ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕನಿಂದ ₹21 ಲಕ್ಷ ದೋಚಿದ ಮಹಿಳೆ

ಸಲುಗೆ ಬೆಳೆಸಿ ಅಶ್ಲೀಲ ಚಿತ್ರ, ವಿಡಿಯೊ ಸಂಗ್ರಹ: ಹಣಕ್ಕಾಗಿ ಬ್ಲಾಕ್‌ಮೇಲ್‌
Last Updated 12 ಅಕ್ಟೋಬರ್ 2022, 16:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಿವೃತ್ತ ಪ್ರಾಧ್ಯಾಪಕರೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡ ಮಹಿಳೆಯೊಬ್ಬಳು, ಅವರ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್‌ಮೇಲ್ ಮಾಡಿ, ಬರೋಬ್ಬರಿ ₹21 ಲಕ್ಷ ದೋಚಿದ್ದಾಳೆ.

ಅಂಜಲಿ ಶರ್ಮಾ ಎಂಬಾಕೆ ಧಾರವಾಡದ ಆ ಪ್ರಾಧ್ಯಾಪಕರಿಗೆ ವಾಟ್ಸ್‌ಆ್ಯಪ್ ವಿಡಿಯೊ ಕರೆ ಮೂಲಕ ಪರಿಚಯವಾಗಿದ್ದಳು. ಸ್ನೇಹ ಸಲುಗೆಗೆ ತಿರುಗಿತ್ತು. ವಾಟ್ಸ್‌ಆ್ಯಪ್‌ನಲ್ಲಿ ಇಬ್ಬರೂ ತಮ್ಮ ಖಾಸಗಿ ವಿಡಿಯೊ ಹಾಗೂ ಫೋಟೊಗಳನ್ನು ವಿನಿಮಯ ಮಾಡಿಕೊಂಡಿದ್ದರು. ವಿಡಿಯೊ ಕಾಲ್‌ನಲ್ಲಿಯೂ ಮಾತನಾಡಿದ್ದರು.

ಕೆಲ ದಿನಗಳ ನಂತರ ಅಂಜಲಿ ಪ್ರಾಧ್ಯಾಪಾಕರ ಖಾಸಗಿ ವಿಡಿಯೊ, ಫೋಟೊ, ವಿಡಿಯೊ ಕರೆಯ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ₹3 ಲಕ್ಷ ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾಳೆ. ನಂತರ, ಆಕೆಯ ಸಹಚರ ವಿಕ್ರಮ್ ಎಂಬಾತ ತಾನು ಸೈಬರ್ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಪ್ರಾಧ್ಯಾಪಕರಿಗೆ ಕರೆ ಮಾಡಿದ್ದಾನೆ.

ನಿಮಗೆ ಬ್ಲಾಕ್‌ಮೇಲ್ ಮಾಡಿರುವ ಅಂಜಲಿ ನನಗೆ ಪರಿಚಯವಿದ್ದು, ನಿಮ್ಮ ಫೋಟೊ ಮತ್ತು ವಿಡಿಯೊಗಳನ್ನು ಡೆಲಿಟ್ ಮಾಡಿಸುತ್ತೇನೆ. ಅದಕ್ಕಾಗಿ, ನನಗೆ ₹5 ಲಕ್ಷ ಕೊಡಬೇಕು ಎಂದಿದ್ದಾನೆ. ಪ್ರಾಧ್ಯಾಪಕರ ಬ್ಯಾಂಕ್ ಖಾತೆಯ ವಿವರ ಪಡೆದು, ಆನ್‌ಲೈನ್‌ನಲ್ಲಿ ಹಂತಹಂತವಾಗಿ ₹21 ಲಕ್ಷವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರಿಯರ್ ಟ್ರ್ಯಾಕ್ ಹೆಸರಲ್ಲಿ ವಂಚನೆ

ಕೊರಿಯರ್‌ ಪಾರ್ಸೆಲ್ ಟ್ರ್ಯಾಕ್ ಮಾಡಲು ಮುಂದಾದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ, ವಂಚಕರ ಜಾಲವೊಂದು ಹಂತಹಂತವಾಗಿ ₹99 ಸಾವಿರ ವರ್ಗಾಯಿಸಿಕೊಂಡು ವಂಚಿಸಿದೆ.

ಮೇದಾರ ಓಣಿಯ ಸಂತೋಷ ಎಸ್. ಎಂಬುವರಿಗೆ ಸಾಂಗ್ಲಿಯಿಂದ ಕೊರಿಯರ್ ಬರಬೇಕಾಗಿತ್ತು. ತಮ್ಮ ಪಾರ್ಸೆಲ್ ಟ್ರ್ಯಾಕ್ ಮಾಡುವಾಗ ಗೂಗಲ್‌ನಲ್ಲಿ ಸಿಕ್ಕ ಮೊಬೈಲ್ ಸಂಖ್ಯೆಗೆ ಅವರು ಕರೆ ಮಾಡಿದ್ದಾರೆ. ಆತ, ಇವರ ಸಂಖ್ಯೆಗೆ ಲಿಂಕ್‌ವೊಂದನ್ನು ಕಳಿಸಿ, ₹2 ಪಾವತಿಸುವಂತೆ ಸೂಚಿಸಿದ್ದಾನೆ.

ಅದರಂತೆ, ಸಂತೋಷ ಅವರು ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿದ ಕೆಲವೇ ಕ್ಷಣಗಳಲ್ಲಿ, ವಂಚಕ ಅವರ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹5.3 ಲಕ್ಷವಿದ್ದ ಹಣದ ಚೀಲ ದೋಚಿದರು

ಸ್ಕೂಟಿಯಲ್ಲಿ ₹5.3 ಲಕ್ಷ ನಗದು ಒಯ್ಯುತ್ತಿದ್ದ ವ್ಯಕ್ತಿಯೊಬ್ಬರನ್ನು ಹಿಂಬಾಲಿಸಿದ ಕಳ್ಳರಿಬ್ಬರು, ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ದೇಶಪಾಂಡೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.

ಅಹಮದಾಬಾದ್ ನಿವಾಸಿ ವಿಜಯಕುಮಾರ್ ಜೈನ್ ಹಣ ಕಳೆದುಕೊಂಡವರು. ಮನೆ ವ್ಯವಹಾರಕ್ಕೆ ಸಂಬಂಧಿಸಿದ ನಗದನ್ನು ಜೈನ್ ಅವರು ಸ್ಕೂಟಿಯಲ್ಲಿ ಇಟ್ಟುಕೊಂಡು ಹೋಗುತ್ತಿದ್ದರು. ಶಾರದಾ ಹೋಟೆಲ್ ಬಳಿ ಸಂಚಾರ ದಟ್ಟಣೆ ಹೆಚ್ಚಿದ್ದಾಗ, ವಾಹನವನ್ನು ನಿಧಾನಗೊಳಿಸಿದರು. ಆಗ ಕಳ್ಳರು ಹಣದ ಬ್ಯಾಗ್ ಕಿತ್ತುಕೊಂಡು ಓಡಿದ್ದಾರೆ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದರು.

ಸ್ಥಳಕ್ಕೆ ಎಸಿಪಿ ವಿನೋದ ಮುಕ್ತೇದಾರ, ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT