ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿತಸ್ಥರು ಯಾರೇ ಇದ್ದರೂ ಬಿಡುವುದಿಲ್ಲ

ಕಟ್ಟಡ ಕುಸಿತ ಪ್ರಕರಣ: ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ
Last Updated 20 ಮಾರ್ಚ್ 2019, 9:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಟ್ಟಡ ಕುಸಿತ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ, ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಇಲ್ಲಿನ ಕಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ರಕ್ಷಣಾ ಕಾರ್ಯಾಚರಣೆ ಬಗ್ಗೆಯಷ್ಟೇ ಎಲ್ಲರೂ ತಲೆ ಕೆಡಿಸಿಕೊಂಡಿದ್ದೇವೆ. ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಎಲ್ಲಾ ಮುಗಿದ ಬಳಿಕ, ಘಟನೆಯ ಪ್ರಾಥಮಿಕ ವರದಿ ಆಧರಿಸಿ, ಯಾವ ರೀತಿ ತನಿಖೆ ನಡೆಸಬೇಕು ಎಂಬುದನ್ನು ತೀರ್ಮಾನಿಸಲಾಗುವುದು’ ಎಂದರು.

‘ಘಟನೆಗೆ ಕಾರಣರಾದವರನ್ನು ಯಾವ ರೀತಿಯಲ್ಲೂ ರಕ್ಷಿಸಲು ಬಿಡುವುದಿಲ್ಲ. ಪಾರದರ್ಶಕವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವ ಮೂಲಕ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಹೇಳಿದರು.

‘ಅಗತ್ಯವಿದ್ದರೆ ಬೆಂಗಳೂರಿಗೆ ಕರೆದೊಯ್ಯಿರಿ’

‘ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಬೆಂಗಳೂರಿಗೆ ಕರೆದೊಯ್ಯಿರಿ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡುವಂತೆ ನಾನೂ ಜಿಲ್ಲಾಧಿಕಾರಿಗೆ ಸೂಚಿಸುತ್ತೇನೆ. ಒಟ್ಟಿನಲ್ಲಿ ಗಾಯಾಳುಗಳ ಚಿಕಿತ್ಸೆ ಯಾವುದೇ ಕೊರತೆ ಇಲ್ಲದಂತೆ ನಡೆಯಬೇಕು’ ಎಂದು ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಅವರಿಗೆ ದೇಶಪಾಂಡೆ ಸೂಚಿಸಿದರು.

ತೀವ್ರ ನಿಗಾ ಘಟಕ ಮತ್ತು ವಿಶೇಷ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 13 ಗಾಯಾಳುಗಳನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ದೇಶಪಾಂಡೆ, ‘ನಿಮ್ಮ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಪೂರ್ಣ ಗುಣಮುಖರಾಗುವವರೆಗೆ ಇಲ್ಲಿಯೇ ಇರಿ’ ಎಂದು ಸಲಹೆ ನೀಡಿದರು.

‘ಮಾವನ ತಪ್ಪಿಗೆ ಅಳಿಯ ಹೊಣೆಯಲ್ಲ’

‘ಕುಸಿದ ಕಟ್ಟಡ ಧಾರವಾಡ ಕಾಂಗ್ರೆಸ್‌ ಲೋಕಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಮಾವನಿಗೆ ಸೇರಿದ್ದಾಗಿದೆ. ಹಾಗಂತ ಮಾವನ ತಪ್ಪಿಗೆ ಕುಲಕರ್ಣಿ ಅವರನ್ನು ಹೊಣೆ ಮಾಡುವುದು ಸರಿಯಲ್ಲ. ತನಿಖೆ ನಡೆದ ಬಳಿಕವಷ್ಟೇ ತಪ್ಪಿತಸ್ಥರು ಯಾರು? ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂದು ನಿರ್ಧರಿಸಲು ಸಾಧ್ಯ’ ಎಂದು ಆರ್‌.ವಿ. ದೇಶಪಾಂಡೆ ಹೇಳಿದರು.

ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ, ಶಾಸಕ ಪ್ರಸಾದ ಅಬ್ಬಯ್ಯ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಎಚ್. ಕೋನರಡ್ಡಿ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಕಾಂಗ್ರೆಸ್‌ ಮುಖಂಡ ಅಲ್ತಾಫ್ ಕಿತ್ತೂರ ಇದ್ದರು.

ಇದಕ್ಕೂ ಮುಂಚೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಮಹಾನಗರ ಜೆಡಿಎಸ್‌ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ರೋಗಿಗಳನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT