ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಹುಬ್ಬಳ್ಳಿಯ ಜನಪ್ರಿಯ ತಿನಿಸುಗಳು: ಸಾವಜಿ ಖಾನಾ, ಸ್ಪೆಷಲ್ ಮಸಾಲಾ!

Last Updated 16 ಅಕ್ಟೋಬರ್ 2019, 8:49 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ‘ಊಟದ ಮೆನು’ವಿನಲ್ಲಿ ಸಾವಜಿ ಖಾನಾವಳಿಗಳಿಗೆ ವಿಶೇಷ ಸ್ಥಾನ. ಮಾಂಸಾಹಾರಿಗಳಿಗೆ ಪ್ರಿಯವಾದ ತಾಣಗಳಿವು. ಕೆಲವೇ ವರ್ಷಗಳ ಹಿಂದೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಈ ಊಟದ ಮನೆಗಳು ಈಗ ಪ್ರತಿ ಓಣಿಗಳಲ್ಲೂ ಕಾಣಸಿಗುತ್ತಿವೆ. ಹದವಾಗಿ ಬೇಯಿಸಿ ತಯಾರಿಸಿದ ಹತ್ತಾರು ಮಾಂಸಾಹಾರ ಖಾದ್ಯಗಳು ಈ ಹೋಟೆಲ್‌ಗಳ ವಿಶೇಷ. ಚಿಕನ್, ಮಟನ್ ಊಟ ಎಂದರೆ ಸಾವಜಿ ಖಾನಾವಳಿಗೆ ಹೋಗಬೇಕು ಎನ್ನುವಷ್ಟರ ಮಟ್ಟಿಗೆ ಅವು ಪ್ರಸಿದ್ಧ.

ಖಾರಾ ಬೋಟಿ, ಮಟನ್ ಚಾಪ್ಸ್, ಕೀಮಾ ಉಂಡೆ, ಬೇಜಾ ಪ್ರೈ, ಚಿಕನ್ ಡ್ರೈ, ಗೂಟಿ, ತಲೆಮಾಂಸ, ಲೀವರ್‌, ನಾಟಿಕೋಳಿ ಚಿಕನ್‌, ಚಿಕನ್‌ ಮಸಾಲ, ಎಗ್‌ ಕೀಮಾ, ಎಗ್‌ ರೈಸ್, ಎಗ್‌ ಡ್ರೈ, ಕೀಮಾ ರೈಸ್, ಕರಡು ಸ್ಪೆಷಲ್, ಖುಷ್ಕಾ ಬಿರಿಯಾಗಿ ರೈಸ್... ಹೀಗೆ ಈ ಖಾನಾವಳಿಗಳ ಖಾದ್ಯಗಳ ಪಟ್ಟಿ ದೊಡ್ಡದಿದೆ.

ಗ್ರೀನ್‌ ಅಂಡ್ ರೆಡ್ ಶೇರ್ವಾ
ಗ್ರೀನ್‌ ಅಂಡ್ ರೆಡ್ ಶೇರ್ವಾ

ಸಾವಜಿ ಹೋಟೆಲ್‌ಗಳಲ್ಲಿ ಊಟದ ರುಚ್ಚಿ ಹೆಚ್ವಲು ಅವರ ಪಾರಂಪರಿಕ ಅಡುಗೆಯ ಪದ್ಧತಿ ಕಾರಣ. ಮನೆಯಲ್ಲಿ ತಯಾರಿಸುವ ವಿಧಾನದಂತೆ ಹೋಟೆಲ್‌ಗಳಲ್ಲೂ ತಯಾರು ಮಾಡಲಾಗುತ್ತದೆ. ಕಾರ, ಮಸಾಲೆ‌, ಪದಾರ್ಥಗಳ ಮನೆಯಲ್ಲಿ ತಯಾರಿಸಿ ಬಳಸುವುದರಿಂದ ಊಟದ ರುಚಿ ಹೆಚ್ಚಿರುತ್ತದೆ ಎಂಬುದು ಗ್ರಾಹಕರ ಮಾತು.

ಹಳೇ ಹುಬ್ಬಳ್ಳಿಯ ಚನ್ನಪೇಟೆಯ ಪಾಡುರಂಗ ಕಾಲೊನಿಯಲ್ಲಿ ಸಾವಜಿ ಸರ್ಕಲ್ ಇದೆ. ಈ ಚಿಕ್ಕ ಸರ್ಕಲ್‌ವೊಂದರಲ್ಲಿಯೇ ಎಂಟು ಸಾವಜಿ ಖಾನಾವಳಿಗಳಿವೆ. ಟಗರಿನ ಮಾಂಸದ ಕರಡು ಸ್ಪೆಷಲ್, ಎಡಮಿ, ಮಟನ್, ಚಿಕನ್ ಊಟಕ್ಕೆ ಇವು ಪ್ರಸಿದ್ಧವಾಗಿವೆ. ದಶಕಗಳಿಂದಲು ಇಲ್ಲಿಗೆ ಭೇಟಿ ನೀಡಿ ಊಟ ಮಾಡಿದವರಿದ್ದಾರೆ. ಈಗಲೂ ಗ್ರಾಮೀಣ ಪ್ರದೇಶದಿಂದ ವ್ಯಾಪಾರ, ಜವಳಿ ಖರೀದಿಗಾಗಿ ನಗರಕ್ಕೆ ಬರುವ ಜನರು ಊಟ ಮಾಡಲು ‘ಸಾವಜಿ ಸರ್ಕಲ್‌’ಗೆ ತಪ್ಪದೇ ಭೇಟಿ ನೀಡುತ್ತಾರೆ.

ಖಾರಾ ಬೋಟಿ
ಖಾರಾ ಬೋಟಿ

ಎಡಮಿ ಸ್ಪೆಷಲ್: ಸಾವಜಿಯವರು ಮಾಂಸಾಹಾರಿ ಊಟದಷ್ಟೇ ಸಸ್ಯಾಹಾರಿ ತಿನಿಸುಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು. ಮಹಾನವಮಿ ಹಬ್ಬದಲ್ಲಿ ಮಾಡುವ ‘ಎಡಮಿ’ ಎಂಬ ಕುರಕಲು ತಿಂಡಿ ಈಗ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮೈದಾ ಹಿಟ್ಟು, ಹಸಿಕಾರ, ಅಲ್ಪ ಮಸಾಲೆ ಪದಾರ್ಥ ಸೇರಿಸಿ ತಯಾರಿಸುವ ಎಡಮಿ ಸಸ್ಯಾಹಾರಿ ಕುರಕಲು ತಿಂಡಿ. ಹೋಟೆಲ್‌ಗಳಲ್ಲಿ ಊಟಕ್ಕೂ‌ ಮುನ್ನ ಇದನ್ನು ಸೇವಿಸುವ ಗ್ರಾಹಕರಿದ್ದಾರೆ. ನಗರದಲ್ಲಿರುವ ಉತ್ತರ ಕರ್ನಾಟಕದ ರೊಟ್ಟಿ, ಶೇಂಗಾ ಚಟ್ನಿ ಮಾರಾಟ ಮಾಡುವ ಹೋಟೆಲ್‌ಗಳಲ್ಲೂ‌ ಇತ್ತೀಚೆಗೆ ಎಡಮಿ ಪ್ರಸಿದ್ಧವಾಗುತ್ತಿದೆ.

ಎಡಮಿ
ಎಡಮಿ

ಹಳೇ ಹುಬ್ಬಳ್ಳಿಯ ನಂಟು: ಉತ್ತರ ಭಾರತದವರಾದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್.ಎಸ್.ಕೆ) ಸಮಾಜದವರು ನೂರಿನ್ನೂರು ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದು ನೆಲೆಸಿದವರು. ರಾಜ್ಯದಲ್ಲಿ ಅವರು ಹೆಚ್ಚಾಗಿ ನೆಲೆಗೊಂಡಿದ್ದು ಹುಬ್ಬಳ್ಳಿಯಲ್ಲಿಯೇ. ಅದರಲ್ಲೂ ಅವರ ಸಂಖ್ಯೆ ಈಗಲೂ ಹೆಚ್ವಿರುವುದು ಹಳೆಯ ಹುಬ್ಬಳ್ಳಿಯ ಏರಿಯಾಗಳಲ್ಲಿ. ನಾಡಿನ ರಕ್ಷಣೆ ಮಾಡುವ ಕ್ಷತ್ರಿಯ ಕಾಯಕ ಮಾಡಿಕೊಂಡಿದ್ದ ಅವರ ಕ್ರಮೇಣ ವ್ಯಾಪಾರಿ ಕ್ಷೇತ್ರದತ್ತ ಹೊರಳಿದರು. ಆಗ ಶುರುವಾದವುಗಳೇ ಸಾವಜಿ ಖಾನಾವಳಿಗಳು.

‘ನಾವು‌ ಮನೆಯಲ್ಲಿ ಮಾಡುತ್ತಿದ್ದ ಮಾಂಸಾಹಾರಿ ಅಡುಗೆಯನ್ನು ಖಾನಾವಳಿ ಮೂಲಕ ಜನರಿಗೆ ಪರಿಚಯಿಸಿದೆವು. ಈಗ ಎಲ್ಲೆಡೆ ಆ ಊಟ ಪ್ರಸಿದ್ಧವಾಗಿದೆ’ ಎಂದು ಸಮಾಜದ ಹಿರಿಯರಾದ ಪ್ರಭುಸಾ ರಂಗ್ರೇಜ್ ಸ್ಮರಿಸುತ್ತಾರೆ.

ಸಾವಜಿ ಊಟ
ಸಾವಜಿ ಊಟ

ಚಿಕ್ಕ ಸರ್ಕಲ್‌ನಲ್ಲಿ ಎಂಟು ಖಾನಾವಳಿ!

ಹಳೇ ಹುಬ್ಬಳ್ಳಿಯ ಚನ್ನಪೇಟೆಯ ಪಾಡುರಂಗ ಕಾಲೊನಿಯಲ್ಲಿ ಸಾವಜಿ ಸರ್ಕಲ್ ಇದೆ. ಈ ಚಿಕ್ಕ ಸರ್ಕಲ್‌ವೊಂದರಲ್ಲಿಯೇ ಎಂಟು ಸಾವಜಿ ಖಾನಾವಳಿಗಳಿವೆ. ಟಗರಿನ ಮಾಂಸದ ಕರಡು ಸ್ಪೆಷಲ್, ಎಡಮಿ, ಮಟನ್, ಚಿಕನ್ ಊಟಕ್ಕೆ ಇವು ಪ್ರಸಿದ್ಧವಾಗಿವೆ. ದಶಕಗಳಿಂದಲು ಇಲ್ಲಿಗೆ ಭೇಟಿ ನೀಡಿ ಊಟ ಮಾಡಿದವರಿದ್ದಾರೆ. ಈಗಲೂ ಗ್ರಾಮೀಣ ಪ್ರದೇಶದಿಂದ ವ್ಯಾಪಾರ, ಜವಳಿ ಖರೀದಿಗಾಗಿ ನಗರಕ್ಕೆ ಬರುವ ಜನರು ಊಟ ಮಾಡಲು ‘ಸಾವಜಿ ಸರ್ಕಲ್‌’ಗೆ ತಪ್ಪದೇ ಭೇಟಿ ನೀಡುತ್ತಾರೆ.

ನಮ್ಮಲ್ಲಿಗೆ ಅನೇಕ ರಾಜಕಾರಣಿಗಳು ಬಂದು ಊಟ ಮಾಡಿದ್ದಾರೆ. ಹಳ್ಳಿಗಳಿಂದ ಬಂದವರು ಊರಿಗೆ ಮರಳಿದಾಗ ನಮ್ಮ ಹೋಟೆಲ್ ಬಗ್ಗೆ ಇತರರಿಗೂ ಹೇಳಿ ಹೋಟೆಲ್‌ನ ಜನಪ್ರಿಯತೆ ಹೆಚ್ಚಿಸಿದ್ದಾರೆ
ವಿಜಯ್‌ ಎಚ್. ಬದ್ದಿ, ಅಂಬಿಕಾ ಸಾವಜಿ ಹೋಟೆಲ್, ಚನ್ನಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT