ಗುರುವಾರ , ಡಿಸೆಂಬರ್ 3, 2020
23 °C
ಒಳನೋಟ

ರೈತರು, ಕಾಡುಪ್ರಾಣಿಗಳ ಸಂಘರ್ಷಕ್ಕೆ ಕೊನೆಯೆಂದು?

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

ಬೆಳೆ ನಾಶ– ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: 2015ರ ಮಾರ್ಚ್‌ 18ರಂದು ನಡೆದ ಘಟನೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸೋವಿನಕೊಪ್ಪದ ಮಾಲ್ಕಿ ಜಮೀನಿನ ಒಂದಷ್ಟು ರೈತರು, ಶಿರಸಿಯ ಕೆನರಾ ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಅವರು ಗದ್ದೆಯಲ್ಲಿ ಬೆಳೆದಿದ್ದ ಬೆಳೆ ಮತ್ತು ತೋಟದಲ್ಲಿ ಬೆಳೆದಿದ್ದ ಫಸಲನ್ನು ಕಾಡು ಪ್ರಾಣಿಗಳು ನಾಶ ಮಾಡಿದ್ದವು ಎಂಬುದು ಇದಕ್ಕೆ ಅವರು ಕೊಟ್ಟ ಕಾರಣ. ಇದು ಒಂದೆರಡು ವರ್ಷದ ಕಥೆಯಲ್ಲ. ನಿರಂತರ ವ್ಯಥೆ. ವರ್ಷವಿಡಿ ಬೆವರು ಸುರಿಸಿ, ಕೊನೆಯಲ್ಲಿ ಹಿಡಿ ಫಸಲೂ ಕೈಸೇರದಿದ್ದಾಗ ಬೇಸತ್ತ ರೈತರು ಈ ರೀತಿ ತಮ್ಮ ಸಂಕಟ ತೋಡಿಕೊಂಡಿದ್ದರು.

‘ಗದ್ದೆ, ತೋಟದ ರಕ್ಷಣೆಗೆ ಹಾಕುವ ಐಬೆಕ್ಸ್‌ ಬೇಲಿ ಕೂಡ ಪ್ರಾಣಿಗಳನ್ನು ತಡೆಯದಂತಾದಾಗ, ನಾವಾದರೂ ಹೇಗೆ ಬದುಕಬೇಕು? ದಯವಿಟ್ಟು ಆತ್ಮಹತ್ಯೆಗೆ ಅವಕಾಶ ನೀಡಿ’ ಎಂದು ರೈತರು ಗೋಗರೆದರು. ಕಾಡುಪ್ರಾಣಿಗಳ ಉಪಟಳಕ್ಕೆ ಕಡಿವಾಣ ಹಾಕುವ ಭರವಸೆಯೊಂದಿಗೆ ಆ ರೈತರನ್ನು ಇಲಾಖೆ ಅಧಿಕಾರಿಗಳು ಸಂತೈಸಿ ಕಳುಹಿಸಿದ್ದರು. ಆದರೆ, ಕಾಡುಪ್ರಾಣಿಗಳ ಉಪಟಳ, ತೋಟ, ಗದ್ದೆಗಳ ನಾಶ ಮುಂದುವರಿದೇ ಇದೆ. ಇದು ಮಲೆನಾಡಿನ ರೈತರ ಗಂಭೀರ ಸಮಸ್ಯೆಗಿದೆ. ಈಗ ಫಸಲು ಕೈಸೇರುವ ಸಮಯ. ಬೆಳಿಗ್ಗೆ ಮಂಗಗಳು, ಕೆಂಜಳಿಲುಗಳ ಉಪಟಳವಾದರೆ, ರಾತ್ರಿ ಕಾಡು ಹಂದಿ, ಕಡವೆಗಳ ದಾಳಿ ನಡೆಯುತ್ತಲೇ ಇದೆ.

ಹಿಂದೆಲ್ಲಾ, ಬೆಳೆ ರಕ್ಷಿಸಿಕೊಳ್ಳಲು ತೋಟ, ಹೊಲದ ಸುತ್ತ ಅಕ್ರಮವಾಗಿ ವಿದ್ಯುತ್‌ ತಂತಿ ಅಳವಡಿಸಿದ್ದರಿಂದ ಮತ್ತು ನಾಡ ಬಂದೂಕಿಗೆ ಬಲಿಯಾದ ಪ್ರಾಣಿಗಳ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಿರಬಹುದು. ಯಾವಾಗ ಕಾಡು ಪ್ರಾಣಿಗಳ ಸಂರಕ್ಷಣೆ ಕಾಯ್ದೆ, ಕಾನೂನು ಬಿಗಿ ಪಡೆದುಕೊಂಡಿತೋ ಅಲ್ಲಿಂದ ಅವುಗಳ ಮರಣ ಪ್ರಮಾಣ ತಗ್ಗಿತು. ಆದರೆ, ರೈತರ ತೋಟಗಳಿಗೆ ಹಾನಿ ಹೆಚ್ಚುತ್ತಲೇ ಸಾಗಿತು. ಹೊಲದ ನಡುವೆ ಮಾಳದ ಮನೆ ಕಟ್ಟಿ, ಅದರಲ್ಲಿ ರಾತ್ರಿ ಉಳಿದು ಕಾಡುಹಂದಿಗಳಿಂದ ಬೆಳೆ ಉಳಿಸಿಕೊಳ್ಳುತ್ತಿದ್ದರು. ಮಂಗಗಳ ನಿಗ್ರಹಕ್ಕೆ ಹೊಲದ ಸುತ್ತ ಮೀನುಗಾರಿಕಾ ಬಲೆ ಕಟ್ಟುವುದು, ಇತ್ತೀಚೆಗೆಲ್ಲ ಸೀರೆ ಕಟ್ಟುವುದು, ಐಬೆಕ್ಸ್ ಬೇಲಿ ಮುಂತಾದ ತಮ್ಮದೇ ತಂತ್ರಗಳನ್ನು ಪಾಲಿಸಿದರೂ ಅದ್ಯಾವುದಕ್ಕೂ ಕಾಡು ಪ್ರಾಣಿಗಳು ಜಗ್ಗಲಿಲ್ಲ.  ಮಾನವ– ಕಾಡುಪ್ರಾಣಿ ಸಂಘರ್ಷದಲ್ಲಿ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಆದ ಮಾನವ ಪ್ರಾಣಹಾನಿ ಬರೊಬ್ಬರಿ 425. 2017ರ ಆನೆಗಳ ಗಣತಿಯಂತೆ 6,049 ಆನೆಗಳು ಕರ್ನಾಟಕ ರಾಜ್ಯದಲ್ಲಿವೆ. ಹೆಚ್ಚು ಆನೆಗಳು ಇರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ತಜ್ಞರು ಕೊಡುವ ಸಲಹೆಗಳೇನು?

‘ವನ್ಯಜೀವಿಗಳಿಂದ ಆಗುವ ಬೆಳೆಹಾನಿಗೆ ಈಗ ನೀಡುತ್ತಿರುವ ಪರಿಹಾರವು ತೀರಾ ಕಡಿಮೆ. ಜೊತೆಗೆ, ಇದರ ನಿರ್ಧಾರ ಹಾಗೂ ವಿತರಣಾ ವ್ಯವಸ್ಥೆಯು ತೀರಾ ಗೊಂದಲದಿಂದ ಕೂಡಿದೆ. ಹೀಗಾಗಿ, ರಾಜ್ಯ ಸರ್ಕಾರವು ಹೊಸದಾದ ಸಮಗ್ರ ಕಾನೂನು ಜಾರಿಗೆ ತರಬೇಕಿದೆ’ ಎನ್ನುತ್ತಾರೆ ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ. ಕೇಶವ ಎಚ್. ಕೊರ್ಸೆ.

‘ಪರಿಹಾರ ನೀಡಿಕೆ ಪ್ರಕ್ರಿಯೆಯನ್ನು ಸಾಮಾನ್ಯ ರೈತರಿಗೂ ಮೊಬೈಲಿನಲ್ಲಿ ಸುಲಭವಾಗಿ ಲಭ್ಯವಾಗುವಂತೆ ಸರಳೀಕರಣಗೊಳಿಸಬೇಕು. ಮಲೆನಾಡು ಹಾಗೂ ಕರಾವಳಿಯ ವನವಾಸಿ ಹಾಗೂ ಪಾರಂಪರಿಕ ರೈತರಿಗೆ ಇನ್ನೂ ಭೂಒಡೆತನ ಸಿಕ್ಕಿಲ್ಲ. ಅವರಲ್ಲಿ ಬಹುತೇಕ ಸಣ್ಣ ಹಾಗೂ ಅತಿಸಣ್ಣ ರೈತರು. ಅವರಿಗೆ ಈ ಪರಿಹಾರದ ಲಾಭ ಸಿಗುತ್ತಿಲ್ಲ.

‘ಮಲೆನಾಡು ಹಾಗೂ ಕರಾವಳಿಯ ವಿವಿಧೆಡೆ, ವನ್ಯಜೀವಿಗಳ ದಾಳಿ ಸ್ವರೂಪ ಭಿನ್ನವಾಗಿದೆ. ಇದನ್ನು ಜಿಲ್ಲೆ, ತಾಲ್ಲೂಕುವಾರು ಅಧ್ಯಯನ ಮಾಡಿ ನಿಯಂತ್ರಿಸುವ ಮಾರ್ಗ ರೂಪಿಸಬೇಕು. ವನ್ಯಪ್ರಾಣಿಗಳನ್ನು ಕೃಷಿ ಭೂಮಿಯಿಂದ ಓಡಿಸುವ ಅಪಾಯರಹಿತ ತಂತ್ರಗಳು ಪಾರಂಪರಿಕ ರೈತರಿಗೆ ತಿಳಿದಿವೆ. ಅವನ್ನು, ಪುನರುಜ್ಜೀವನಗೊಳಿಸುವ ನವೀನ ನೀತಿಯನ್ನು ಅರಣ್ಯ ಇಲಾಖೆ ಸ್ಥಳಿಯ ಜನರು ಹಾಗೂ ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದೊಂದಿಗೆ ಸಾಧಿಸಬೇಕು. ಮಂಗಗಳ ಸಂಖ್ಯೆ ತೀರಾಹೆಚ್ಚಿರುವ ಪ್ರದೇಶಗಳಲ್ಲಿ ಅವುಗಳ ಸಂತಾನ ನಿಯಂತ್ರಣವನ್ನು ವೈಜ್ಞಾನಿಕವಾಗಿ, ಪ್ರಾಯೋಗಿಕವಾಗಿ ಕೈಗೊಳ್ಳಬೇಕು’ ಎನ್ನುತ್ತಾರೆ ಕೇಶವ ಕೊರ್ಸೆ.

ಪರಿಹಾರ ಪಡೆಯಲು ತಾಂತ್ರಿಕ ಸಮಸ್ಯೆ

ಕಾಡುಪ್ರಾಣಿಗಳಿಂದ ಉಂಟಾಗುವ ಹಾನಿಗೆ ಅರಣ್ಯ ಇಲಾಖೆಯು ಪರಿಹಾರ ಮೊತ್ತವನ್ನು ನಿಗದಿಪಡಿಸಿದೆ. ವನ್ಯಪ್ರಾಣಿಗಳಿಂದ ಪ್ರಾಣ ಹಾನಿ ಸಂಭವಿಸಿದರೆ, ವಾರಸುದಾರರಿಗೆ ನೀಡುವ ಪರಿಹಾರ ಮೊತ್ತವನ್ನು ₹5 ಲಕ್ಷದಿಂದ ₹7.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮೃತರ ವಾರಸುದಾರರಿಗೆ 5 ವರ್ಷಗಳವರೆಗೆ ₹2 ಸಾವಿರ ಮಾಸಾಶನವನ್ನು ನೀಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಸುಭಾಸ ಮಾಳ್ಕೆಡೆ ವಿವರಿಸಿದರು.

ಆದರೆ ಕಾಡುಪ್ರಾಣಿಗಳಿಂದ ಉಂಟಾಗುವ ಬೆಳೆ ಹಾನಿಗೆ ನೀಡುವ ಪರಿಹಾರವನ್ನು ಪಡೆಯುವುದು ಅಷ್ಟು ಸರಳವಲ್ಲ. ಕೆಲವು ಬೆಳೆಗೆ ಪರಿಹಾರ ಅನ್ವಯವೇ ಆಗುವುದಿಲ್ಲ. ಇನ್ನು ಕೆಲವು ಪ್ರಾಣಿಗಳಿಗೆ ಕಾನೂನು ಅನ್ವಯವಾಗುವುದಿಲ್ಲ. ಇಲಾಖೆಯ ತಂತ್ರಾಂಶದಲ್ಲೂ ಕೆಲವು ಸಮಸ್ಯೆಗಳಿವೆ. ಕೊಡುವ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಆ ಕಾರಣಕ್ಕೆ ಹೆಚ್ಚಿನ ರೈತರು ಜುಜುಬಿ ಪರಿಹಾರಕ್ಕಾಗಿ ಸಮಯ, ಶ್ರಮ ವ್ಯರ್ಥ ಮಾಡಿಕೊಳ್ಳಲು ತಯಾರಿಲ್ಲ’ ಎನ್ನುತ್ತಾರೆ ಹಾನಿ ಕುರಿತು ದೂರು ದಾಖಲಿಸಿ ಬೇಸತ್ತ ಶಿರಸಿಯ ರೈತ ಆರ್‌.ಪಿ. ಹೆಗಡೆ ಗೊರ್ನಮನೆ.

‘ಕಾಡುಪ್ರಾಣಿಗಳಿಂದ ಆಗುವ ಬೆಳೆಹಾನಿ ಪರಿಹಾರ ಮಾಲ್ಕಿ ಜಮೀನುದಾರರಿಗೆ ಮಾತ್ರ ಅನ್ವಯವಾಗುತ್ತಿದೆ.ಅತಿಕ್ರಮಣಕಾರರಿಗೆ ಅದಕ್ಕೂ ಅವಕಾಶವಿಲ್ಲವಾಗಿದೆ’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಹೇಳಿದರು.

* ಅಣೆಕಟ್ಟುಗಳ ನಿರ್ಮಾಣದಿಂದ ಕೆಲವು ಅರಣ್ಯಗಳು ಮುಳುಗಡೆಯಾಗಿ ಪ್ರಾಣಿಗಳ ಸ್ವಾಭಾವಿಕ ನೆಲೆ ಛಿದ್ರವಾಗಿದೆ. ಖಾಸಗಿ ಜಮೀನುಗಳಲ್ಲಿ ಬೆಳೆಯುವ ಬೆಳೆಗಳಿಂದಲೂ ಆಕರ್ಷಿತಗೊಂಡ ಕಾಡು ಪ್ರಾಣಿಗಳು ದಾಳಿಯಿಡುತ್ತಿವೆ

– ಸುಭಾಸ ಮಾಳ್ಕೆಡೆ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಎಪಿಸಿಎಫ್

* ಅರಣ್ಯ ಇಲಾಖೆ ತನ್ನ ನೀತಿಯಲ್ಲಿ ಬಡಲಾವಣೆ ತರಬೇಕಿದೆ. ಮಲೆನಾಡಿನ ಎಂಟು ಜಿಲ್ಲೆಗಳಲ್ಲಿ ಸ್ಥಳೀಯ ನೈಸರ್ಗಿಕ ಅರಣ್ಯ ಬೆಳೆಸಲು ಇಲಾಖೆ ಮುಂದಾಗಬೇಕೇ ಹೊರತು ಏಕಜಾತಿ ಗಿಡಗಳನ್ನು ಬೆಳೆಸಬಾರದು.

– ಅನಂತ ಅಶೀಸರ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ

* ಅಭಿವೃದ್ಧಿ ಹೆಸರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತಂದಿರುವ ಒಂದಷ್ಟು ಯೋಜನೆಗಳಿಂದ ಖಾಸಗಿ ಒತ್ತುವರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕಾಡಿನ ನಾಶವಾಗಿದೆ. 

–ಪಿ.ವಿ.ಹಿರೇಮಠ, ಧಾರವಾಡದ ನೇಚರ್‌ ಫಸ್ಟ್‌ ಇಕೊ ವಿಲೇಜ್ ಸಂಸ್ಥಾಪಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು