ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯ ತ್ವರಿತಕ್ಕೆ ಆದ್ಯತೆ; ಸಚಿವ ಶಂಕರಪಾಟೀಲ ಮುನೇನಕೊಪ್ಪ

ಮಾಧ್ಯಮ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ
Last Updated 8 ಆಗಸ್ಟ್ 2021, 12:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅವಳಿನಗರದಲ್ಲಿ ಹಲವು ಕಾರಣಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗಿವೆ. ಕೆಲವು ಮಂದಗತಿಯಲ್ಲಿ ಸಾಗುತ್ತಿವೆ. ಈ ಕುರಿತು, ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಆದ್ಯತೆ ನೀಡಲಾಗುವುದು’ ಎಂದುಜವಳಿ ಮತ್ತು ಸಕ್ಕರೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘ ಭಾನುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘ರಸ್ತೆ ವಿಸ್ತರಣೆ, ಕೇಬಲ್ ಅಳವಡಿಕೆ, ಒಳಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳು ಏಕಕಾಲದಲ್ಲಿ ನಡೆಯುತ್ತಿವೆ. ಇದರಿಂದಾಗಿ ಹಲವೆಡೆ ರಸ್ತೆಗಳು ಹದಗೆಟ್ಟಿವೆ. ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯೂ ಇದಕ್ಕೆ ಕಾರಣ. ಈ ಕುರಿತು ಸದ್ಯದಲ್ಲೇ ಎಲ್ಲರ ಜತೆ ಸಭೆ ನಡೆಸಲಾಗುವುದು’ ಎಂದರು.

‘ನಾನೂ ಸೇರಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಪ್ರಲ್ಹಾದ ಜೋಶಿ, ಸಿ.ಸಿ. ಪಾಟೀಲ ಹಾಗೂ ಹಿರಿಯ ನಾಯಕರಾದ ಜಗದೀಶ ಶೆಟ್ಟರ್ ಮಹದಾಯಿ ಹಾಗೂ ಕಳಸಾ–ಬಂಡೂರಿ ಹೋರಾಟದ ಹಿನ್ನೆಲೆಯಿಂದ ಬಂದವರು. ಎಲ್ಲರೂ ಒಗ್ಗೂಡಿ ಯೋಜನೆಯ ಅನುಷ್ಠಾನಕ್ಕೆ ಶ್ರಮಿಸುತ್ತೇವೆ’ ಎಂದು ತಿಳಿಸಿದರು.

‘ನ್ಯಾಯಮಂಡಳಿಯು ರಾಜ್ಯಕ್ಕೆ 4 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಇದರ ಬಳಕೆಗೆ ಡಿಪಿಆರ್‌ (ಸಮಗ್ರ ಯೋಜನಾ ವರದಿ) ಸಿದ್ಧಪಡಿಸಲು ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ)ಅನುಮತಿ ಕೋರಲಾಗಿದೆ. ಅನುಮತಿ ಸಿಕ್ಕ ತಕ್ಷಣ ಯೋಜನೆಗೆ ಚಾಲನೆ ನೀಡಲಾಗುವುದು. ಇದಕ್ಕಾಗಿ, ಈಗಾಗಲೇ ಅನುದಾನ ಮೀಸಲಿಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತುಪ್ಪರಿಹಳ್ಳಿ ಮತ್ತು ಬೆಣ್ಣೆ ಹಳ್ಳದ ನೀರನ್ನು ಕೃಷಿ ಚಟುವಟಿಕೆಗೆ ಬಳಸುವ ಯೋಜನೆಯ ವರದಿ ಸಿದ್ಧಪಡಿಸಲಾಗಿದೆ. ಸಂಪುಟ ಸಭೆಯಲ್ಲಿ ವರದಿ ಮಂಡಿಸಿ ಒಪ್ಪಿಗೆ ಪಡೆದು, ಯೋಜನೆಯನ್ನು ಆರಂಭಿಸಲಾಗುವುದು. ಕೆರೆಗಳನ್ನು ತುಂಬಿಸುವಿಕೆ ಮತ್ತು ಏತ ನೀರಾವರಿ ಮೂಲಕ ವ್ಯರ್ಥವಾಗಿ ಹರಿಯುವ ನೀರರನ್ನು ಸದ್ಭಳಕೆ ಮಾಡಿಕೊಳ್ಳಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸುವ ಕಾರ್ಯಗಳು ನಡೆದಿವೆ. ಅವಳಿನಗರದಲ್ಲಿ ನಿರಂತರ ನೀರು ಯೋಜನೆ ಕಾಮಗಾರಿ ಜಾರಿಯಲ್ಲಿದೆ.ಜಲ ಮಿಷನ್ ಯೋಜನೆಯಡಿ, ಗ್ರಾಮೀಣ ಭಾಗದ 388 ಗ್ರಾಮಗಳ ಮನೆ ಬಾಗಿಲಿಗೆ ಶುದ್ಧ ನೀರು ಒದಗಿಸುವ ಜಲಧಾರೆ ಯೋಜನೆಗೆ ಈಗಾಗಲೇ ಅನುಮತಿ ಸಿಕ್ಕಿದೆ’ಎಂದು ವಿವರಿಸಿದರು.

ಸನ್ಮಾನ: ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದಿಂದ ಸಚಿವರಿಗೆ ಸನ್ಮಾನ ಮಾಡಲಾಯಿತು. ಪತ್ರಕರ್ತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಹಾಗೂ ಪದಾಧಿಕಾರಿಗಳು ಇದ್ದರು.

‘ಹೊಸ ವಿಷಯ; ಮಾಹಿತಿ ಪಡೆದು ಮಾತಾಡುವೆ’

‘ಜವಳಿ ಮತ್ತು ಸಕ್ಕರೆ ಖಾತೆ ಸಚಿವನಾಗಿರುವ ನನಗೆ, ಇವೆರಡೂ ವಿಷಯಗಳು ಹೊಸದು. ಸೋಮವಾರ ಇಲಾಖೆಗಳ ಅಧಿಕಾರಿಗಳ ಜೊತೆ ಮೊದಲ ಸಭೆ ನಡೆಸಿ ಮಾಹಿತಿ ಪಡೆವೆ. ಬಳಿಕ, ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವೆ. ಸೂಕ್ತ ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ’ ಎಂದು ಖಾತೆಗೆ ಸಂಬಂಧಿಸಿದ ಮಾಧ್ಯಮದವರ ಪ್ರಶ್ನೆಗಳಿಗೆ ಮುನೇನಕೊಪ್ಪ ಪ್ರತಿಕ್ರಿಯಿಸಿದರು.

ಅಗತ್ಯ ಸಿದ್ಧತೆ: ‘ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ವೈದ್ಯಕೀಯ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಮಕ್ಕಳಿಗಾಗಿ 750 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಕಿಮ್ಸ್ ಮತ್ತು ಜಿಲ್ಲಾಸ್ಪತ್ರೆ ಮೇಲಿನ ಒತ್ತಡ ತಗ್ಗಿಸಿ, ಸ್ಥಳೀಯವಾಗಿಯೇ ಚಿಕಿತ್ಸೆ ಸಿಗುವ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಗೆ 14 ಲಕ್ಷ ಕೋವಿಡ್ ಲಸಿಕೆಯ ಅಗತ್ಯವಿದ್ದು, ಇದುವರೆಗೆ 8 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ಸೋಂಕಿನ ಪ್ರಮಾಣ ಶೇ 3.7 ಇದ್ದು, ಏರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜನರೂ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT