ ಸದಸ್ಯರ ನಿರಂಜನಯ್ಯ ಹಿರೇಮಠ, ‘ನಿಮ್ಮ ಅನುದಾನದಿಂದ ಹಣ ಕೊಡಿ. ನೀರಿನ ಸಮಸ್ಯೆ ಬಗೆಹರಿಯದಿದ್ದರಿಂದ ನನ್ನನ್ನು ಆರಿಸಿ‌ ಕಳಿಸಿರುವ ಜನರು ಛೀಮಾರಿ ಹಾಕುತ್ತಿದ್ದಾರೆ’ ಎಂದು ಹೇಳಿದರು.

ಅಧಿಕಾರಿ ಕ್ಷಮೆ:‘ವಾಲ್‌ಮನ್‌ಗಳು ನೀರು ಬಿಟ್ಟರೂ, ಸುನೀಲ ಬಡಿಗೇರ ಎಂಬಅಧಿಕಾರಿ ‘ಯಾಕೆ ನೀರು ಬಿಟ್ರಿ’ ಎಂದು ವಾಲ್‌ಮನ್‌ಗಳಿಗೆ ಜೋರು ಮಾಡುತ್ತಾರೆ. ಈ ಬಗ್ಗೆ ಕೇಳಿದಾಗ, ನನ್ನೊಂದಿಗೆ ಮನಬಂದಂತೆ ಮಾತನಾಡಿದರು’ ಎಂದು ವಾರ್ಡ್ 26ರ ನೀಲವ್ವ ಅರವಳದ ದೂರಿದರು. ಆಗ ಸ್ಥಳದಲ್ಲಿದ್ದ ಅಧಿಕಾರಿ, ನೀಲವ್ವ ಹಾಗೂ ಸಭೆಯ ಕ್ಷಮೆ ಕೋರಿದರು.

ಚರ್ಚೆಗೆ ಉತ್ಸಾಹ: ಬಹುತೇಕ ಸದಸ್ಯರು ತಮ್ಮ ವಾರ್ಡ್‌ ಮಟ್ಟದಲ್ಲಿ ಎದುರಾಗಿರುವ ನೀರಿನ ಸಮಸ್ಯೆಯನ್ನು ಚರ್ಚಿಸಿದರು. ಮಹಿಳಾ ಸದಸ್ಯರು ಹೆಚ್ಚಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜ್ವಲಂತ ಸಮಸ್ಯೆಯ ಚರ್ಚೆಯ ಸಭೆಯಲ್ಲಿ ಶೇ 35ರಷ್ಟು ಸದಸ್ಯರು ಗೈರಾಗಿದ್ದರು.

ಕಲುಷಿತ ನೀರು ಪ್ರದರ್ಶನ
ತಮ್ಮ ವಾರ್ಡ್‌ನ ಕೆಲವೆಡೆ ಎರಡು ತಿಂಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದರೂ, ಅಧಿಕಾರಿಗಳು ಸಮಸ್ಯೆ ಪರಿಹರಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಬಾಟಲಿಗಳಲ್ಲಿ ತಂದಿದ್ದ ಕಲುಷಿತ ನೀರನ್ನು ಪ್ರದರ್ಶಿಸಿದರು. ‘ಅಧಿಕಾರಿಗಳು ಈ ನೀರು ಕುಡಿದರೆ, ನಾವೂ ಕುಡಿಯುತ್ತೇವೆ’ ಎಂದರು.

‘ನೀರಿನ ಸಂಪರ್ಕಕ್ಕಾಗಿ ಜಲಮಂಡಳಿಯವರು ಮಾಲೀಕರಿಂದ ಹಣ ಕಟ್ಟಿಸಿಕೊಂಡಿದ್ದಾರೆ. ಜೊತೆಗೆ ಕಾಮಗಾರಿಯ ಸಾಮಗ್ರಿಗಳು ಹಾಗೂ ಮೀಟರ್‌ ಸಹ ತರಿಸಿಕೊಂಡಿದ್ದಾರೆ. ಇದೊಂದು ವ್ಯವಸ್ಥಿತ ಹಗರಣವಾಗಿದ್ದು, ಇದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದರು.

ಆರೋಪಕ್ಕೆ ಪ್ರತಿಕ್ರಿಯಿಸಿದ ಜಲಮಂಡಳಿ ಅಧಿಕಾರಿ ಗುಡಿ, ‘ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಳಗಿನ ಹಂತದ ಅಧಿಕಾರಿಗಳು ತಪ್ಪು ಮಾಡಿರಬಹುದು. ನನ್ನದೂ ತಪ್ಪಾಗಿದ್ದರೆ ಶಿಕ್ಷೆ ಕೊಡಿ’ ಎಂದರು.

ವಾರದೊಳಗೆ ನೀರಿನ ಬಿಲ್: ಆಯುಕ್ತ
‘ನೀರಿನ ಬಳಕೆ ಆಧರಿಸಿ ಒಂದು ವಾರದೊಳಗೆ, ಯಾವುದೇ ಬಡ್ಡಿ ಇಲ್ಲದೆ ಎಲ್‌ ಆ್ಯಂಡ್ ಟಿ ಕಂಪನಿಯಿಂದ ಬಿಲ್ ಕೊಡಲಾಗುವುದು.ಐದು‌ ದಿನಕ್ಕೊಮ್ಮೆ ನೀರು‌ ಕೊಡಲು ಪ್ರಯತ್ನಿಸುತ್ತೇವೆ.‌ ನಗರದಲ್ಲಿ ಗುಣಮಟ್ಟದ ನೀರಿನ ಪೈಪ್‌ಗಳು ಮತ್ತು ಸಂಗ್ರಹಗಾರ ಇಲ್ಲ.‌ 40 ವರ್ಷದಷ್ಟು ಹಳೆಯ ಪೈಪ್‌ಲೈನ್‌ಗಳಲ್ಲಿ 2018ರಿಂದಲೂ ನೀರು ಸೋರಿಕೆಯಾಗುತ್ತಿದೆ. ಸದ್ಯ ಜನಸಂಖ್ಯೆ ಹೆಚ್ಚಾಗಿರುವ ಹಾಗೂ ವಿಸ್ತರಣಾ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಹೊಸದಾಗಿ ಪೈಪ್‌ಲೈನ್ ಹಾಕಲಾಗುತ್ತಿದೆ’ ಎಂದು ಆಯುಕ್ತರು ಹೇಳಿದರು.

ಸಭೆಯಲ್ಲಿ ಕೇಳಿಬಂದಿದ್ದು...
*ಸಭೆಯಲ್ಲಿ ಹಿಂದಿ ಮತ್ತು ‌ಇಂಗ್ಲಿಷ್‌ನಲ್ಲಿ ಮಾತಾಡಲು ಅವಕಾಶ ನೀಡಲ್ಲ. ಕನ್ನಡ ಗೊತ್ತಿಲ್ಲದಿದ್ದರೆ ತಿಳಿಸಿ, ಹೇಳಿ‌ ಕೊಡುವೆ: ತಿಪ್ಪಣ್ಣ ಮಜ್ಜಗಿ, ಸಭಾ ನಾಯಕ

* ನೀರಿನ ಸಮಸ್ಯೆ ಕುರಿತು ಪಾಲಿಕೆ ಸದಸ್ಯರು ಮತ್ತು ಸಾರ್ವಜನಿಕರ ಕರೆಗಳನ್ನು ಅಧಿಕಾರಿಗಳು ಸ್ವೀಕರಿಸದ ಅಧಿಕಾರಿಗಳನ್ನು ನೀರಿಲ್ಲದೆ ಕಡೆಗೆ ವರ್ಗಾಯಿಸಿ: ಮಲ್ಲಿಕಾರ್ಜುನ ಗುಂಡೂರ

* ಪಾಲಿಕೆಯ ಧಾರವಾಡದ ಅಧಿಕಾರಿಗಳು ಮೈಗೆ ಎಣ್ಣಿ ಹಚ್ಚಿಕೊಂಡು ನಿಂತಿದ್ದಾರೆ. ಏನು ಕೇಳಿದರೂ ಅಲ್ಲಿ ಹೋಗಿ, ಇಲ್ಲಿ ಹೋಗಿ ಅಂತಾರೆ: ಕವಿತಾ ಕಬ್ಬೇರ

*ಗುಡಿ ಅವರು ಜಲಮಂಡಳಿಗೆ ಬಂದಾಗಿನಿಂದ ಕರೆ ಸ್ವೀಕರಿಸುತ್ತಿಲ್ಲ. ಅವರೇನು ದೇವರಂತೆ ಗುಡಿಯಲ್ಲಿ ಇರುತ್ತಾರೊ.‌ ಇಂತಹ ಅಧಿಕಾರಿ ಬೇಕಾ? ತಕ್ಷಣ ವರ್ಗಾವಣೆ ಮಾಡಿ: ನಿರಂಜನಯ್ಯ ಹಿರೇಮಠ

* ಕೊಳೆಗೇರಿಯಲ್ಲಿ ವಾಸಿಸುವ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ ಹಾಗೂ ಪೌರ ಕಾರ್ಮಿಕರಿಗೆ ಉಚಿತವಾಗಿ ನೀರು ಕೊಡಿ: ಚಂದ್ರಕಲಾ ಮೇಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT