ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಮರಕರ, ಮಹಿಷಿಗೆ ಟಿಕೆಟ್‌ ನಿರಾಕರಿಸಿದ್ದೇಕೆ?

ಆಂತರಿಕ ಗುದ್ದಾಟ, ನಾಯಕರ ಅವಕೃಪೆಗೆ ಪಾತ್ರರಾಗಿ ಟಿಕೆಟ್‌ ಕಳೆದುಕೊಂಡವರು
Last Updated 26 ಏಪ್ರಿಲ್ 2019, 10:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಆಂತರಿಕ ಗುದ್ದಾಟ, ನಾಯಕರ ಅವಕೃಪೆಯಿಂದಾಗಿ ಗೆಲ್ಲುವ ಅಭ್ಯರ್ಥಿಗಳಿಗೂ ಟಿಕೆಟ್‌ ನಿರಾಕರಿಸಿ ಅಚ್ಚರಿ ಮೂಡಿಸಿದ ಪ್ರಸಂಗಗಳು ನಡೆದಿವೆ.

1952ರಲ್ಲಿ ಮೊದಲ ಬಾರಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ದಂಡೇ ಕಾಂಗ್ರೆಸ್‌ ಪಕ್ಷದಲ್ಲಿತ್ತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಡಿ.ಪಿ. ಕರಮಕರ ಅವರಿಗೆ ಟಿಕೆಟ್‌ ಕೊಡಲಾಗಿತ್ತು. ಸರಳವಾಗಿ ಗೆಲುವು ಸಾಧಿಸಿದ್ದರು. 1957ರಲ್ಲಿಯೂ ಅವರಿಗೇ ನೀಡಲಾಯಿತು. ಮೊದಲ ಬಾರಿಗಿಂತ ಹೆಚ್ಚಿನ ಮತಗಳಿಂದ ಆಯ್ಕೆಯಾದರು.

1962ರಲ್ಲಿ ಚುನಾವಣೆ ವೇಳೆಗೆ ಧಾರವಾಡ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಆರಂಭವಾಗಿತ್ತು. ಕರಮಕರ ಅವರಿಗೆ ಟಿಕೆಟ್‌ ತಪ್ಪಿಸಲು ಹಲವಾರು ನಾಯಕರು ಮುಂದಾಗಿದ್ದರು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಗುದ್ಲೆಪ್ಪ ಹಳ್ಳಿಕೇರಿ ಅವರು, ಸಾಹಿತಿ, ಸಮಾಜ ಸೇವಕಿ, ವಕೀಲರಾಗಿದ್ದ ಸರೋಜಿನಿ ಮಹಿಷಿ ಅವರ ಪರವಾಗಿ ಬ್ಯಾಟಿಂಗ್‌ ಮಾಡಿದರು. ಪರಿಣಾಮ ಕರಮಕರ ಅವರಿಗೆ ಟಿಕೆಟ್‌ ನಿರಾಕರಿಸಿ ಮಹಿಷಿ ಅವರಿಗೆ ಟಿಕೆಟ್‌ ನೀಡಲಾಗುತ್ತದೆ.

‘ಎಲ್ಲ ರಾಜಕೀಯ ಪಕ್ಷಗಳಲ್ಲಿರುವಂತೆ ನಮ್ಮ ಪಕ್ಷದ ಮುಖಂಡರಲ್ಲಿಯೂ ಭಿನ್ನಾಭಿಪ್ರಾಯಗಳಿದ್ದವು. ಹೈಕಮಾಂಡ್‌ ಬಲವಾಗಿದ್ದರಿಂದ ಸರಳವಾಗಿ ಕರಮಕರ ಅವರಿಗೆ ಕೈಬಿಟ್ಟು ಮಹಿಷಿ ಅವರಿಗೆ ಟಿಕೆಟ್‌ ನೀಡಲಾಗುತ್ತದೆ’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಐ.ಜಿ. ಸನದಿ ನೆನಪಿಸಿಕೊಂಡರು.

1962ರಲ್ಲಿ ಮಹಿಷಿ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ದಾಖಲಿಸುವ ಮೂಲಕ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನೇ ಬರೆಯುತ್ತಾರೆ. ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿ ಅವರದ್ದಾಗುತ್ತದೆ.

ಇಂದಿರಾಗಾಂಧಿ ಅವರ ಆಪ್ತ ಬಳಗದಲ್ಲಿ ಕಾಣಿಸಿಕೊಳ್ಳುವ ಅವರು, ಕೇಂದ್ರದಲ್ಲಿ ಅಣುಶಕ್ತಿ, ಸಂಖ್ಯಾಶಾಸ್ತ್ರ, ಪ್ರವಾಸೋದ್ಯಮ, ವಿಮಾನಯಾನ, ಕಾನೂನು ಸೇರಿದಂತೆ ಹಲವು ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇಂದಿರಾಗಾಂಧಿ ಅವರ ‘ಬಲಗೈ’ ಎಂದು ಅನೇಕರು ಹೇಳುವಷ್ಟರ ಮಟ್ಟಿಗೆ ಪ್ರಬಲರಾಗಿದ್ದರು. ಅವರ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸುತ್ತಿದ್ದರು. ಇಲ್ಲಿಂದ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು.

‘ಆಗ ಜನತಾ ಪಕ್ಷದ ನಾಯಕರಾಗಿದ್ದ ಚಂದ್ರಶೇಖರ್‌ ಅವರು ಕರೆದಿದ್ದ ಔತಣಕೂಟವೊಂದಕ್ಕೆ ಮಹಿಷಿ ಅವರು ಹೋಗಿದ್ದರು. ಇದು ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ಮಹಿಷಿ ಅವರ ಬಾಂಧವ್ಯ ಹಾಳಾಗಲು ಕಾರಣವಾಗುತ್ತದೆ. ಇದರ ಪರಿಣಾಮ 1980ರಲ್ಲಿ ನಡೆಯುವ ಚುನಾವಣೆಯಲ್ಲಿ ಹಾಲಿ ಸಂಸದೆ ಮಹಿಷಿ ಅವರಿಗೆ ಟಿಕೆಟ್‌ ನಿರಾಕರಿಸಿ ಡಿ.ಕೆ. ನಾಯ್ಕರ್‌ ಅವರಿಗೆ ನೀಡಲಾಗುತ್ತದೆ. ನಾಯ್ಕರ್‌ ಗೆಲುವು ಸಾಧಿಸಿದರು. ಜನತಾ ಪಕ್ಷದಿಂದ ಸ್ಪರ್ಧಿಸಿದ ಮಹಿಷಿ ಅವರು ಸೋತರು’ ಎಂದು ಹೆಸರು ಹೇಳಲು ಬಯಸದ ಮುಖಂಡರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT