ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿದೆ ಉಸ್ತುವಾರಿ ಸಚಿವರ ಕಚೇರಿ?: ಸಾರ್ವಜನಿಕರ ಸಮಸ್ಯೆಗಿಲ್ಲ ಪರಿಹಾರ

ಹಳೆಯ ಪ್ರಶ್ನೆಗೆ ಇಂದಿಗೂ ಸಿಗುತ್ತಿಲ್ಲ ಉತ್ತರ
ಅಕ್ಷರ ಗಾತ್ರ

ಧಾರವಾಡ: ‘ನನ್ನ ಕಚೇರಿ ಎಲ್ಲಿದೆ?’ ಹೀಗೆಂದು ಏ. 8ರಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸಭೆಯಲ್ಲಿ ಪ್ರಶ್ನಿಸಿದ್ದರು. ಜಿಲ್ಲೆಯ ಜನರೂ ಇದೀಗ ಅದನ್ನೇ ಹುಡುಕಿ ಸುಸ್ತಾಗಿದ್ದಾರೆ.

ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಲು ನಿತ್ಯ ಜಿಲ್ಲಾಧಿಕಾರಿ ಕಚೇರಿಗೆ ಎಡತಾಕುತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವರು ಎಲ್ಲಿ ಸಿಗುತ್ತಾರೆ ಅಥವಾ ಅವರ ಕಚೇರಿ ಎಲ್ಲಿದೆ ಎಂಬ ಉತ್ತರ ಯಾರಿಗೂ ಈವರೆಗೂ ಸಿಕ್ಕಿಲ್ಲ.

ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಾರ್ತಾ ಇಲಾಖೆ ಕಟ್ಟಡದ ನೆಲ ಮಹಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಆರಂಭಿಸಲಾಗಿತ್ತು. ವಿನಯ ಕುಲಕರ್ಣಿ, ಆರ್‌.ವಿ.ದೇಶಪಾಂಡೆ ಅವರು ಇದೇ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದ್ದರು. (ಸದ್ಯ ಈ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿ ಕಾರ್ಯ ನಿರ್ವಹಿಸುತ್ತಿದೆ). ಆದರೆ ನಂತರ ಉಸ್ತುವಾರಿ ವಹಿಸಿಕೊಂಡ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯಿಂದ ಕಾರ್ಯ ನಿರ್ವಹಿಸಿದರು. ಇಲ್ಲಿ ಕಚೇರಿ ಇದ್ದರೂ ಅದು ಕಾರ್ಯಾಚರಣೆಯಲ್ಲಿ ಇರಲಿಲ್ಲ. ಜಿಲ್ಲಾಧಿಕಾರಿ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ಸಭೆಗೆ ಹಾಜರಾಗುತ್ತಿದ್ದರು.

ನಂತರ ಸಚಿವರಾದ ಕೊಪ್ಪಳದ ಹಾಲಪ್ಪ ಆಚಾರ್ ಅವರು, ಏ. 8ರಂದು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ತಮ್ಮ ಕಚೇರಿಯನ್ನು ಶೀಘ್ರದಲ್ಲಿ ಹಾಗೂ ಸೂಕ್ತ ಜಾಗದಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.ಇದಕ್ಕೆ ಅಂದಿನ ಜಿಲ್ಲಾಧಿಕಾರಿ ಅವರೂ ಸಹಮತವನ್ನೂ ವ್ಯಕ್ತಪಡಿಸಿದ್ದರು. ಆದರೆ ಈವರೆಗೂ ಕಚೇರಿ ಆರಂಭವಾಗದೆ ಸಾರ್ವಜನಿಕರು ಪರದಾಡುವಂತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ, ‘ಜಿಲ್ಲಾ ಮಂತ್ರಿ ಎನ್ನುವುದು ಧಾರವಾಡ ಜಿಲ್ಲೆಗೆ ಹೆಸರಿಗೆ ಮಾತ್ರ ಸೀಮಿತ. ಹುಬ್ಬಳ್ಳಿ ನಾಯಕರೇ ಜಿಲ್ಲೆಯನ್ನು ನಿಯಂತ್ರಿಸುತ್ತಿರುವುದರಿಂದ ಔಪಚಾರಿಕವಾಗಿ ಹಾಲಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆಯಷ್ಟೇ’ ಎಂದರು.

‘ವಿವಿಧ ಯೋಜನೆಗಳ ಅನುದಾನದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಯಾವ ಮಾಹಿತಿಯೂ ಅವರಿಗಿಲ್ಲ. ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬ ಸಂಗತಿಯೂ ತಿಳಿದಿಲ್ಲ. ಅಧಿಕಾರಿಗಳು ನೀಡುವ ಅಂಕಿ ಅಂಶಗಳನ್ನು ಪರಿಶೀಲಿಸಲು ಅವರು ಸೀಮಿತರಾಗಿದ್ದಾರೆ. ಹೀಗಾಗಿ ಜನರು ಪರದಾಡುವುದರಲ್ಲಿ ಯಾವ ಸಂಶಯವೂ ಇಲ್ಲ’ ಎಂದು ಆರೋಪಿಸಿದರು.

ನವಲಗುಂದ ತಾಲ್ಲೂಕಿನ ಮಲ್ಲಿಕಾರ್ಜುನ ಎಂಬುವವರು ಪ್ರತಿಕ್ರಿಯಿಸಿ, ‘ಯೋಜನೆಗೆ ಸಂಬಂಧಿಸಿದಂತೆ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಬೇಕಿತ್ತು. ಆದರೆ ಅವರು ಎಲ್ಲಿ ಸಿಗುತ್ತಾರೆ, ಎಂದು ಸಿಗುತ್ತಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಗೊತ್ತಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗುವ ಮಾರ್ಗ ತಿಳಿಯುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT