ಉಡುಗೊರೆ ನೀಡಲು ಕಾಯುತ್ತಿದ್ದೇವೆ

7
ಕೆಪಿಎಲ್‌: ಹುಬ್ಬಳ್ಳಿ ಟೈಗರ್ಸ್‌ ತಂಡದ ನಾಯಕ ವಿನಯ ಕುಮಾರ್‌ ಭರವಸೆ

ಉಡುಗೊರೆ ನೀಡಲು ಕಾಯುತ್ತಿದ್ದೇವೆ

Published:
Updated:
Deccan Herald

ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್) ಕ್ರಿಕೆಟ್‌ ಟೂರ್ನಿಯ ತವರಿನ ತಂಡ ಹುಬ್ಬಳ್ಳಿ ಟೈಗರ್ಸ್‌ ಪ್ರಶಸ್ತಿ ಗೆಲ್ಲಬೇಕು ಎಂದು ಇಲ್ಲಿನ ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ, ಆ ಕನಸು ಒಮ್ಮೆಯೂ ಈಡೇರಿಲ್ಲ. ಈ ಬಾರಿ ನಾವು ಪ್ರಶಸ್ತಿ ಜಯಿಸಿ ಹುಬ್ಬಳ್ಳಿಯ ಕ್ರಿಕೆಟ್‌ ಪ್ರೇಮಿಗಳಿಗೆ ಉಡುಗೊರೆ ಕೊಡುತ್ತೇವೆ ಎಂದು ಟೈಗರ್ಸ್‌ ತಂಡದ ನಾಯಕ ಆರ್‌. ವಿನಯ ಕುಮಾರ್‌ ಹೇಳಿದರು.

ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕೆಪಿಎಲ್‌ ಟೂರ್ನಿಯಿಂದ ಸಾಕಷ್ಟು ಆಟಗಾರರು ಬೆಳಕಿಗೆ ಬಂದಿದ್ದಾರೆ. ಐಪಿಎಲ್‌ ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಈ ಟೂರ್ನಿ ವೇದಿಕೆಯಾಗಿದೆ. ಆದ್ದರಿಂದ ಯುವ ಆಟಗಾರರು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದರು.

ಟೈಗರ್ಸ್‌ ತಂಡ ಹಿಂದಿನ ವರ್ಷದ ಟೂರ್ನಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ ಎರಡರಲ್ಲಷ್ಟೇ ಗೆಲುವು ಪಡೆದು, ಮೂರು ಪಂದ್ಯಗಳನ್ನು ಸೋತಿತ್ತು. ಮಳೆ ಬಂದ ಕಾರಣ ಒಂದು ಪಂದ್ಯದ ಫಲಿತಾಂಶ ಬಂದಿರಲಿಲ್ಲ. ಈ ತಂಡ 2015–16 ಮತ್ತು 2016–17ರ ಎರಡೂ ಆವೃತ್ತಿಗಳಲ್ಲಿ ಫೈನಲ್‌ ಬಂದು ಸೋತಿತ್ತು. ಇದರಿಂದ ತವರಿನ ಅಭಿಮಾನಿಗಳು ಬೇಸರಗೊಂಡಿದ್ದರು.

ಇದರ ಬಗ್ಗೆ ಪ್ರಸ್ತಾಪಿಸಿದ ವಿನಯ್‌ ‘ಎರಡು ಸಲ ಪ್ರಶಸ್ತಿ ಸನಿಹ ಬಂದು ಗೆಲ್ಲಲು ವಿಫಲರಾಗಿದ್ದೇವೆ. ಇದರಿಂದ ನನಗೂ ಬೇಸರವಿದೆ. ಆದರೆ, ಈ ಬಾರಿ ಹಾಗಾಗುವುದಿಲ್ಲ, ಈಗ ತಂಡದಲ್ಲಿ ಅನುಭವಿಗಳು ಹಾಗೂ ಹೊಸಬರು ಇದ್ದಾರೆ, ಕಠಿಣ ಅಭ್ಯಾಸ ನಡೆಸಿದ್ದೇವೆ. ಏಳನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಿದೆ’ ಎಂದರು.

ಕೆಎಸ್‌ಸಿಎ ಸಹ ಕಾರ್ಯದರ್ಶಿ ಸಂತೋಷ್‌ ಮೆನನ್‌ ಮಾತನಾಡಿ ‘ಮುಂಬರುವ ದಿನಗಳಲ್ಲಿ ಧಾರವಾಡ ವಲಯದಲ್ಲಿ ಹೆಚ್ಚು ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಕೆಪಿಎಲ್‌ ಟೂರ್ನಿಯ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಾರೆ’ ಎಂದು ತಿಳಿಸಿದರು.

ನಟಿ ರಾಗಿಣಿ ದ್ವಿವೇದಿ, ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಬಾಬಾ ಭೂಸದ, ಮಾಜಿ ಕ್ರಿಕೆಟಿಗ ರಘುರಾಮ್‌ ಭಟ್‌, ಕೆಪಿಎಲ್‌ ಟೂರ್ನಿಯ ಹುಬ್ಬಳ್ಳಿ ಪಂದ್ಯಗಳ ಉಸ್ತುವಾರಿ ಕೆ. ಮೆಹ್ತಾನಿ, ವಲಯ ಸಂಯೋಜನಾಧಿಕಾರಿ ಬಿ.ಕೆ. ರವಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !