ಭಾನುವಾರ, ಜುಲೈ 25, 2021
22 °C
ಎರಡು ವರ್ಷಗಳಿಂದ ನಡೆಯದ ಚಟುವಟಿಕೆ, ಜೀವನಕ್ಕೆ ಆಸರೆಯಾಗಿದ್ದ ಕ್ರೀಡೆ

ಹುಬ್ಬಳ್ಳಿ: ಬದುಕಿಗಾಗಿ ತರಬೇತುದಾರರ ‘ಕುಸ್ತಿ’

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಮೊದಲ ಮತ್ತು ಎರಡನೆ ಅಲೆಯ ಕಾರಣದಿಂದ ಎರಡು ವರ್ಷಗಳಿಂದ ಕುಸ್ತಿಗೆ ಸಂಬಂಧಿಸಿದಂತೆ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಹೀಗಾಗಿ ಕುಸ್ತಿ ಹೇಳಿಕೊಡುವುದನ್ನು ನೆಚ್ಚಿಕೊಂಡಿದ್ದ ತರಬೇತುದಾರರು ಹಾಗೂ ಉಸ್ತಾದ್‌ಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಪ್ರತಿ ವರ್ಷ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮೇಲಿಂದ ಮೇಲೆ ಕುಸ್ತಿ ಸ್ಪರ್ಧೆಗಳು ನಡೆಯುತ್ತಿದ್ದವು. ಸರ್ಕಾರ ಕರ್ನಾಟಕ ಕುಸ್ತಿ ಹಬ್ಬ ಆಯೋಜನೆ ಮಾಡುತ್ತಿತ್ತು. ಊರಿನ ಜಾತ್ರೆಗಳು ಹಾಗೂ ಉತ್ಸವಗಳಲ್ಲಿ ಪೈಲ್ವಾನರ ತೋಳ್ಬಲ ಪ್ರದರ್ಶನವೇ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು.

ನಿರಂತರ ಕುಸ್ತಿ ಸ್ಪರ್ಧೆಗಳು ನಡೆಯುತ್ತಿದ್ದರಿಂದ ಬಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ರೀಡೆಯ ಪಟ್ಟುಗಳನ್ನು ಕಲಿಯುತ್ತಿದ್ದರು. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಗರಡಿ ಮನೆ ಹಾಗೂ ಖಾಲಿ ಪ್ರದೇಶದಲ್ಲಿ ಕುಸ್ತಿ ಹೇಳಿಕೊಡುತ್ತಿದ್ದರಿಂದ ತರಬೇತುದಾರರಿಗೂ ಒಂದಷ್ಟು ಆದಾಯ ಬರುತ್ತಿತ್ತು.

ಸರ್ಕಾರ ನಡೆಸುವ ಸ್ಪರ್ಧೆಗಳಲ್ಲಿ ಸೋತರೂ, ಗೆದ್ದರೂ ಅಥವಾ ಸ್ಪರ್ಧೆಗಳಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡಿದರೂ ಹಣ ಸಿಗುತ್ತಿತ್ತು. ಎರಡು ವರ್ಷಗಳಿಂದ ಈ ಯಾವ ಚಟುವಟಿಕೆಗಳು ನಡೆಯದ ಕಾರಣ ತರಬೇತುದಾರರು ನಿತ್ಯದ ಬದುಕಿಗಾಗಿ ‘ಕುಸ್ತಿ’ ಆಡುವಂತಾಗಿದೆ.

ಧಾರವಾಡದ ಸಿದ್ದೇಶ್ವರ ನಗರದ ಶಂಕರ ಕುಲಾವಿ ಊರೂರುಗಳಿಗೆ ಅಲೆದಾಡಿ ಬೆಳಿಗ್ಗೆಯಿಂದ ಸಂಜೆ ತನಕ ಸ್ಟೇಷನರಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ಕುಸ್ತಿ ಬಗ್ಗೆ ಅತೀವ ಪ್ರೀತಿ ಹೊಂದಿರುವ ಅವರು ಸಂಜೆ 42 ಮಕ್ಕಳಿಗೆ ಕುಸ್ತಿ ಕಲಿಸಿಕೊಡುತ್ತಿದ್ದರು. ಇದಕ್ಕಾಗಿ ಅಖಾಡ ನಿರ್ಮಿಸಿಕೊಡುವಂತೆ ಜಿಲ್ಲೆಯ ಜನಪ್ರತಿನಿಧಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಅವರ ಆಸೆ ಈಡೇರಿಲ್ಲ.

‘ಸುಡುಗಾಡು ಸಿದ್ಧ’ ಜನಾಂಗದ ಶಂಕರ ಛಲ ಬಿಡದೆ ತಮಗಿರುವ ಜಾಗದಲ್ಲಿ ಕುಸ್ತಿ ಹೇಳಿಕೊಡುತ್ತಿದ್ದರು. ಸ್ವಂತ ದುಡ್ಡಿನಿಂದ ಬಾಲ ಪೈಲ್ವಾನರಿಗೆ ವಾರಕ್ಕೆ ಒಂದು ದಿನ ಹಾಲು, ಸಜ್ಜಕ (ಸಿಹಿ ತಿನಿಸು) ಕೊಡುತ್ತಿದ್ದರು. ಸ್ಪರ್ಧೆಗಳು ಆಯೋಜನೆಯಾದರೆ ಅವರಿಗೆ ಒಂದಷ್ಟು ಹಣ ಬರುತ್ತಿತ್ತು. ಈಗ ಸ್ಪರ್ಧೆಗಳೂ ಇಲ್ಲ; ಹಣವೂ ಇಲ್ಲದಂತಾಗಿದೆ.

ಈ ಕುರಿತು ಪ್ರಜಾವಾಣಿ ಜೊತೆ ಮಾತನಾಡಿದ ಶಂಕರ ‘ಬಯಲುಗಣದಲ್ಲಿ ಕುಸ್ತಿ ಆಡಿಸಿದರೆ ಒಂದಷ್ಟು ಹಣ ಬರುತ್ತಿತ್ತು. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಗಳಿಸಿಕೊಳ್ಳಲು ಕುಸ್ತಿ ಪಟುವಿನ ತಯಾರಿ ಮತ್ತು ಆಹಾರಕ್ಕೆ ಕನಿಷ್ಠ ₹500ರಿಂದ ₹600 ಖರ್ಚಾಗುತ್ತದೆ. ಅಷ್ಟೊಂದು ಹಣ ಖರ್ಚು ಮಾಡುವ ಶಕ್ತಿ ಈಗಿನ ಪರಿಸ್ಥಿತಿಯಲ್ಲಿ ಯಾರಿಗೂ ಇಲ್ಲ. ಸ್ಪರ್ಧೆಗಳು ನಡೆಯುತ್ತಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು.

***

ಕೋವಿಡ್‌ ಕಾರಣದಿಂದ ಕುಸ್ತಿ ಸ್ಪರ್ಧೆಗಳು ನಡೆಯುತ್ತಿಲ್ಲ. ಕುಸ್ತಿಪಟುಗಳು ಮೊದಲು ಲಸಿಕೆ ಹಾಕಿಸಿಕೊಳ್ಳಬೇಕು. ಸದ್ಯಕ್ಕೆ ಫಿಟ್‌ನೆಸ್‌ಗೆ ಅಭ್ಯಾಸ ಮಾಡಬೇಕು.

- ಶ್ರೀನಿವಾಸ ಶಾಸ್ತ್ರಿ, ಜಿಲ್ಲಾ ಕುಸ್ತಿ ಸಂಘದ ಗೌರವ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು