ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪೈಪೋಟಿ

ಪಶ್ಚಿಮ ಪದವೀಧರರ ಕ್ಷೇತ್ರ; ನಾಯಕರಿಗೆ ಹೆಚ್ಚಿದ ತಲೆನೋವು
Last Updated 17 ಅಕ್ಟೋಬರ್ 2019, 7:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ 2020 ಜೂನ್‌ ಅಂತ್ಯದೊಳಗೆ ಚುನಾವಣೆ ನಡೆಯಬೇಕಿದೆ. ಮತದಾರರ ಪಟ್ಟಿ ರಚನೆಗೆ ಮುಂದಾಗುವ ಮೂಲಕ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ರಾಜಕೀಯ ಪಕ್ಷಗಳಲ್ಲಿಯೂ ಚಟುವಟಿಕೆಗಳು ಗರಿಗೆದರಿವೆ. ಈ ಕ್ಷೇತ್ರಕ್ಕೆ ಹಾಲಿ ಸದಸ್ಯರನ್ನು ಹೊಂದಿರುವ ಬಿಜೆಪಿಯಲ್ಲಿಯೂ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ.

ಹಾಲಿ ಸದಸ್ಯರಾಗಿರುವ ಎಸ್‌.ವಿ. ಸಂಕನೂರ ಅವರು ಮತ್ತೊಮ್ಮೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮುಂದಾಗುವ ಮೂಲಕ ಸ್ಪರ್ಧಿಸಲು ಸಿದ್ಧತೆ ಆರಂಭಿಸಿದ್ದಾರೆ. ಪಕ್ಷದ ಮುಖಂಡರು, ಮತ್ತೊಮ್ಮೆ ತಮಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಈ ಕ್ಷೇತ್ರದಿಂದ ನಾಲ್ಕು ಬಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಎಚ್‌.ಕೆ. ಪಾಟೀಲರನ್ನು ಸೋಲಿಸುವ ಮೂಲಕ ಬಿಜೆಪಿಗೆ ಗೆಲುವು ದೊರಕಿಸಿಕೊಟ್ಟಿದ್ದ ಮೋಹನ ಲಿಂಬಿಕಾಯಿ ಅವರೂ ಆಕಾಂಕ್ಷಿಯಾಗಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಅವರು, ಅವಕಾಶ ಸಿಕ್ಕರೆ ಒಂದು ಕೈ ನೋಡುವ ಉತ್ಸಾಹದಲ್ಲಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಲಘಟಗಿ ಕ್ಷೇತ್ರದಿಂದ ಪಕ್ಷವು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಇನ್ನೇನು ನಾಮಪತ್ರ ಸಲ್ಲಿಸಬೇಕು ಎನ್ನುವಾಗ ಸಿ.ಎಂ. ನಿಂಬಣ್ಣವರ ಹೆಸರು ಘೋಷಿಸಲಾಗಿತ್ತು. ವಿಧಾನ ಪರಿಷತ್‌ಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಅವರಿಗೆ ನ್ಯಾಯ ಒದಗಿಸಬೇಕು ಎಂಬುದು ಬೆಂಬಲಿಗರ ಆಗ್ರಹವಾಗಿದೆ.

ಹುಬ್ಬಳ್ಳಿ ಧಾರವಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ, ಧಾರವಾಡ ವಿಭಾಗದ ಸಂಘಟನಾ ಪ್ರಭಾರಿ ಲಿಂಗರಾಜ ಪಾಟೀಲ, ಶಿಕ್ಷಕರ ರಾಷ್ಟ್ರೀಯ ಸಂಘದ ಉಪಾಧ್ಯಕ್ಷ ಬಸವರಾಜ ಗುರಿಕಾರ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ಹಾವೇರಿ ಜಿಲ್ಲಾ ಬಿಜೆಪಿ ಮುಖಂಡ ಬೋಜರಾಜ ಕರೂದಿ ಆಕಾಂಕ್ಷಿಯಾಗಿದ್ದಾರೆ. ಈ ಪಟ್ಟಿಗೆ ದಿನದಿಂದ ದಿನಕ್ಕೆ ಹೊಸಬರು ಸೇರ್ಪಡೆಯಾಗುತ್ತಲೇ ಇದ್ದಾರೆ. ಪಕ್ಷದ ಹೈಕಮಾಂಡ್‌ ಹೊಸ ಮುಖವೊಂದಕ್ಕೆ ಮಣೆ ಹಾಕಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಪಕ್ಷದ ಮುಖಂಡರೊಬ್ಬರು

ಮುಖಂಡರಿಗೆ ತಲೆನೋವು: ಹಾಲಿ ಸದಸ್ಯರಿದ್ದಾಗಲೂ, ಆಕಾಂಕ್ಷಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಪಕ್ಷದ ಮುಖಂಡರ ತಲೆನೋವನ್ನು ಹೆಚ್ಚಿಸಿದೆ.

ಆಕಾಂಕ್ಷಿಗಳು ತಮ್ಮ ರಾಜಕೀಯ ನಾಯಕರ ಮೂಲಕ ಟಿಕೆಟ್‌ಗಾಗಿ ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಆದರೆ, ಪಕ್ಷದಲ್ಲಿ ಈಗ ರಾಷ್ಟ್ರೀಯ ಮುಖಂಡರ ನಿರ್ಧಾರವೇ ಅಂತಿಮ ಆಗುತ್ತಿರುವುದರಿಂದ ರಾಜ್ಯ ನಾಯಕರಿಗೂ ತಮ್ಮ ಬೆಂಬಲಿಗರಿಗೆ ಭರವಸೆ ನೀಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರ ಒಲುವೂ ಟಿಕೆಟ್‌ ಗಿಟ್ಟಿಸುವಲ್ಲಿ ಮುಖ್ಯವಾಗಲಿದೆ.

ಅಭಿಪ್ರಾಯ ಸಂಗ್ರಹ: ಕ್ಷೇತ್ರ ವ್ಯಾಪ್ತಿಯ ಹಾವೇರಿ, ಗದಗ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ಮುಖಂಡರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಕ್ಕಾಗಿ ಸಮಿತಿ ರಚನೆ ಮಾಡಲಾಗಿದೆ. ಎಂ.ಬಿ. ಭಾನುಪ್ರಕಾಶ್ ಅವರನ್ನು ಸಂಚಾಲಕರಾಗಿದ್ದರೆ, ಮಾ. ನಾಗರಾಜ ಹಾಗೂ ಕಳಕಪ್ಪ ಬಂಡಿ ಅವರನ್ನು ಸದಸ್ಯರಾಗಿದ್ದಾರೆ. ಭಾನುಪ್ರಕಾಶ್‌ ತಂಡ ಅಭಿಪ್ರಾಯ ಸಂಗ್ರಹ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT