ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಪ್ಯೂ; ಮಿಶ್ರ ಪ್ರತಿಕ್ರಿಯೆ

ಅಗತ್ಯ ಸೇವೆಗಳಿಗಷ್ಟೇ ಅವಕಾಶ, ಗ್ರಾಹಕರಿಗೆ ಕಾದ ವ್ಯಾಪಾರಿಗಳು
Last Updated 15 ಜನವರಿ 2022, 14:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ ಪ್ರಕರಣಗಳ ಏರಿಕೆಗೆ ನಿಯಂತ್ರಣ ಹೇರಲು ರಾಜ್ಯ ಸರ್ಕಾರ ಘೋಷಿಸಿರುವ ವಾರಾಂತ್ಯ ಕರ್ಪ್ಯೂಗೆ ನಗರದಲ್ಲಿ ಶನಿವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಹಾಲು, ತರಕಾರಿ, ಬೇಕರಿ, ಔಷಧ ಅಂಗಡಿಗಳು, ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಸೌಲಭ್ಯ, ಕಿರಾಣಿ ಅಂಗಡಿ ಹೀಗೆ ಅಗತ್ಯ ಸೌಲಭ್ಯಗಳಿಗಷ್ಟೇ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಇವುಗಳನ್ನು ತರಲು ಹೊರಬಂದ ಜನ ಪೊಲೀಸರನ್ನು ದಾಟಿ ಬರಲು ಪ್ರಯಾಸ ಪಡೆಬೇಕಾಯಿತು.

ಧಾರವಾಡ ಜಿಲ್ಲೆಯ ಗ್ರಾಮೀಣ ಪ್ರದೇಶ ಹಾಗೂ ಹೊರ ಜಿಲ್ಲೆಗಳ ಬಸ್‌ ಸಂಚಾರ ಎಂದಿಗಿಂತಲೂ ಕಡಿಮೆ ಪ್ರಮಾಣದಲ್ಲಿತ್ತು. ಕನಿಷ್ಠ ಅರ್ಧದಷ್ಟು ಸೀಟು ಭರ್ತಿಯಾಗುವ ತನಕ ಬಸ್‌ಗಳು ಹೊರಡುತ್ತಿರಲಿಲ್ಲ. ಹೀಗಾಗಿ ಪ್ರಯಾಣಿಕರು ಬಹಳಷ್ಟು ಹೊತ್ತು ನಿಲ್ದಾಣಗಳಲ್ಲಿಯೇ ಕಳೆಯಬೇಕಾಯಿತು. ಕೇಶ್ವಾಪುರ, ಹಳೇ ಹುಬ್ಬಳ್ಳಿ, ವಿದ್ಯಾನಗರ, ನವನಗರ ಹೀಗೆ ಬೇರೆ ಬೇರೆ ಕಡೆಯಿಂದ ಬಸ್‌ ನಿಲ್ದಾಣಕ್ಕೆ ಬರಲು ಪ್ರಯಾಣಿಕರು ಅಗತ್ಯ ಸೇವೆಗಳಿಗಾಗಿ ಹೋಗುತ್ತಿದ್ದ ವಾಹನಗಳ ಮೊರೆ ಹೋಗಬೇಕಾಯಿತು. ಅವಳಿ ನಗರಗಳ ನಡುವೆ ಬಿಆರ್‌ಟಿಎಸ್‌ ಬಸ್‌ಗಳ ಸಂಚಾರ ವಿರಳವಾಗಿತ್ತು.

ಮಕರ ಸಂಕ್ರಮಣ ಹಬ್ಬದಂದು ಸಾಮಾನ್ಯವಾಗಿ ಕುಟುಂಬದವರೆಲ್ಲ ಸೇರಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದು ರೂಢಿ. ಸಂಜೆ ತಮ್ಮ ಸಂಬಂಧಿಕರ ಹಾಗೂ ಸ್ನೇಹಿತರ ಮನೆಗೆ ಹೋಗಿ ಎಳ್ಳು, ಬೆಲ್ಲ, ಕುಸುರೆಳ್ಳು ಕೊಟ್ಟು ‘ಎಳ್ಳು ಬೆಲ್ಲ ತೊಗೊಂಡು ಒಳ್ಳೊಳ್ಳೆ ಮಾತಾಡ್ರಿ..’ ಎಂದು ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಳ್ಳುತ್ತಿದ್ದರು. ಆದರೆ, ವಾಹನಗಳ ಓಡಾಟಕ್ಕೆ ಅವಕಾಶವಿಲ್ಲದ ಕಾರಣ ಬಹಳಷ್ಟು ಜನ ತಮ್ಮ ಬಡಾವಣೆಗಳಲ್ಲಿರುವ ಪರಿಚಯದವರ ಮನೆಗಳಲ್ಲಿ ಹಬ್ಬದ ಸಂಪ್ರದಾಯದ ಆಚರಣೆ ಮುಗಿಸಿದರು.

ಶನಿವಾರ ಸಂಜೆ ಜನತಾ ಬಜಾರ್‌, ಶಿರೂರು ಪಾರ್ಕ್ ಸೇರಿದಂತೆ ಹಲವೆಡೆ ತರಕಾರಿ ಹಾಗೂ ಹಣ್ಣಿನ ವ್ಯಾಪಾರ ನಡೆದಿತ್ತು. ಆದರೆ, ಗ್ರಾಹಕರ ಸಂಖ್ಯೆ ಬೆರಳೆಣಿಕೆಯಷ್ಟ್ಟಿತ್ತು.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ತರಕಾರಿ ವ್ಯಾಪಾರಿ ಭೀಮಣ್ಣ ‘ಸಂಕ್ರಾತಿ ಇರುವ ಕಾರಣ ಈ ವಾರವಾದರೂ ಕರ್ಪ್ಯೂನಿಂದ ವಿನಾಯಿತಿ ಕೊಡಬೇಕಿತ್ತು. ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಸರಿಯಾಗಿ ವ್ಯಾಪಾರವೇ ನಡೆದಿಲ್ಲ. ಹಬ್ಬದ ಸಮಯದಲ್ಲಿಯೂ ಕರ್ಪ್ಯೂ ವಿಧಿಸಿದರೆ ಜೀವನ ಸಾಗಿಸುವುದು ಹೇಗೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT