ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರ್ಚಿ–ಗಿರಮಿಟ್‌ಗೆ ಮನಸೋಲದವರಿಲ್ಲ

ಹುಬ್ಬಳ್ಳಿ–ಧಾರವಾಡ ಮೆಟ್ರೊ
ಅಕ್ಷರ ಗಾತ್ರ

‘ಭಜಿ’ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಚಿಕ್ಕವರು, ದೊಡ್ಡವರು, ಗಂಡಸರು, ಹೆಂಗಸರು... ಹೀಗೆ ಯಾವುದೇ ಭೇದ–ಭಾವವಿಲ್ಲದೇ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುವ ಕೆಲವೇ ಕೆಲ ಕುರುಕಲು ತಿಂಡಿಗಳಲ್ಲಿ ‘ಭಜಿ’ಗೆ ಮೊದಲ ಸ್ಥಾನ.

ಬೇಂದ್ರೆ ಅಜ್ಜ ‘ಇನ್ನೂ ಯಾಕ ಬರಲಿಲ್ಲ ಹುಬ್ಬಳ್ಳಿಯಾಂವ...’ ಪದ್ಯದಲ್ಲಿ ‘ಚಹಾದ ಜೋಡೆ ಚೂಡಾದಾಂಗ...’ ಎಂದು ಉಲ್ಲೇಖಿಸಿದ್ದಾರೆ. ಇಲ್ಲಿ ‘ಚೂಡಾ’ ಎಂಬುದು ಈ ಭಾಗದ ಜನರ ‘ಕುರುಕಲು ತಿಂಡಿ ಪ್ರೀತಿ’ಯನ್ನು ಧ್ವನಿಸುತ್ತದೆ. ಅದರಲ್ಲೂ ಹುಬ್ಬಳ್ಳಿ–ಧಾರವಾಡ ಸೇರಿ ಉತ್ತರ ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಕುರುಕಲು ತಿಂಡಿಯಲ್ಲಿ ಭಜಿಗೆ ಅಗ್ರಸ್ಥಾನ. ಅದರಲ್ಲೂ ‘ಮಿರ್ಚಿಭಜಿ’ ಈ ಭಾಗದ ‘ಟ್ರೆಂಡ್‌ ತಿನಿಸು’. ಮಿರ್ಚಿಭಜಿ ಜತೆ ಗಿರಮಿಟ್‌ ರುಚಿ ಸೇರಿದರಂತೂ ತಿಂಡಿಪ್ರಿಯರಿಗೆ ಸ್ವರ್ಗಕ್ಕೆ ಮೂರೇ ಗೇಣು.

‘ಮಿರ್ಚಿಭಜಿ’ ದ್ವಿಭಾಷಿ ಪದ. ಮಿರ್ಚಿ ಹಿಂದಿ ಪದವಾದರೆ ಭಜಿ ಕನ್ನಡ ಪದ. ಮಿರ್ಚಿ ಅಂದರೆ ಮೆಣಸಿನಕಾಯಿ. ‘ಮಿರ್ಚಿ’ ಈ ಭಾಗದ ಗಂಡುಮೆಟ್ಟಿನ, ಗಡಸು, ಸಂಸ್ಕೃತಿಯ ಪ್ರತೀಕವೆಂಬಂತೆ ಈ ಭಾಗದ ಜನ ಭಾವಿಸುವುದರಿಂದ ಮಿರ್ಚಿಭಜಿಗೂ ಉತ್ತರ ಕರ್ನಾಟಕಕ್ಕೂ ಒಂದು ರೀತಿಯ ಭಾವನಾತ್ಮಕ ನಂಟಿದೆ.

‘ಭಜಿ’ ಮೂಲತಃ ಗುಜರಾತ್ ಹಾಗೂ ಆಂಧ್ರಪ್ರದೇಶದ ಗುಂಟೂರಿನಿಂದ ಬಂದ ತಿಂಡಿಯಾಗಿದೆ. ಆದರೆ, ಪ್ರಸ್ತುತ ಉತ್ತರ ಕರ್ನಾಟಕದ ಭಜಿ ವೈವಿಧ್ಯ, ರುಚಿ ಗುಜರಾತ್ ಹಾಗೂ ಗುಂಟೂರು ಭಜಿಯನ್ನೂ ಮೀರಿ ಬೆಳೆದಿದೆ. ತಾವು ಹೋದಲ್ಲಿಗೆ ಭಜಿಯ ರುಚಿಕರ ಸಂಸ್ಕೃತಿಯನ್ನು ಕೊಂಡೊಯ್ಯುವ ಉತ್ತರ ಭಾಗದ ಕನ್ನಡಿಗರು ಅದರ ಕಂಪನ್ನು ತಪ್ಪದೇ ಆ ಭಾಗದಲ್ಲೂ ಪಸರಿಸುತ್ತಾರೆ. ಹೀಗಾಗಿ, ಬೆಂಗಳೂರು, ಮೈಸೂರುಗಳಂಥ ದಕ್ಷಿಣ ಕರ್ನಾಟಕದ ನಗರದಳಲ್ಲದೇ ದೇಶ–ವಿದೇಶಗಳಲ್ಲೂ ಭಜಿ, ಅದರಲ್ಲೂ ಮಿರ್ಚಿಭಜಿ ಜನಪ್ರಿಯತೆ ಗಳಿಸಿದೆ. ಮಹಾರಾಷ್ಟ್ರದಲ್ಲಿ ವಡಾಪಾವ್‌ಗೆ ಇರುವ ‘ಸ್ಥಾನ–ಮಾನ’ ಉತ್ತರ ಕರ್ನಾಟಕದಲ್ಲಿ ಮಿರ್ಚಿಭಜಿಗೆ ಇದೆ.

ಸಾಮಾನ್ಯವಾಗಿ ಮಿರ್ಚಿಯನ್ನು ಗಿರಮಿಟ್‌ ಜತೆ ಸೇರಿಸಿ ಸೇವಿಸುತ್ತಾರೆ. ಕೆಲವರು ಮಿರ್ಚಿಯನ್ನು ಪುದೀನಾ ಚಟ್ನಿ, ಟೊಮೆಟೊ ಸಾಸ್ ಅಥವಾ ಹುಣಸೇ ಹಣ್ಣಿನ ಪೇಸ್ಟ್‌ ಸೇರಿಸಿ ಪಾವ್‌ (ಬ್ರೆಡ್‌) ಜತೆ ತಿನ್ನಲು ಇಷ್ಟಪಡುತ್ತಾರೆ. ಮತ್ತೆ ಕೆಲವರು ಸುಡುವ ಚಹಾದೊಂದಿಗೆ ಸುಡುವ ಭಜಿಯನ್ನು ಕಚ್ಚಿ ತಿನ್ನುತ್ತಾರೆ. ಸುಡುವ ಚಹಾ–ಸುಡುವ ಭಜಿ ಜತೆ ನಾಲಿಗೆ ಉರಿಸಿ ಕಣ್ಣೀರು ತರಿಸುವಷ್ಟು ಖಾರವಿರುವ ಮೆಣಸಿನಕಾಯಿಯನ್ನು ಕಚ್ಚಿ ತಿನ್ನುವ ಶೈಲಿ ಖಂಡಿತ ‘ಗಂಡುಮೆಟ್ಟಿನ ಶೈಲಿ’ ಎಂದೇ ಹೇಳಬೇಕು.

ಹುಬ್ಬಳ್ಳಿಯ ಶಿರೂರಪಾರ್ಕ್‌ ಸರ್ಕಲ್‌–ತೋಳನಕೆರೆ ರಸ್ತೆಯಲ್ಲಿ ಭಜಿ ಸೆಂಟರ್‌ ಆರಂಭಿಸಿರುವ ಮಹೇಶ್ ಅವರು ಭಜಿ ತಯಾರಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಬಾಣಲೆಯೊಳಗಿನ ಎಣ್ಣೆಯ ಕುದಿತ ಏರುತ್ತ ಹೋದಂತೆ ಹದಗೊಂಡ ಕಡಲೆ ಹಿಟ್ಟಿನೊಳಗೆ ಮಿಂದೆದ್ದು, ಅರ್ಧ ಮೆಣಸಿನಕಾಯಿ ಕಾಣುವಂತೆ ಮುಷ್ಠಿಯೊಳಗಿಂದ ಬಾಣಲೆಗೆ ಇಳಿಯುತ್ತಾ ಹೋಗುತ್ತವೆ. ಅಳ್ಳಕ ಎನಿಸುವ ಹಿಟ್ಟು ತಾನೂ ಬೆಂದು, ತನ್ನೊಳಗಿನ ಮೆಣಸಿನಕಾಯನ್ನೂ ಬೇಯಿಸುವ ಹೊತ್ತಿಗೆ ಬೀದಿ ತುಂಬ ಆಹಾ... ಎನ್ನುವ ಘಮಲು ತುಂಬಿರುತ್ತದೆ!

ಈ ಸಂದರ್ಭದಲ್ಲಿ ಸಂಜೆ ಹೊತ್ತು ವಾಕಿಂಗ್‌ ಮುಗಿಸಿಕೊಂಡು ಬರುತ್ತಿರುವ ಅಜ್ಜ–ಅಜ್ಜಿಯರು, ಕಚೇರಿಯಿಂದ ಮರಳುತ್ತಿರುವ ಅಂಕಲ್–ಅಂಟಿಯಂದಿರು, ಕಾಲೇಜಿನಿಂದ ಮರಳುತ್ತಿರುವ ಕಿಶೋರ–ಕಿಶೋರಿಯರು, ತರಕಾರಿ–ದಿನಸಿ ತರಲು ಬಂದ ಗೃಹಿಣಿಯರು, ಸಿನಿಮಾ ನೋಡಲೆಂದು ಹೋಗುತ್ತಿರುವ ನವದಂಪತಿ, ಪಾರ್ಕ್‌ಗೆ ಹೋಗುತ್ತಿರುವ ಪ್ರೇಮಿಗಳು... ಮನಸ್ಸಿನಲ್ಲಿ ‘ಮೊನ್ನೆ ತಾನೆ ತಿಂದಿದ್ದೇನೆ... ಇಂದು ಮತ್ತೆ ಬೇಡ. ಕುರುಕಲು ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ’ ಅಂದುಕೊಂಡರೂ ಮಿರ್ಚಿಯ ಘಮಲಿಗೆ ಮನಸೋತು ತಮ್ಮ ಸೈಕಲ್, ಬೈಕ್, ಕಾರು ಅಥವಾ ನಡಿಗೆಯನ್ನು ನಿಲ್ಲಿಸಿ ಒಂದೆರಡು ಮಿರ್ಚಿ ಸವಿದೇ ಮುಂದೆ ಹೋಗುತ್ತಾರೆ. ಅವಸರವಿದ್ದವರು ಪಾರ್ಸಲ್‌ ಕಟ್ಟಿಸಿಕೊಂಡು ಹೋಗಿ ಮನೆ ಮಂದಿ ಜತೆ ಸೇರಿ ಮಿರ್ಚಿ ಕಡಿಯುತ್ತಾರೆ.

ಮಿರ್ಚಿ ಸಿದ್ಧಪಡಿಸುವ ವಿಧಾನ:ಮಹೇಶ ಅವರು ಹೇಳುವಂತೆ ‘ಕಡಲೆ ಹಿಟ್ಟು, ಹಸಿ ಮೆಣಸಿನಕಾಯಿ, ಕಾರದ ಪುಡಿ, ಉಪ್ಪು, ಅಡುಗೆ ಸೊಡಾ, ಅಜಿವಾನ, ಗುಣಮಟ್ಟದ ಅಡುಗೆಎಣ್ಣೆ ಬಳಸಿ ಮಾಡುವ ಭಜಿ ತಯಾರಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಹದಭರಿತ ಮಿಶ್ರಣ ತಯಾರಿಸುವ ಕೌಶಲ ಇದಕ್ಕೆ ಅಗತ್ಯ. ಒಂದು ಕಪ್ ಶುದ್ಧ ಕಡಲೆ ಹಿಟ್ಟಿನಲ್ಲಿ ಸ್ವಲ್ಪ ಖಾರದ ಪುಡಿ, 1 ಚಿಟಿಕೆ ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ನೀರನ್ನು ಹಾಕಿ ಕಲಸಿಕೊಳ್ಳಬೇಕು. ಹೆಚ್ಚು ನೀರು ಹಾಕಬಾರದು. 10 ನಿಮಿಷದ ನಂತರ 2 ಕಪ್‌ ಎಣ್ಣೆಯನ್ನು ಕಾಯಿಸಲು ಇಡಬೇಕು. ಎಣ್ಣೆ ಕಾದ ನಂತರ ಹಸಿ ಮೆಣಸಿನಕಾಯಿಯನ್ನು ಕಲಸಿದ ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಬೇಕು. ಅದು ಕಂದು ಬಣ್ಣಕ್ಕೆ ಬರುವವರೆಗೂ ಕರಿಯಬೇಕು. ಆಗ ನಿಮ್ಮ ಪ್ರೀತಿಯ ಮಿರ್ಚಿ ಕಚ್ಚಲು ಸಿದ್ಧ...’

ಸಂಜೆ ನಾಲ್ಕು ಗಂಟೆಗೆ ಭಜಿ ಕರಿಯಲು ಆರಂಭಿಸುವ ಮಹೇಶ ಅವರಿಗೆ ರಾತ್ರಿ 9ರವರೆಗೆ ಬಿಡುವಿಲ್ಲದ ಕೆಲಸ. ದಿನಕ್ಕೆ ಅಂದಾಜು 20 ಕೆ.ಜಿ ಕಡಲೆ ಹಿಟ್ಟು ಖರ್ಚಾಗುತ್ತದೆ. ಮಿರ್ಚಿ ಜತೆ ಆಲೂಗಡ್ಡೆ, ಈರುಳ್ಳಿ ಭಜಿಯನ್ನೂ ಅವರು ತಯಾರಿಸುತ್ತಾರೆ. ಎರಡು ಭಜಿಗೆ ಅವರು ವಿಧಿಸುವ ದರ ₹ 10.

ಗಿರಮಿಟ್‌ ಬಗ್ಗೆ ಒಂದಿಷ್ಟು:ಮೊದಲೇ ಹೇಳಿದಂತೆ ಮಿರ್ಚಿ ಜತೆ ಗಿರಮಿಟ್‌ ಅತ್ಯುತ್ತಮ ಎನ್ನಬಹುದಾದ ಕಾಂಬಿನೇಷನ್. ಹುಬ್ಬಳ್ಳಿ–ಧಾರವಾಡದ ಗಿರಮಿಟ್‌ ಆಯಾ ಪ್ರಾದೇಶಿಕತೆಗೆ ಅನುಗುಣವಾಗಿ ಅಲ್ಪ–ಸ್ವಲ್ಪ ರುಚಿ–ರೂಪ ಬದಲಾವಣೆಯೊಂದಿಗೆ ವಿಭಿನ್ನ ಹೆಸರು ಪಡೆದುಕೊಂಡಿದೆ.

ಇದನ್ನು ಗದಗ–ವಿಜಯಪುರ ಸುತ್ತಮುತ್ತ ‘ಸೂಸಲ’, ಬೆಂಗಳೂರಿನಲ್ಲಿ ‘ಕಡ್ಲೆಪುರಿ (ಬೇಲ್‌ಪುರಿ)’, ದಾವಣಗೆರೆಯಲ್ಲಿ ‘ಮಂಡಕ್ಕಿ ಒಗ್ಗರಣೆ’, ಶಿವಮೊಗ್ಗದಲ್ಲಿ ‘ಮಸಾಲಾ ಮಂಡಕ್ಕಿ’, ಬೆಳಗಾವಿಯಲ್ಲಿ ‘ಭೇಳ್’ ಮತ್ತು ‘ಭಡಂಗ’, ಬೈಲಹೊಂಗಲ ಭಾಗದಲ್ಲಿ ‘ಚುರುಮರಿ ಒಗ್ಗರಣೆ’ ಹಾಗೂ ‘ಸಂಗೀತ’, ರಾಯಚೂರಿನಲ್ಲಿ ‘ಮಂಡಾಳ ಒಗ್ಗರಣೆ’, ಮಂಗಳೂರಿನ ‘ಮಂಡಕ್ಕಿ ಉಪ್ಕರಿ’ ಎಂದು ಕರೆಯುತ್ತಾರೆ.

ಚುರುಮರಿಯನ್ನು ತೋಯಿಸಿ ಅಥವಾ ತೋಯಿಸದೇ ಎರಡೂ ವಿಧಾನದಿಂದ ಗಿರಮಿಟ್‌ ತಯಾರಿಸಬಹುದು. ಒಗ್ಗರಣೆ ಜತೆ ಒಂದಿಷ್ಟು ಪುಟಾಣಿ ಚಟ್ನಿ, ಶೇಂಗಾ, ತುರಿದ ಈರುಳ್ಳಿ, ಗಜ್ಜರಿ, ಕೊಬ್ಬರಿ, ಸವತೆಕಾಯಿ, ಕೊತ್ತಂಬರಿ, ಸೇವ್, ಚೂಡಾ... ಹೀಗೆ ಆಯಾ ಭಾಗದ ಆಹಾರ ಪದ್ಧತಿಗೆ ಅನುಗುಣವಾಗಿ ವಿವಿಧ ಪೂರಕ ಆಹಾರ ಪದಾರ್ಥಗಳನ್ನು ಇದು ಒಳಗೊಂಡು ವಿಭಿನ್ನ ರುಚಿ, ರೂಪ ತಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT