ಶುಕ್ರವಾರ, ಆಗಸ್ಟ್ 12, 2022
20 °C
ನಾಗರಿಕರೊಂದಿಗೆ ಮೇಯರ್ ಈರೇಶ ಅಂಚಟಗೇರಿ, ಆಯುಕ್ತ ಗೋಪಾಲಕೃಷ್ಣ ಮೊದಲ ಸಂವಾದ

ಸಮಸ್ಯೆ ಶೀಘ್ರ ಪರಿಹಾರ; ಇರಲಿ ಜನರ ಸಹಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅವಳಿನಗರದಲ್ಲಿ  ಇತ್ತೀಚೆಗೆ ತಲೆದೋರಿರುವ ನೀರಿನ ತೊಂದರೆ, ಘನ ತ್ಯಾಜ್ಯದ ಸಮರ್ಪಕ ನಿರ್ವಹಣೆ ಕೊರತೆ, ರಸ್ತೆಗಳ ತಗ್ಗು–ಗುಂಡಿಗೆ ಶೀಘ್ರ ಮುಕ್ತಿ, ಸುಗಮ ಒಳ ಚರಂಡಿ ವ್ಯವಸ್ಥೆ, ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿಗಳು ಸೇರಿದಂತೆ ಮಹಾನಗರದ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ನಮಗೆ ಜನರ ಸಹಕಾರವೂ ಬೇಕು....’

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಹಾಗೂ ಆಯುಕ್ತ ಡಾ. ಗೋಪಾಲಕೃಷ್ಣ ಅವರು ಅವಳಿನಗರದ ನಾಗರಿಕರಿಗೆ ನೀಡಿದ ಭರವಸೆ ಇದು. 

ಮೇಯರ್‌ ಆದ ನಂತರ ಮೊದಲ ಬಾರಿಗೆ ಜನರೊಂದಿಗೆ ನೇರ ಫೋನ್‌ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಬ್ಬರೂ, ಜನರ ಸಮಸ್ಯೆಗಳಿಗೆ ಕಿವಿಯಾದರು. ಭರವಸೆಯ ಧ್ವನಿಯಾದರು. 

ಹದಗೆಟ್ಟ ರಸ್ತೆಗಳು, ಬೆಳಗದ ಬೀದಿ ದೀಪಗಳು, ಬಿಡಾಡಿ ದನಗಳ ಹಾವಳಿ, ಪಾಲಿಕೆಯಲ್ಲಿ ತಡವಾಗುತ್ತಿರುವ ಅರ್ಜಿಗಳ ವಿಲೇವಾರಿ, ನಿರ್ವಹಣೆ ಇಲ್ಲದ ಉದ್ಯಾನಗಳು, ಒಳ ಚರಂಡಿಗಳ ನಿರ್ವಹಣೆ, ಶೌಚಾಲಯಗಳ ಕೊರತೆ, ಪಾರ್ಕಿಂಗ್ ಸಮಸ್ಯೆ, ಅಭಿವೃದ್ಧಿ ಕಾಣದ ವಾರ್ಡ್ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ನಿರಂತರವಾಗಿ ಬಂದ ಜನರ ಎಲ್ಲ ಕರೆಗಳಿಗೆ ಉತ್ತರಿಸಿದರು. 

* ಸಂಗೀತಾ, ವಾರ್ಡ್‌ ನಂ. 59: ಮನೆ ಕಟ್ಟುತ್ತಿದ್ದೇವೆ, ಒಳಚರಂಡಿ ಬ್ಲಾಕ್‌ ಆಗಿ ಸಮಸ್ಯೆ ಆಗಿದೆ. ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ.

– ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿ ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು.

* ಬಸವರಾಜ ಹೆಬ್ಬಳ್ಳಿ, ಗಾಂಧಿಚೌಕ: ಗಾಂಧಿ ಚೌಕದ ಶಾಲೆ ನಂ. 8ರ ಪ್ರದೇಶ 24X7 ನೀರಿನ ಸೌಲಭ್ಯ ವ್ಯಾಪ್ತಿಗೆ ಬರುತ್ತದೆ. ಆದರೆ ಮಧ್ಯರಾತ್ರಿ ಒಂದು ಅಥವಾ ಎರಡು ಗಂಟೆಯಿಂದ ಬೆಳಿಗ್ಗೆ ಏಳು ಗಂಟೆವರೆಗೆ ಮಾತ್ರ ನೀರು ಬಿಡುತ್ತಾರೆ. ಅಷ್ಟೊತ್ತಿನಲ್ಲಿ ನೀರು ತುಂಬುವುದು ಹೇಗೆ?

– 24X7 ಅಂದರೆ, ದಿನವಿಡೀ ನೀರು ಪೂರೈಕೆ ಇರಬೇಕು. ಗಾಂಧಿ ಚೌಕ ಸಮಸ್ಯೆಯನ್ನು ಒಂದೆರಡು ದಿನಗಳಲ್ಲಿ ಪರಿಹರಿಸಲಾಗುವುದು.

* ಅರವಿಂದ, ಕೇಶ್ವಾಪುರ, ನಾಗರಾಜ, ಹೆಗ್ಗೇರಿ ಕಾಲೊನಿ; ಪ್ರಕಾಶ್ ಪವಾರ, ಧಾರವಾಡ: ರಸ್ತೆ ಹದಗೆಟ್ಟಿದ್ದು, ಗಿಡಗಂಟಿಗಳು ಬೆಳೆದಿವೆ. ಕಸ ವಿಲೇವಾರಿ ಸಮಸ್ಯೆಯೂ ಇದೆ.

–ರಸ್ತೆಗಳ ದುರಸ್ತಿಗೆ ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ಅವಳಿನಗರದ ಎಲ್ಲಾ ಕಡೆ ಆಟೊ ಟಿಪ್ಪರ್‌ ನೊಂದಿಗೆ ಪೌರ ಕಾರ್ಮಿಕರು ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುತ್ತಿದ್ದಾರೆ. ಕ್ರಮಕೈಗೊಳ್ಳಲು ವಲಯ ಅಧಿಕಾರಿಗಳಿಗೆ ಸೂಚಿಸಲಾಗುವುದು.

* ಬಿ.ಎಂ. ಸವದತ್ತಿ, ಧಾರವಾಡ: ಇಲ್ಲಿನ ಬಿಎಚ್‌ಎಸ್‌ ಕಾಲೇಜ್‌ ಬಳಿ ರಸ್ತೆ ಕಿರಿದಾಗಿದೆ. ಕಾಲೇಜಿನ ಕಾಂಪೌಂಡ್‌ನಲ್ಲಿ ನೀರಿನ ಪೈಪ್‌ಲೈನ್‌ ಹಾಕಿದ್ದು, ನೀರು ರಸ್ತೆ ಮೇಲೆಯೇ ಹರಿಯುತ್ತಿದೆ.

–ಪೈಪ್‌ಲೈನ್‌ ಸಮಸ್ಯೆ ಪರಿಹರಿಸುವಂತೆ ಜಲಮಂಡಳಿಯವರಿಗೆ ಈಗಾಗಲೇ ತಿಳಿಸಲಾಗಿದೆ. ರಸ್ತೆ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು.

* ಮಹೇಂದ್ರಬಾಬು ಕುಲಕರ್ಣಿ, ಸಿದ್ದೇಶ್ವರ ಪಾರ್ಕ್‌; ಸೋಮಶೇಖರ್ ಅಣಾಡ, ಧಾರವಾಡ; ಬಿ. ವೆಂಕಟೇಶ, ಆಶ್ರಯ ಕಾಲೊನಿ: ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ, ಎಂಟು ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ, ದುಡ್ಡು ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ.  

–ಐದು ದಿನಕ್ಕೊಮ್ಮೆ ನೀರು ಪೂರೈಕೆಗೆ ಪ್ರಯತ್ನ ಮಾಡುತ್ತಿದ್ದೇವೆ. ಸಮಸ್ಯೆ ಇರುವ ಬಡಾವಣೆಯವರು 0836 2351955 ಸಹಾಯವಾಣಿಗೆ ಕರೆ ಮಾಡಿದರೆ, ಉಚಿತವಾಗಿ ನೀರು ಪೂರೈಸುತ್ತಾರೆ.

* ವಿನಾಯಕ, ಸಿವಿಲ್‌ ಎಂಜಿನಿಯರ್‌: ಕಟ್ಟಡ ಪರವಾನಗಿ ಅರ್ಜಿ ಅಪ್‌ಲೋಡ್‌ ಮಾಡುವಾಗ ಸರ್ವರ್‌ ಸಮಸ್ಯೆಯಿಂದಾಗಿ ವಿಳಂಬವಾಗುತ್ತಿದೆ.

–ನಿರ್ಮಾಣ್ ಆನ್‌ಲೈನ್ ಸೇವೆ ಕೇಂದ್ರೀಕೃತ ವ್ಯವಸ್ಥೆಯಾಗಿರುವುದರಿಂದ, ಸರ್ವರ್‌ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಕೆಲವೊಮ್ಮೆ ಸಮಸ್ಯೆಯಾಗುತ್ತಿದೆ. ನೀವೊಮ್ಮೆ ಕಚೇರಿಗೆ ಬಂದರೆ, ಅರ್ಜಿ ಹಾಕುವುದನ್ನು ತೋರಿಸಿ ಕೊಡುತ್ತೇನೆ.

* ಭೀಮಸೇನ, ಧಾರವಾಡ: ರೌಣಕ್‌ಪುರ ಓಣಿಯಲ್ಲಿ ರಸ್ತೆ ಸಮಸ್ಯೆ ಇದೆ. ಆ ಜಾಗ ಖಾಸಗಿಗೆ ಸೇರಿದ್ದು, ಓಡಾಟಕ್ಕೆ ಸಮಸ್ಯೆಯಾಗುತ್ತಿದೆ.

–ಖಾಸಗಿ ಜಾಗದ ದಾಖಲೆ ಮತ್ತು ಸ್ಥಳವನ್ನು ಪರಿಶೀಲಿಸಿ ರಸ್ತೆ ನಿರ್ಮಾಣದ ಸಾಧ್ಯತೆಗಳನ್ನು ಗಮನಿಸಿ, ಕ್ರಮ ಕೈಗೊಳ್ಳಲಾಗುವುದು.

* ಸಂತೋಷ್ ಕೋರ್ಯ, ಮರಾಠ ಗಲ್ಲಿ: ಇಲ್ಲಿನ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್‌ ಮಾಡಲಾಗುತ್ತದೆ. ಅಂಗಡಿಯವರು ಬ್ಯಾರಿಕೇಡ್ ಅಳವಡಿಸುತ್ತಾರೆ.

–ಸಮಸ್ಯೆ ಇರುವ ಸ್ಥಳಕ್ಕೆ ಭೇಟಿ ನೀಡಿ, ಬ್ಯಾರಿಕೇಡ್ ತೆಗೆಸಲಾಗುವುದು.  ಪಾರ್ಕಿಂಗ್‌ ಸಹ ಪರಿಶೀಲಿಸಲಾಗುವುದು.

* ನಾಗರಾಜ, ರಾಮನಗರ: ಲೋಹಿಯಾ ನಗರ ಹಾಗೂ ಮೊರಾರ್ಜಿ ನಗರದ ಉದ್ಯಾನ ನಿರ್ವಹಣೆ ಇಲ್ಲದೆ ಸೊರಗಿವೆ.

–ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ.

* ಗಂಗಾಧರ ಅಂಚಿಟಗೇರಿ, ಬಿಡ್ನಾಳ: ಚರಂಡಿ ವ್ಯವಸ್ಥೆ ಹದಗೆಟ್ಟು, ರಸ್ತೆಯಲ್ಲಿ ಓಡಾಡಲು ಸಮಸ್ಯೆ ಆಗುತ್ತಿದೆ. ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ

–ಪ್ಲಾಸ್ಟಿಕ್ ಅಥವಾ ತ್ಯಾಜ್ಯ ತುಂಬಿಕೊಂಡು ನೀರು ಹೋಗದೇ ಇದ್ದಿರಬಹುದು. ಸರಿಪಡಿಸುವ ವ್ಯವಸ್ಥೆ ಮಾಡಲಾಗುವುದು.

* ಮಂಜುನಾಥ್, ಹುಬ್ಬಳ್ಳಿ: ನೆಹರೂ ಮೈದಾನದ ಸಿಂಥೆಟಿಕ್‌ ಟ್ರ್ಯಾಕ್‌ ಅವೈಜ್ಞಾನಿಕವಾಗಿದೆ. ಸರಿಪಡಿಸುವುದು ಯಾವಾಗ?

–ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ತಜ್ಞರೊಂದಿಗೆ ಸಮಾಲೋಚಿಸಿ ಸಮಸ್ಯೆಯನ್ನು ಬಗೆ
ಹರಿಸಲಾಗುವುದು.

* ಮುರುಗೇಶ ಎಸ್.ಅಳಗುಂಡಗಿ, ರಾಮಕೃಷ್ಣನಗರ: 2001–2002ನೇ ಸಾಲಿನ ಆಸ್ತಿ ತೆರಿಗೆಯನ್ನು ದಂಡ ಸಮೇತ ತುಂಬುವಂತೆ ಕಳೆದ ವರ್ಷ ಹೇಳಿದರು. 20 ವರ್ಷಗಳ ಹಿಂದಿನ ಆಸ್ತಿ ತೆರಿಗೆಯನ್ನು ಈಗ ಕೇಳುವುದು ಸರಿಯೇ?

–ಇದೇ ರೀತಿಯ ಕೆಲವು ಪ್ರಕರಣಗಳು ಗಮನಕ್ಕೆ ಬಂದಿವೆ. ಆಸ್ತಿ ತೆರಿಗೆ ಪಾವತಿಗೆ ಹಳೆಯ ಸಾಫ್ಟ್‌ವೇರ್‌ ಬಳಸಲಾಗುತ್ತಿದೆ. ಶೀಘ್ರ ಹೊಸ ಸಾಫ್ಟ್‌ವೇರ್‌ ಅಳವಡಿಸಿಕೊಳ್ಳಲಾಗುವುದು.

* ಮೈಲಾರ ವಾಲಿಕಾರ, ಕೆಲಗೇರಿ: ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಂಡು 4 ತಿಂಗಳಾದರೂ ಸಹಾಯಧನ ಬಿಡುಗಡೆಯಾಗಿಲ್ಲ.

–ಆಶ್ರಯ ಯೋಜನೆ ಮನೆ ನಿರ್ಮಿಸಿಕೊಂಡವರಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಆಗುವಲ್ಲಿ ವಿಳಂಬವಾಗುತ್ತಿದೆ. ಇತರ ಫಲಾನುಭವಿಗಳಿಗೂ ಹಣ ಬಂದಿಲ್ಲ.
ಈ ಬಗ್ಗೆ ಚರ್ಚಿಸಲಾಗುವುದು.

* ಲೋಕೇಶ ಜಾಧವ: ಗಾಂಧಿ ಮಾರುಕಟ್ಟೆ, ಜನತಾ ಬಜಾರ್‌ಗಳಲ್ಲಿ ಪಾಲಿಕೆಯಿಂದ ನಿರ್ಮಿಸಿದ ಮಳಿಗೆಗಳಲ್ಲಿ ಎಸ್‌ಸಿ–ಎಸ್‌ಟಿಿಗೆ ಎಷ್ಟು ಮೀಸಲಿಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದರೂ ಮಾಹಿತಿ ನೀಡಿಲ್ಲ.
–1920–30ರಲ್ಲಿ ಹರಾಜು ಮಾಡಲಾಗಿರುವ ಮಳಿಗೆಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳ ಮಾಲೀಕರು ಈಗ ಇಲ್ಲದಿದ್ದರೆ ಮತ್ತೆ ಹರಾಜು ಮಾಡಲು ನಿರ್ಧರಿಸಲಾಗಿದೆ. ಹರಾಜು ಸಂದರ್ಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮಳಿಗೆಗಳನ್ನು ಮೀಸಲಿಡಲಾಗುವುದು.

* ಶಿವಾನಂದ, ಹೊಯ್ಸಳನಗರ: ಮಾಂಸದ ಅಂಗಡಿ ತ್ಯಾಜ್ಯ, ಕಟ್ಟಡ ಅವಶೇಷಗಳನ್ನು ರಸ್ತೆ ಬದಿ ಸುರಿಯಲಾಗುತ್ತಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. 

–ರಸ್ತೆ ಬದಿ ಕಸ ಸುರಿಯುವವರ ಮೇಲೆ ಕ್ರಮ ಕೈಗೊಳ್ಳುವಂತೆ, ದಂಡ ವಿಧಿಸುವಂತೆ ಹೆಲ್ತ್‌ ಇನ್‌ಸ್ಪೆಕ್ಟರ್‌ಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಸಹ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.

* ರವಿ ಅಕ್ಕಸಾಲಿ, ಮೊರಾರ್ಜಿ ನಗರ, ಎರಡನೇ ಹಂತ: ನಮ್ಮ ಪ್ರದೇಶದಲ್ಲಿ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಮನೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಬೀದಿ ದೀಪಗಳು ಹೋಗಿದ್ದು, ಅವುಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು.

–ನಮ್ಮ ನಗರ ಸ್ವಚ್ಛ ನಗರ ಅಭಿಯಾನದ ಅಡಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಬಲ್ಬ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.

ಏಕಬಳಕೆ ಪ್ಲಾಸ್ಟಿಕ್‌: ನಿರ್ಬಂಧ

ರಾಜ್ಯದಾದ್ಯಂತ ಜುಲೈ 1ರಿಂದ ಏಕಬಳಕೆ ಪ್ಲಾಸ್ಟಿಕ್‌ ಬಳಕೆ ನಿಷೇಧಕ್ಕೊಳಪಡುತ್ತಿದ್ದು, ಪಾಲಿಕೆ ವ್ಯಾಪ್ತಿಯಲ್ಲೂ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಗೋಪಾಲಕೃಷ್ಣ ಹೇಳಿದರು. ವ್ಯಾಪಾರಿಗಳಿಗೆ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ ಮತ್ತು ಮಾರಾಟಕ್ಕಾಗಿ ವಿಧಿಸಿದ ದಂಡದ ಮೊತ್ತವೇ ₹30 ಲಕ್ಷವಾಗಿದೆ. ಇದರಲ್ಲಿ ಶೇ 85ರಷ್ಟು ಪಾಲು ಗುಟ್ಕಾ ಚೀಟಿಯದ್ದಾಗಿದೆ ಎಂದು ಮೇಯರ್‌ ಈರೇಶ ಅಂಚಟಗೇರಿ ಹೇಳಿದರು.

ಸ್ಮಾರ್ಟ್‌ ಸಿಟಿ ರಸ್ತೆ ತುಂಬಾ ಸಗಣಿ

ನಗರದ ಸ್ಮಾರ್ಟ್‌ ಸಿಟಿ ಯೋಜನೆಯಡಿ ನೆಹರೂ ಕಾಲೇಜು ಸಮೀಪ ರಸ್ತೆ ತುಂಬೆಲ್ಲ ಬಿಡಾಡಿ ದನ ಮತ್ತು ಸೆಗಣಿಯೇ ತುಂಬಿರುತ್ತದೆ ಎಂದು ಅಲ್ಲಿನ ನಿವಾಸಿ ಮಲ್ಲಪ್ಪ ಆರೋಪಿಸಿದರು. ಈ ಮೊದಲು ಬಿಡಾಡಿ ದನಗಳನ್ನು ಕೊಂಡವಾಡಗೆ ಕಳುಹಿಸಲಾಗುತ್ತಿತ್ತು. ನಿರ್ವಹಣೆ ಸರಿಯಾಗದೆ ಸ್ಥಗಿತಗೊಂಡಿತು. ಈಗ ಬಿಡಾಡಿ ದನಗಳನ್ನು ಗೋಶಾಲೆಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗುವುದು. ಮಾಲೀಕರು ದಂಡ ಕಟ್ಟಿ ರಾಸು ಬಿಡಿಸಿಕೊಳ್ಳುವ ನಿಯಮ ತರಲಾಗುವುದು ಎಂದು ಆಯುಕ್ತರು ಭರವಸೆ ನೀಡಿದರು.

ಖಾಲಿ ನಿವೇಶನ; ಜುಲೈ 1ರಿಂದ ಕ್ರಮ

ಪಾಲಿಕೆ ವ್ಯಾಪ್ತಿಯಲ್ಲಿ 90 ಸಾವಿರ ಖಾಲಿ ನಿವೇಶನಗಳು ಇವೆ ಎಂಬ ಮಾಹಿತಿ ಇದೆ.  10 ಸಾವಿರಕ್ಕೂ ಖಾಲಿ ನಿವೇಶನಗಳಲ್ಲಿ ಜನರ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಆದರೆ ತೆರಿಗೆ ಕಟ್ಟುತ್ತಿಲ್ಲ. ಅಲ್ಲದೆ, ಕೆಲವು ಕಡೆ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜುಲೈ 1ರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಹೇಳಿದರು.

ರಾಜಕಾಲುವೆ: ದುರಸ್ತಿಗೆ ಅನುದಾನ

ಪಾಲಿಕೆ ವ್ಯಾಪ್ತಿಯ ರಾಜಕಾಲುವೆ, ಉಪ ಕಾಲುವೆಗಳ ಹೂಳು ತೆಗೆಯಲು ಮುಂತಾದ ಕೆಲಸಗಳಿಗೆ ₹5 ಲಕ್ಷ ಅನುದಾನದ ಒಳಗಿನ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಮೂವರು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ಅನುಮತಿಸಲಾಗಿದೆ. 12 ವಲಯಗಳಲ್ಲಿಯೂ ಸಹಾಯವಾಣಿ ಆರಂಭಿಸಲಾಗಿದೆ. ಪ್ರತಿ ಕಚೇರಿಯಲ್ಲಿಯೂ ಮೂರು ತುರ್ತು ಸ್ಪಂದನೆ ತಂಡ ರಚಿಸಲಾಗಿದೆ. ಮಳೆಗಾಲದಲ್ಲಿ ಒಳಚರಂಡಿ ಕಟ್ಟಿಕೊಳ್ಳುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು, ನೀರು ನುಗ್ಗುವ ಸಮಸ್ಯೆ ಪರಿಹರಿಸಲು ಹೊಯ್ಸಳ ಮಾದರಿಯಲ್ಲಿ ಹುಬ್ಬಳ್ಳಿ, ಧಾರವಾಡಕ್ಕೆ ಎರಡು ವಾಹನಗಳನ್ನು ನಿಯೋಜಿಸಲಾಗುವುದು ಎಂದರು.

ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ

ಜಲಮಂಡಳಿ ನೌಕರರಿಗೆ ಎಲ್‌ ಆ್ಯಂಡ್‌ ಟಿ ಕಂಪನಿಯವರ ಜತೆ ಕೆಲಸ ಮಾಡಲು ಒಪ್ಪಿಗೆ ಇಲ್ಲ. ಕಂಪನಿ ಜತೆ ಕೆಲಸ ಮಾಡುವಂತೆ ನ್ಯಾಯಾಲಯವೂ ಹೇಳಿದೆ. ನೌಕರರ ವರ್ತನೆಯಿಂದ ಜನರಿಗೆ ತೊಂದರೆ ಆಗುತ್ತಿದೆ. ಕೆಲಸ ಆರಂಭಿಸುವಂತೆ ನೌಕರರ ಸಂಘದ ಅಧ್ಯಕ್ಷರಿಗೆ ಹೇಳಲಾಗಿದೆ. ಇಲ್ಲದಿದ್ದರೆ ಮತ್ತೆ ನ್ಯಾಯಾಲಯದ ಮೊರೆ ಹೋಗಲಾಗುವುದು. ನೌಕರರ ಸಮಸ್ಯೆಯಿಂದ ಜವಾಬ್ದಾರಿ ತೆಗೆದುಕೊಳ್ಳಲು ಕಂಪನಿ ಹಿಂದೇಟು ಹಾಕುತ್ತಿದೆ. ನೌಕರರ ಸಮಸ್ಯೆ ಹೀಗೆಯೇ ಮುಂದುವರಿದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಗೋಪಾಲಕೃಷ್ಣ ಹೇಳಿದರು.

ರಸ್ತೆ ಗುಂಡಿ ಮುಚ್ಚಲು ಕ್ರಮ

2021–22 ನೇ ಸಾಲಿನಲ್ಲಿ ₹3.5 ಕೋಟಿ ವೆಚ್ಚದಲ್ಲಿ ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು ಬಾಕಿ ಇದ್ದು, ಅವುಗಳನ್ನು ಶೀಘ್ರ ಮುಚ್ಚುವ ಕೆಲಸ ಮಾಡಲಾಗುವುದು ಎಂದು ಗೋಪಾಲಕೃಷ್ಣ ಹೇಳಿದರು. ಹುಬ್ಬಳ್ಳಿ–ಧಾರವಾಡ ನಗರದ ಎಲ್ಲ ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸಲು ₹107 ಕೋಟಿ ಹಣ ಬಿಡುಗಡೆ ಆಗಿದ್ದು, ಈಗಾಗಲೇ ಕೆಲಸ ಆರಂಭವಾಗಿದೆ ಎಂದರು.

ಕಾರ್ಯಕ್ರಮ ನಿರ್ವಹಣೆ: ರಶ್ಮಿ ಎಸ್‌, ಕೃಷ್ಣಿ ಶಿರೂರ, ಓದೇಶ ಸಕಲೇಶಪುರ, ಸತೀಶ ಬಿ., ಗೌರಮ್ಮ ಕಟ್ಟಿಮನಿ, ಶರೀಫ್ ಕಾಡುಮಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು