ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷೆ ಹೆಸರಲ್ಲಿ ಮತದಾರರ ಮಾಹಿತಿ ಸಂಗ್ರಹಿಸಿದ ಬಗ್ಗೆ ಆಯೋಗಕ್ಕೆ ವರದಿ: ಡಿ.ಸಿ

ಖಾಸಗಿ ಕಂಪನಿಯಿಂದ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹ ಪ್ರಕರಣ
Last Updated 2 ಡಿಸೆಂಬರ್ 2022, 21:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಮೀಕ್ಷೆ ಹೆಸರಿನಲ್ಲಿ ಖಾಸಗಿ ಕಂಪನಿಯು ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಘಟನೆ ಕುರಿತು ಪ್ರಕರಣ ದಾಖಲಾಗಿರುವ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗುತ್ತಿದೆ ಎಂಬ ಆರೋಪದಡಿ ಎಎಸ್‌ಆರ್‌ ಕಂಪನಿಯ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಕುರಿತು, ಪೊಲೀಸರು ಮತ್ತು ದೂರುದಾರರಿಂದ ಮಾಹಿತಿ ಪಡೆಯಲಾಗಿದೆ’ ಎಂದರು.

‘ಕಂಪನಿಗೆ ಜಿಲ್ಲಾಡಳಿತವಾಗಲೀ, ಪೊಲೀಸರಾಗಲೀ ಅನುಮತಿ ಕೊಟ್ಟಿಲ್ಲ. ಅನುಮತಿ ಇಲ್ಲದೆ ಸಮೀಕ್ಷೆ ನಡೆಸುತ್ತಿದ್ದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಮೂವರು ಯುವಕರ ಹೆಸರಿನಲ್ಲಿ ಎಫ್‌ಐಆರ್ ದಾಖಲಾಗಿದೆ. ಇದೇ ಅಂತಿಮವಲ್ಲ. ಬೇರೆಯವರ ಪಾತ್ರವಿದ್ದರೆ ಅವರ ಹೆಸರನ್ನೂ ಸೇರಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

99 ಸಾವಿರ ಹೆಸರು ಡಿಲಿಟ್: ‘47 ಸಾವಿರ ನಕಲಿ ಮತದಾರರು ಸೇರಿದಂತೆ, ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ 99 ಸಾವಿರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಸತ್ತವರ ಹಾಗೂ ಸ್ಥಳಾಂತರ ಆದವರ ಹೆಸರು ಇದರಲ್ಲಿವೆ. ಈ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಎಲ್ಲವೂ ಪಾರದರ್ಶಕವಾಗಿದೆ’ ಎಂದು ತಿಳಿಸಿದರು.

‘ಪಟ್ಟಿಯ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳಿಗೆ ಪ್ರತಿ ವಾರ ಮಾಹಿತಿ ಒದಗಿಸಲಾಗುತ್ತಿದೆ. ಅರ್ಹರ ಹೆಸರು ಇಲ್ಲದಿರುವುದು ಕಂಡುಬಂದರೆ ಪಕ್ಷಗಳು ತಕ್ಷಣ ಗಮನಕ್ಕೆ ತರಬೇಕು. ಸರಿಪಡಿಸುವ ಜೊತೆಗೆ, ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಎಫ್‌ಐಆರ್‌ನಲ್ಲಿ ದೋಷ: ‘ಮೂವರು ಯುವಕರ ಮೇಲಷ್ಟೇ ಎಫ್‌ಐಆರ್ ದಾಖಲಿಸಿ ಪ್ರಕರಣ ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆ. ಅವರನ್ನ ಹೊರತುಪಡಿಸಿ ಇತರರು ಎಂದು ಎಫ್‌ಐಆರ್‌ನಲ್ಲಿ ನಮೂದಿಸಬೇಕಿತ್ತು. ಪೊಲೀಸರು ಸಹ ಕಂಪನಿಯೊಂದಿಗೆ ಭಾಗಿಯಾಗಿದ್ದು, ಈ ಬಗ್ಗೆ ಆಯೋಗವು ಸ್ವತಂತ್ರವಾಗಿ ತನಿಖೆ ನಡೆಸಬೇಕು’ ಎಂದು ದೂರುದಾರ ರಜತ ಉಳ್ಳಾಗಡ್ಡಿಮಠ ಒತ್ತಾಯಿಸಿದರು.

ಚುನಾವಣಾ ಆಯೋಗದಿಂದಲೇ ಮತದಾರರ ಪಟ್ಟಿ ಪರಿಷ್ಕರಣೆ: ಸಿಎಂ

ಹುಬ್ಬಳ್ಳಿ: ‘ಚುನಾವಣಾ ಆಯೋಗದ ನೇತೃತ್ವದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಅಲ್ಪಸಂಖ್ಯಾತರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎನ್ನುವುದು ಸುಳ್ಳು. ಒಬ್ಬರ ಹೆಸರು 2-3 ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿದ್ದರೆ ಅಂತಹ ಹೆಸರುಗಳನ್ನು ತೆಗೆದುಹಾಕಿ, ಅಧಿಕೃತವಾಗಿ ವಾಸವಾಗಿರುವ ಕ್ಷೇತ್ರದಲ್ಲಿ ಮಾತ್ರ ಹೆಸರು ಉಳಿಸಿಕೊಳ್ಳಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೆಲವೊಬ್ಬರ ಹೆಸರುಗಳನ್ನು ಅನಧಿಕೃತವಾಗಿ ಹುಬ್ಬಳ್ಳಿ, ಬೆಂಗಳೂರು ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತಿರುತ್ತದೆ. ಇಂತಹವುಗಳನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಯಾವುದಾದರೂ ಒಂದು ಕಡೆ ಇಟ್ಟು, ಇನ್ನುಳಿದ ಕಡೆ ತೆಗೆದುಹಾಕಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಈ ಕೆಲಸವನ್ನು ಮಾಡುತ್ತಿವೆ. ಎಲ್ಲರಿಗೂ ಮತದಾನ ಹಕ್ಕು ಇರಲೇಬೇಕು’ ಎಂದು ತಿಳಿಸಿದರು.

‘ಎಲ್ಲೆಲ್ಲಿ ಇಂತಹ ಪ್ರಕರಣಗಳ ಬಗ್ಗೆ ಚುನಾವಣಾ ಆಯೋಗ ದೂರು ನೀಡುತ್ತದೆಯೋ ಅಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುವುದು’ ಎಂದರು.

ಪಕ್ಷದ ಕಾರ್ಯಕರ್ತರಿಂದ ಮತದಾರರ ಪಟ್ಟಿ ಸಮೀಕ್ಷೆ: ಅರವಿಂದ ಬೆಲ್ಲದ

ಹುಬ್ಬಳ್ಳಿ: ‘ಚುನಾವಣಾ ಆಯೋಗವು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಇದು ಸರಿಯಾಗಿದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಲು ಪಕ್ಷದ ಕಾರ್ಯಕರ್ತರ ಮೂಲಕ ಸಮೀಕ್ಷೆ ಮಾಡಿಸಲಾಗುತ್ತಿದೆ’ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಚುನಾವಣಾ ಆಯೋಗ ಮತಪಟ್ಟಿ ಪರಿಷ್ಕರಣೆ (ಬಿಎಲ್‌ಎ –1) ಮಾಡುತ್ತದೆ. ಇನ್ನೊಂದು ಹಂತದಲ್ಲಿ (ಬಿಎಲ್‌ಎ–2) ಆಯೋಗವು ಮತದಾರರ ಕರಡು ಪಟ್ಟಿಯನ್ನು ರಾಜಕೀಯ ಪಕ್ಷಗಳಿಗೆ ನೀಡಿ, ಪರಿಶೀಲಿಸಲು ಅವಕಾಶ ಮಾಡಿಕೊಡುತ್ತದೆ. ಇದೇ ಆಧಾರದ ಮೇಲೆ ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ. ಕ್ಷೇತ್ರದಲ್ಲಿ ಇಲ್ಲದಿರುವ ಮತದಾರರು ಹಾಗೂ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಬಗ್ಗೆ ಆಯೋಗದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಅಲ್ಪಸಂಖ್ಯಾತರ ಮತದಾರರನ್ನಷ್ಟೇ ಮತಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎನ್ನುವ ಆರೋಪ ಸತ್ಯಕ್ಕೆ ದೂರ. ನನ್ನ ಕ್ಷೇತ್ರದ 33ನೇ ವಾರ್ಡ್‌ನಲ್ಲಿ 586 ಮತದಾರರ ಹೆಸರುಗಳು ರದ್ದುಗೊಂಡಿವೆ. ಇವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಟಿ.ವಿ., ಪತ್ರಿಕೆಯವರು, ವಿವಿಧ ಸಂಘ–ಸಂಸ್ಥೆಗಳು ಮತದಾರರ ಸಮೀಕ್ಷೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಮತದಾರರ ಪಟ್ಟಿಯಿಂದ ಹೆಸರು ರದ್ದುಗೊಳಿಸುವುದು ಹಾಗೂ ಸೇರ್ಪಡೆಗೊಳಿಸುವ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT