ಅಂತು, ಇಂತು ಮುಗಿತಾ ಬಂತು

7
ಐದು ವರ್ಷದಿಂದ ನಡೆಯುತ್ತಿರುವ ಸವಾಯಿ ಗಂಧರ್ವ ಕಲಾ ಮಂದಿರ ನವೀಕರಣ ಕಾರ್ಯ!

ಅಂತು, ಇಂತು ಮುಗಿತಾ ಬಂತು

Published:
Updated:
ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ನವೀಕರಣಗೊಂಡಿರುವ ಸವಾಯಿ ಗಂಧರ್ವ ಕಲಾ ಮಂದಿರ

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದಲ್ಲಿ ಇರುವ ಸವಾಯಿ ಗಂಧರ್ವ ಕಲಾಮಂದಿರ (ಹುಬ್ಬಳ್ಳಿ ಆರ್ಟ್‌ ಗ್ಯಾಲರಿ) ನವೀಕರಣ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದ್ದು, ಒಂದೆರಡು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಲಭಿಸುವ ಸಾಧ್ಯತೆ ಇದೆ.

1975ರಲ್ಲಿ ನಿರ್ಮಾಣವಾಗಿದ್ದ ಸವಾಯಿ ಗಂಧರ್ವ ಕಲಾ ಮಂದಿರ ವಾಣಿಜ್ಯ ನಗರದ ಸಾಂಸ್ಕೃತಿಕ ಮತ್ತು ಕಲಾ ಕಾರ್ಯಕ್ರಮಗಳ ಅನಾವರಣಕ್ಕೆ ಉತ್ತಮ ವೇದಿಕೆಯಾಗಿತ್ತು. ಆದರೆ, ಕಲಾ ಮಂದಿರ ಹಳೆಯದಾದ ಕಾರಣ ಮತ್ತು ಮೂಲಸೌಲಭ್ಯಗಳ ಕೊರತೆಯಿಂದ ಸಾಕಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಹೀಗಾಗಿ, ಕಲಾ ಮಂದಿರದ ನವೀಕರಣ ಕಾರ್ಯವನ್ನು 2013ರಲ್ಲಿ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿತ್ತು.

ಕಲಾ ಮಂದಿರದ ನವೀಕರಣ ಕಾರ್ಯ ವಿಳಂಬ ಧೋರಣೆ ಖಂಡಿಸಿ ಹಾಗೂ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳು ಅನೇಕ ಸಲ ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಜನಪ್ರತಿನಿಧಿಗಳ ನಿಷ್ಕಾಳಜಿ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ ನಡೆಯಿಂದಾಗಿ ಕಲಾಮಂದಿರದ ನವೀಕರಣ ಕಾರ್ಯ ತೆವಳುತ್ತಾ ಸಾಗಿ, ಐದು ವರ್ಷಗಳ ಬಳಿಕ ಇದೀಗ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ.

’ನವೀಕರಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದ್ದರೂ ಕಾಮಗಾರಿ ಕಳಪೆಯಾಗಿದೆ. ಗುಣಮಟ್ಟದ ವಸ್ತುಗಳನ್ನು ಅಳವಡಿಸಿಲ್ಲ’ ಎಂದು  ನಗರದ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

₹ 3.25 ಕೋಟಿ ಅನುದಾನ:

ರಾಜ್ಯ ಸರ್ಕಾರವು ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡಿದ್ದ ಎರಡನೇ ಹಂತದ ₹ 100 ಕೋಟಿ ವಿಶೇಷ ಅನುದಾನದಲ್ಲಿ ₹1.75 ಕೋಟಿ ಹಾಗೂ ಮೂರನೇ ಹಂತದಲ್ಲಿ ಬಿಡುಗಡೆ ಮಾಡಿದ್ದ ₹100 ಕೋಟಿ ಅನುದಾನದಲ್ಲಿ ₹1.5 ಕೋಟಿಯನ್ನು ಸವಾಯಿ ಗಂಧರ್ವ ಕಲಾಮಂದಿರ ನವೀಕರಣಕ್ಕೆ ವಿನಿಯೋಗಿಸಲಾಗಿದೆ.

ಆರಂಭದಲ್ಲಿ ನಿರ್ಮಿತಿ ಕೇಂದ್ರ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಬಳಿಕ ಬೆಂಗಳೂರಿನ ಕಲರ್‌ ವೈಬ್ರೇಷನ್‌ ಸಂಸ್ಥೆ ಸಭಾಂಗಣದ ಒಳಾಂಗಣದ ನವೀಕರಣ ಹಾಗೂ ಸೂರಜ್‌ ಗೋವಿಂದ ರೆಡ್ಡಿ ಅಳವಂಡಿ (ಎಸ್‌ಜಿಎ) ಗುತ್ತಿಗೆದಾರರು ಸಭಾಂಗಣದ ಹೊರಾಂಗಣದ ವಿನ್ಯಾಸವನ್ನು ಕೈಗೆತ್ತಿಕೊಂಡಿದ್ದರು.

ಬಾಕಿ ಇರುವ ಕಾಮಗಾರಿ:

‘ಕೇಂದ್ರೀಕೃತ ಹವಾನಿಯಂತ್ರಣ ಹಾಗೂ ಪ್ರೊಜೆಕ್ಟರ್‌ ಅಳವಡಿಸುವ ಕಾರ್ಯ ಬಾಕಿ ಇದೆ. ಜೊತೆಗೆ 200 ಕೆ.ವಿ.ಜನರೇಟರ್‌ ಬಂದಿದ್ದು, ಕೂರಿಸಬೇಕಿದೆ. ಸಭಾಭವನದ ಹಿಂಬದಿ ಗೇಟ್‌ ಅಳವಡಿಕೆ ಮತ್ತು ವಾಹನ ಪಾರ್ಕಿಂಗ್‌ ಸ್ಥಳದಲ್ಲಿ ಪೇವರ್ಸ್‌ ಅಳವಡಿಕೆ ಕಾರ್ಯ ಬಾಕಿ ಇದೆ. ವಿದ್ಯುತ್‌ ಸಂಪರ್ಕ ಬಾಕಿ ಇದ್ದು, ಎಚ್‌ಟಿ ಲೈನ್‌ ಅಳವಡಿಕೆಗೆ ಸಿದ್ಧತೆ ನಡೆದಿದೆ. ಸಭಾಂಗಣದ ಬಾಲ್ಕನಿ ಪಕ್ಕ ಡೈನಿಂಗ್‌ ಹಾಲ್‌ ಮಾಡುವುದು ಬಾಕಿ ಉಳಿದಿದೆ’ ಎಂದು ಅವರು ಹೇಳಿದರು.

ಇನ್ನು ಬೇಕಿದೆ ₹ 70 ಲಕ್ಷ

‘ಕಲಾ ಮಂದಿರ ನವೀಕರಣ ಕಾರ್ಯಕ್ಕೆ ಆರಂಭದಿಂದಲೂ ತೊಡಕುಗಳು ಎದುರಾದ ಕಾರಣ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಒಂದೆರಡು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಕ್ರಮಕೈಗೊಳ್ಳಲಾಗುವುದು’ಎಂದು ಮೇಯರ್‌ ಸುಧೀರ ಸರಾಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲಾ ಮಂದಿರದ ಉಳಿದಿರುವ ಕಾಮಗಾರಿ ಮುಗಿಸಲು ಇನ್ನೂ ಸುಮಾರು ₹ 70 ಲಕ್ಷ  ಅಗತ್ಯವಿದೆ. ಶೀಘ್ರದಲ್ಲೇ ಟೆಂಡರ್‌ ಕರೆದು ಮುಂದಿನ ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದರು.

ಸಭಾಂಗಣದಲ್ಲಿ ಏನೇನಿದೆ

‘ಸಾರ್ವಜನಿಕರು ಕೂರಲು ಅನುಕೂಲವಾಗುವಂತೆ ವಿಶಾಲವಾದ ಸಭಾಂಗಣದಲ್ಲಿ 475 ಫುಶ್‌ ಬ್ಯಾಕ್‌ ಚೇರ್‌, ವೇದಿಕೆ ಮೇಲೆ 6 ವಿವಿಐಪಿ ಮತ್ತು 10 ವಿಐಪಿ ಚೇರ್‌ಗಳನ್ನು ಅಳವಡಿಸಲಾಗಿದೆ’ ಎಂದು ಕಲಾಮಂದಿರದ ನಿರ್ವಾಹಕ ವೀರಪ್ಪ ಸಿ.ಕಂದಕೂರು ‘ಪ್ರಜಾವಾಣಿ’ಗೆ ತಿಳಿಸಿದರು.

 ಸೌಂಡ್‌, ಲೈಟಿಂಗ್‌, ಸ್ಟೇಜ್‌ ಲೈಟಿಂಗ್‌ ಅಳವಡಿಸಲಾಗಿದೆ. ಎರಡು ಗ್ರೀನ್‌ ರೂಂ, ಒಂದು ವಿಐಪಿ ರೂಂ, ನಾಲ್ಕು ಶೌಚಾಲಯಗಳನ್ನು ಸಹ ನಿರ್ಮಿಸಲಾಗಿದೆ ಎಂದು ಹೇಳಿದರು.

ಕಟ್ಟಡಕ್ಕೆ ಬಣ್ಣ ಹಚ್ಚಲಾಗಿದೆ. ವಾಲ್‌ ಪ್ಯಾನಲಿಂಗ್‌ ಅಳವಡಿಕೆ ಮಾಡಲಾಗಿದೆ. ಸ್ಟೇಜ್‌ ಮೇಲೆ ಕರ್ಟನ್‌ ಹಾಕಲಾಗಿದೆ. ಎಸಿಪಿ(ಅಲ್ಯೂಮಿನಿಯಂ ಕಂಪೋಜಿಟ್‌ ಫ್ಯಾನಲ್‌), ಗ್ಲೇಜಿಂಗ್‌(ಗ್ಲಾಸ್‌) ಅಳವಡಿಸುವ ಕಾರ್ಯ ಸಹ ಪೂರ್ಣಗೊಂಡಿದೆ. ಕಟ್ಟಡದ ಚಾವಣಿಗೆಗೆ ವಾಟರ್‌ಫ್ರೂಫ್‌(ಕೊಬಾ) ವ್ಯವಸ್ಥೆ ಮಾಡಲಾಗಿದೆ. ವಾಹನ ಪಾರ್ಕಿಂಗ್‌ ತಾಣದ ಅರ್ಧ ಭಾಗಕ್ಕೆ ಪೇವರ್ಸ್‌ ಅಳವಡಿಸಲಾಗಿದೆ’ ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !