ಬುಧವಾರ, ಜೂನ್ 29, 2022
24 °C
ಐದು ಮನೆಗಳಿಗೆ ಭಾಗಶಃ ಹಾನಿ; ಮನೆಗಳಿಗೆ ನುಗ್ಗಿದ ನೀರು; ರಸ್ತೆ ಜಲಾವೃತ

ಹುಬ್ಬಳ್ಳಿ: ಕೋಡಿ ಹರಿದ ಉಣಕಲ್‌ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಲ್ಲಿನ ಉಣಕಲ್‌ನ ಚನ್ನಬಸವಸಾಗರ ಕೆರೆ ಶುಕ್ರವಾರ ಭರ್ತಿಯಾಗಿ ಕೋಡಿ ಹರಿದಿದೆ. ಹಳೇ ಹುಬ್ಬಳ್ಳಿಯಲ್ಲಿ ಮೂರು, ಉಣಕಲ್‌ ಮತ್ತು ಅಮರಗೋಳದಲ್ಲಿ ತಲಾ ಒಂದು ಮನೆ ಭಾಗಶಃ ಕುಸಿದಿವೆ.

ಕೆರೆ ಕೋಡಿ ನೀರು ರಾಜಕಾಲುವೆಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದಿದ್ದರಿಂದ ಕೆಳ ಭಾಗದ ದೇವಿನಗರ ಮತ್ತು ಜಗದೀಶನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ದೇವಿನಗರ ಸೇತುವೆ ಹತ್ತಿರ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿದ್ದು, ಕೋಡಿ ಹರಿದ ಹೆಚ್ಚುವರಿ ನೀರು ಕಟ್ಟಡವೊಂದರ ತಳಪಾಯಕ್ಕೆ ಸೇರುತ್ತಿತ್ತು. ಇದನ್ನು ಗಮನಿಸಿದ ಸಿಬ್ಬಂದಿ ಜೆಸಿಬಿ‌ ನೆರವಿನಿಂದ ನೀರಿನ ಹರಿವಿನ ಪಥವನ್ನು ಬೇರೆಡೆಗೆ ತಿರುಗಿಸಿದರು.

ಕೇಶ್ವಾಪುರದ ನವೀನ ಪಾರ್ಕ್‌ನಲ್ಲಿರುವ ಎರಡು ವಸತಿ ಸಮುಚ್ಚಯಗಳ ನೆಲಮಹಡಿಗಳಿಗೆ ಹಾಗೂ ಭದ್ರತಾ ಸಿಬ್ಬಂದಿ ಮನೆಗಳಿಗೆ ನೀರು ನುಗ್ಗಿತು.  ಇದರಿಂದಾಗಿ, ದೈನಂದಿನ ಸಾಮಗ್ರಿಗಳು ಹಾಗೂ ವಿದ್ಯುತ್ ಉಪಕರಣಗಳು ಹಾಳಾಗಿವೆ. ಬೈಕ್ ಮತ್ತು ಕಾರುಗಳು ಜಲಾವೃತಗೊಂಡವು. ಪಂಪ್‌ಸೆಟ್‌ ಮೂಲಕ ನೀರು ಹೊರಹಾಕುತ್ತಿದ್ದ ದೃಶ್ಯ ಕಂಡುಬಂತು.

ಆನಂದನಗರ, ಹಳೇ ಹುಬ್ಬಳ್ಳಿ, ದೇಶಪಾಂಡೆನಗರ, ದಾಜಿಬಾನ್‌ ಪೇಟೆ ಸೇರದಂತೆ ಕೆಲವು ಬಡಾವಣೆಗಳಲ್ಲಿರುವ ವಾಣಿಜ್ಯ ಸಂಕೀರ್ಣದ ನೆಲಮಹಡಿಗೆ ನೀರು ನುಗ್ಗಿತ್ತು. ಪಾಲಿಕೆ ಸಿಬ್ಬಂದಿ ಮತ್ತು ಸ್ಥಳೀಯರು ಪಂಪ್‌ಸೆಟ್‌ ಮೂಲಕ ನೀರು ಹೊರಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇಂಡಿಪಂಪ್‌ ವೃತ್ತದ ಬಳಿಯಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಮೈದಾನ ಮತ್ತು ಜೆ.ಸಿ. ನಗರದ ನೆಹರೂ ಮೈದಾನಲ್ಲಿ ನೀರು ನಿಂತಿತ್ತು. ಆನಂದನಗರ ರಸ್ತೆಯ ಗಣೇಶನಗರ ಬಡಾವಣೆಯಲ್ಲಿ ಮೊಣಕಾಲುವರೆಗೆ ನೀರು ನಿಂತಿದ್ದರಿಂದ ಸ್ಥಳೀಯರು ತೀವ್ರ ಪರದಾಡಿದರು. ಸ್ಥಳಕ್ಕೆ ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಭೇಟಿ ನೀಡಿ ಪರಿಶೀಲಿಸಿದರು.

‘ಪರಿಚಯಸ್ಥರ ಮನೆಯಲ್ಲಿ ರಾತ್ರಿ ಕಳೆದೆ’
‘ರಾತ್ರಿ ಒಂದು ಗಂಟೆ ಸಮಯಕ್ಕೆ ನೀರು ಒಮ್ಮಿಂದೊಮ್ಮೆಲೆ ನೆಲಮಹಡಿಯಲ್ಲಿ ಸಂಗ್ರಹವಾಯಿತು. ಮನೆಗೆ ನೀರು ನುಗ್ಗಿದ್ದರಿಂದ ಟಿವಿ, ರೆಫ್ರಿಜರೇಟರ್ ಸೇರಿದಂತೆ ಎಲ್ಲಾ ವಸ್ತುಗಳು ಹಾಳಾಗಿವೆ. ಒಂಬತ್ತು ತಿಂಗಳ ಮಗುವನ್ನು ಎತ್ತಿಕೊಂಡು ಮೊದಲ ಮಹಡಿಯ ಪರಿಚಯದವರೊಬ್ಬರ ಮನೆಯಲ್ಲಿ ರಾತ್ರಿ ಕಳೆದಿದ್ದೇವೆ’ ಎಂದು ನವೀನ ಪಾರ್ಕ್‌ನ ಎಸ್‌ಎಸ್‌ಎಸ್‌ ವಸತಿ ಸಮುಚ್ಚಯದ ಕಾವಲುಗಾರ ಯಲ್ಲಪ್ಪ ಶೆಟ್ಟಣ್ಣವರ ಅಳಲು ತೋಡಿಕೊಂಡರು.

‘ಪ್ರತಿವರ್ಷ ಮಳೆ ಬಂದಾಗಲೂ ಸಮುಚ್ಚಯದ ನೆಲಮಹಡಿಯಲ್ಲಿ ನೀರು ನಿಲ್ಲುತ್ತದೆ. ಮೇಲ್ಭಾಗದ ನೀರು ಹರಿದು ಬರುವುದಲ್ಲದೆ, ಚರಂಡಿಯ ಮ್ಯಾನ್‌ಹೋಲ್‌ ಬಂದ್ ಆಗುವುದರಿಂದ ಕೊಳಚೆ ನೀರು ಇಲ್ಲಿ ಸಂಗ್ರಹವಾಗುತ್ತದೆ. ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಸಮುಚ್ಚಯದ ನಿವಾಸಿ ಸರಳಾ ನಾಯಕ ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು