ಶನಿವಾರ, ನವೆಂಬರ್ 23, 2019
18 °C

ಆಹಾ ನಮ್ಮೂರ ಆಹಾರ...ಉಣ್ಣೂದಂದ್ರ...

Published:
Updated:
Prajavani

ಜೋಳ ತಿಂದವ ತೋಳನಾದ, ರೊಟ್ಟಿ ತಿಂದವ ಗಟ್ಟಿಯಾದ, ಜಗಜಟ್ಟಿಯಾದ ಅಂತ ಅನ್ಕೊಂತ ಬಿಸಿರೊಟ್ಟಿ ತಿಂತಿದ್ವಿ. ಸುಡುಸುಡು ರೊಟ್ಟಿಯೊಳಗ ಬೆಣ್ಣಿ ಬಿದ್ದಕೂಡಲೇ ಬ್ಯಾಲೆ ನರ್ತಕಿ ಹಂಗ ಲಾಸ್ಯವಾಡ್ಕೊಂತ ಕರಗ್ತಿತ್ತು. ಇನ್ನ ಅದರ ಮ್ಯಾಲೆ ಸೇಂಗಾ ಹಿಂಡಿ, ಗುರೆಳ್ಳು ಹಿಂಡಿ, ಹುಣಸಿತೊಕ್ಕು, ಏನು ಬೇಕು ಅನ್ನೂದು ನಮ್ಮ ನಮ್ಮ ಮರ್ಜಿಗೆ ಬಿಟ್ಟಿದ್ದಾಗ್ತಿತ್ತು. ತೀರ ಸಣ್ಣೋರಿದ್ರ ಬೆಲ್ಲ ಹಾಕಿನೇ ಕೊಡೂರು.

ಬೆಳದಂಗ ಬೆಳದಂಗ ಪುಡಿಯಿಂದ ಶುರುವಾಗಿದ್ದು, ಬಿಸಿ ರೊಟ್ಟಿ ಝುಣಕದ ಒಡಿ, ಇಲ್ಲಾಂದ್ರ ಉದುರ ಪಿಟ್ಲಾ ಯಾವುದರೆ ಸರಿ, ಈಗಿನ್ಹಂಗ ರೋಲ್‌ ಮಾಡ್ಕೊಂಡು ತಿನ್ನಾಕ ಸಾಥ್‌ ಕೊಡುವ ಖಾದ್ಯಗಳಿವು. ಬಿಸಿ ರೊಟ್ಟಿ, ಖಟಿ ರೊಟ್ಟಿ, ಸಜ್ಜಿ ರೊಟ್ಟಿ, ಧಪಾಟಿ ಏನೇ ಇದ್ರೂ ಮೊಸರು, ಪುಡಿ, ಬೆಣ್ಣಿ, ತುಪ್ಪ ಇದ್ರೊಳಗ ಯಾವುದಿದ್ರೂ ನಮ್ಮ ಹೊಟ್ಟಿ ಸಾಮರ್ಥ್ಯಕ್ಕಿಂತ ಒಂದರ್ಧ ರೊಟ್ಟಿ ಹೆಚ್ಗಿನೆ ಇಳೀತದ.

ಜೋಳ, ಜೋಳದ ರೊಟ್ಟಿ ಇವೆರಡೂ ನಮ್ಮುವ ಮುಖ್ಯ ಆಹಾರ. ಜೋಳ ಕುಟ್ಟಿದ ಬಾನದಿಂದ ಹಿಡಕೊಂಡು, ಖಟಿರೊಟ್ಟಿ ಮುರದು, ಮುಟಗಿ ಮಾಡೂತ, ಬಿಸಿರೊಟ್ಟಿ ಮುದ್ದಿ ಮಾಡ್ಕೊಂಡು ರೊಟ್ಟಿಮುರಿ ಮಾಡ್ಕೊಳ್ಳೂತನಾನೂ ನಮ್ಮ ಜೀವನಪ್ರೀತಿ ಇದರೊಳಗ ಬೆಸದಿಡ್ತೇವಿ.

ಸೋಮವಾರ, ಶುಕ್ರವಾರ, ಅಮವಾಸಿ, ಹುಣ್ಣಿವಿಗೆ ಅಷ್ಟೆ ರೊಟ್ಟಿ ತಟ್ಟುವ ತಾಳಬದ್ಧ ಸದ್ದು ಕೇಳಲಿಕ್ಕಿಲ್ಲ. ಆದ್ರ ಗೋಧಿ ಹದವಾಗಿ ಹಂಚಿನ ಮ್ಯಾಲೆ ಬೇಯಿಸುವ ವಾಸನಿಯಂತೂ ಘಮ್ಮಂತದ. ಚಪಾತಿಯಷ್ಟ ಅಲ್ಲ, ಬೆಲ್ಲದ ಪಾಕನಾಗ ಕೊರದು ಹಾಕಿದ್ರ ಚಕೋಲಿ, ಬ್ಯಾಳಿಯೊಳಗ ಕೊರದ ಹಾಕಿದ್ರ ಖಾರಗಡಬು, ದುಂಡನೆಯ ಉಳ್ಳಿ ಮಾಡಿ, ಮೆಂತ್ಯ ಸೊಪ್ಪಿನ ಜೊತಿಗೆ ಬೇಯಿಸಿದ್ರ ಮೆಂತ್ಯಕಡುಬು. ಉಗಿಯೊಳಗ ಬೇಯಿಸಿ, ಕಡಲಿಬ್ಯಾಳಿ ಹುಗ್ಗಿ ಜೊತಿ ಸವದ್ರ ಉಗಿಗಡಬು. ಹಿಂಗ ಹಿಟ್ಟಿನ ಬಗೆಬಗೆಯ ಖಾದ್ಯಗಳನ್ನು ಮಾಡ್ಕೊಂತ ಆಹಾರ ಆಸ್ವಾದಸ್ತೀವಿ. ಆನಂದಸ್ತೀವಿ. ಕಿರುಗಹಿಯಾಗಿದ್ರೂ, ಹುಳಿಯಾಗಿದ್ರೂ, ಸಿಹಿಸವಿಯಾಗಿದ್ರೂ, ಬೆರಳು ನೆಕ್ಕಿ ಚಪ್ಪರಿಸಿ ಉಣ್ತೀವಿ. ಯಾಕಂದ್ರ ಆಹಾರ ಅಂದ್ರ ಬರೇ ಹೊಟ್ಟಿ ತುಂಬಸೂದಲ್ಲ. ಅದು ಜೀವಭಾವಕೋಶಗಳನ್ನು ಪೊರೆಯುವಂಥದ್ದು.

ವಿಶ್ವ ಆಹಾರ ದಿನ (ಅ.16) ಆಚರಣೆಯಾಗಿಸೂದು, ಇಂಥ ಖಾದ್ಯಗಳ ಪರಿಚಯದಿಂದ. ನಮ್ಮದೇ ಅನ್ನುವಂಥ ಆಹಾರ ಪದ್ಧತಿಯಿಂದ. ತಿಂದುಂಡು ಆರಾಮಾಗಿರೂದು ಅದೃಷ್ಟನೇ ಈ ದಿನಮಾನದೊಳಗ.

ಪ್ರತಿಕ್ರಿಯಿಸಿ (+)