ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡಿಎ, ಪ್ರೋತ್ಸಾಹ ಮಜೂರಿ ಬಿಡುಗಡೆಗೆ ಕ್ರಮ: ಶೆಟ್ಟರ್

ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನಿಂದ ರಾಷ್ಟ್ರಧ್ವಜ ತಯಾರಿಸುವವರಿಗೆ ಗೌರವ ಸಮರ್ಪಣೆ
Last Updated 30 ಜನವರಿ 2021, 12:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘಕ್ಕೆ ಬರಬೇಕಾದ ಎಂಡಿಎ (ಮ್ಯಾನ್ಯುಫ್ಯಾಕ್ಚರರ್ಸ್ ಡೆವಲ್‌ಮೆಂಟ್ ಅಸಿಸ್ಟೆನ್ಸ್‌) ಮತ್ತು ಪ್ರೋತ್ಸಾಹ ಮಜೂರಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನಿಂದ ಬೆಂಗೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ತಯಾರಿಸುವವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಘದ ಆವರಣದಲ್ಲಿರಾಷ್ಟ್ರಧ್ವಜ ಉತ್ಪಾದನಾ ಕೇಂದ್ರ ಮತ್ತು ಗಾಂಧಿ ಮ್ಯೂಸಿಯಂ ಕಟ್ಟಡ ಕಾಮಗಾರಿಯ ಬಾಕಿ ಅನುದಾನ ₹66.50 ಲಕ್ಷ ಬಿಡುಗಡೆಗೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು’ ಎಂದರು.

‘ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಹೆಚ್ಚಿನ ಒತ್ತು ಕೊಟ್ಟರೆ, ಗುಡಿ ಕೈಗಾರಿಕೆಗಳು ಬೆಳವಣಿಗೆ ಸಾಧ್ಯ. ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ ಗಾಂಧೀಜಿ ಅವರಿಗೆ ಎಲ್ಲರೂ ಗೌರವ ಸಲ್ಲಿಸಿದಾಗ ಮಾತ್ರ, ಶಹೀದ್ ದಿವಸ್‌ ಆಚರಣೆಗೆ ಅರ್ಥ ಬರುತ್ತದೆ’ ಎಂದು ಹೇಳಿದರು.

ಟ್ರಸ್ಟ್ ಸಂಸ್ಥಾಪಕ ವಿನಯ ಗುರೂಜಿ ಮಾತನಾಡಿ, ‘ಗಾಂಧೀಜಿ ಅವರು, ಮನುಷ್ಯ ದುಡಿದು ತನ್ನ ಹಸಿವು ನೀಗಿಸಿಕೊಳ್ಳಲು ಚರಕ ಹಾಗೂ ಮನಃಶಾಂತಿಗಾಗಿ ರಾಮ ನಾಮವನ್ನು ಕೊಟ್ಟರು. ಸಾರ್ಥಕ ಬದುಕಿಗಾಗಿ ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುದ್ಧಿ ಆಗಬೇಕಿದೆ’ ಎಂದರು.

‘ವಿವಿಧತೆಯಲ್ಲಿ ಏಕತೆಯ ನಗರವಾಗಿರುವ ಹುಬ್ಬಳ್ಳಿ, ಸ್ವಾರ್ಥರಹಿತವಾಗಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದೆ. ಸಿದ್ಧಾರೂಢರು, ಶಿಶುನಾಳ ಷರೀಫರು ಸೇರಿದಂತೆ ಈ ನೆಲದ ಅನುಭಾವಿಗಳು ದಯೆ ಮತ್ತು ಸೇವೆಯೇ ಮಾನವ ಧರ್ಮದ ಉದ್ದೇಶ ಎಂದು ಸಾರಿದ್ದಾರೆ’ ಎಂದು ಹೇಳಿದರು.

‘ದೇಶದ ಹೆಮ್ಮೆಯಾದ ರಾಷ್ಟ್ರಧ್ವಜ ತಯಾರಕರಿಗೆ ಗೌರವ ಕೊಡಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಬೆಂಗೇರಿ ಸಂಘಕ್ಕೆ ಬರಬೇಕಾದ ಅನುದಾನ ಮತ್ತುಇತರ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡುವೆ. ಜನರೂ ಹೆಚ್ಚಾಗಿ ಖಾದಿ ಧರಿಸಿ ಈ ಸಂಘವನ್ನು ಪ್ರೋತ್ಸಾಹಿಸಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಆರಂಭಕ್ಕೂ ಮುಂಚೆ ಗುರೂಜಿ ಸಂಘದ ರಾಷ್ಟ್ರಧ್ವಜ ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು. ಸಂಘದ ಕಾರ್ಮಿಕರಿಗೆ ದಿನಸಿ‌ ಕಿಟ್ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ, ಉಪಾಧ್ಯಕ್ಷರಾದ ಟಿ.ಎ. ಶರವಣ, ಅಚ್ಯುತ್ ಗೌಡ, ಕಾರ್ಯದರ್ಶಿ ಶಿವರಾಜ್, ಟ್ರಸ್ಟಿ ನಯನಾ ಮೋಟಮ್ಮ, ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಅಧ್ಯಕ್ಷ ಕೆ.ವಿ. ಪತ್ತಾರ್, ಕಾರ್ಯದರ್ಶಿ ಶಿವಾನಂದ ಮಠಪತಿ, ಧಾರವಾಡ ಜಿಲ್ಲೆ ಖಾದಿ ಗ್ರಾಮೋದ್ಯೋಗ ಸಂಘದ ಅಧ್ಯಕ್ಷ ಮನೋಜಕುಮಾರ ಪಾಟೀಲ, ವಿಜಯಕುಮಾರ್ ಹಾಗೂ ಪುಣ್ಯಪಾಲ ಇದ್ದರು.

ಅನುದಾನ ಬಿಡುಗಡೆಗೆ ಮನವಿ

ಸಂಘಕ್ಕೆ ಬರಬೇಕಾದ ₹1.24 ಕೋಟಿ ಎಂಡಿಎ ಮತ್ತು ₹1.58 ಕೋಟಿ ಪ್ರೋತ್ಸಾಹ ಮಜೂರಿ ಬಿಡುಗಡೆಗೆ ಒತ್ತಾಯಿಸಿ, ಸಂಘದ ಅಧ್ಯಕ್ಷ ಕೆ.ವಿ. ಪತ್ತಾರ ಮತ್ತು ಕಾರ್ಯದರ್ಶಿ ಶಿವಾನಂದ ಮಠಪತಿ ಅವರು, ಸಚಿವ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.

‘ರಾಜ್ಯದಾದ್ಯಂತ ಸುಮಾರು 22 ಸಾವಿರ ಜನ ನೂಲುವವರು ಮತ್ತು ನೇಕಾರರು ಜೀವನೋಪಾಯಕ್ಕಾಗಿ ಹಲವು ವರ್ಷಗಳಿಂದ ಖಾದಿ ಸಂಘ ಸಂಸ್ಥೆಗಳನ್ನೇ ಅವಲಂಬಿಸಿದ್ದಾರೆ. ಕೊರೊನಾದಿಂದಾಗಿ ಸಂಘಗಳು ಹಾಗೂ ಕಾರ್ಮಿಕರ ಬದುಕು ಸಂಕಷ್ಟದಲ್ಲಿದೆ. ಹಾಗಾಗಿ, ಸಂಘಕ್ಕೆ ಬರಬೇಕಾದ ಬಾಕಿ ಹಣವನ್ನು ಬಿಡುಗಡೆ ಮಾಡಿಸಿ ಕೊಡಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT