ಬುಧವಾರ, ಜೂನ್ 16, 2021
21 °C
ಸಂಕಷ್ಟಕ್ಕೆ ಸಿಲುಕಿದ ಕ್ರೀಡಾ ಕೇಂದ್ರಗಳು, ಚಟುವಟಿಕೆ ಇಲ್ಲದಿದ್ದರೂ ನಿರ್ವಹಣೆ ಅನಿವಾರ್ಯ

ಹುಬ್ಬಳ್ಳಿ: ಬೇಸಿಗೆ ಶಿಬಿರಕ್ಕೆ ಮತ್ತೆ ಸೋಂಕಿನ ಬರೆ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪ್ರತಿ ವರ್ಷದ ಬೇಸಿಗೆ ಬಂದಾಕ್ಷಣ ಅವಳಿ ನಗರಗಳ ಕ್ರೀಡಾ ಮೈದಾನಗಳು ತುಂಬಿರುತ್ತಿದ್ದವು. ವಿವಿಧ ಕ್ರೀಡೆಗಳ ತರಬೇತಿಗಾಗಿ ಪೋಷಕರು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು. ಆದರೆ, ಎರಡು ವರ್ಷಗಳಿಂದ ಬೇಸಿಗೆ ಶಿಬಿರಗಳ ಸಮಯದಲ್ಲಿಯೇ ಕೋವಿಡ್‌ ಹೆಚ್ಚಳವಾಗಿದ್ದು, ಕ್ರೀಡಾ ತರಬೇತಿ ಕೇಂದ್ರಗಳ ಮಾಲೀಕರನ್ನು ‌ಸಂಕಷ್ಟಕ್ಕೆ ದೂಡಿದೆ.

ಕ್ರೀಡಾ ಕೇಂದ್ರಗಳು ವರ್ಷಪೂರ್ತಿ ತರಬೇತಿ ನೀಡಿದರೂ ಪ್ರತಿವರ್ಷ ಬೇಸಿಗೆ ಶಿಬಿರದಲ್ಲಿ ದೊಡ್ಡ ಮಟ್ಟದಲ್ಲಿ ಆದಾಯ ಗಳಿಸಿಕೊಳ್ಳುತ್ತಿದ್ದವು. ಇದರಿಂದ ವರ್ಷಪೂರ್ತಿ ನಿರ್ವಹಣೆಗೆ ಬೇಕಾದಷ್ಟು ಹಣ ಸಿಗುತ್ತಿತ್ತು. ಶೈಕ್ಷಣಿಕ ರಜೆಯೂ ಇರುತ್ತಿದ್ದರಿಂದ ಮಕ್ಕಳು ಕ್ರೀಡಾ ತರಬೇತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಕ್ರಿಕೆಟ್‌, ಬ್ಯಾಡ್ಮಿಂಟನ್‌, ಚೆಸ್‌, ಈಜು, ಅಥ್ಲೆಟಿಕ್‌, ಶೂಟಿಂಗ್‌ ಹೀಗೆ ಹಲವು ಕ್ರೀಡೆಗಳಿಗೆ ಬೇಡಿಕೆ ಇರುತ್ತಿತ್ತು.

ಉತ್ತಮ ಸೌಲಭ್ಯಗಳಿವೆ ಎನ್ನುವ ಕಾರಣಕ್ಕೆ ಹುಬ್ಬಳ್ಳಿ, ಧಾರವಾಡದಲ್ಲಿ ಕ್ರಿಕೆಟ್‌ ಹಾಗೂ ಬ್ಯಾಡ್ಮಿಂಟನ್‌ ತರಬೇತಿ ಪಡೆಯಲು ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಯುವ ಕ್ರೀಡಾಪಟುಗಳು ಬರುತ್ತಿದ್ದರು.

ಪ್ರತಿ ವರ್ಷ ಸಾಮಾನ್ಯವಾಗಿ ಏಪ್ರಿಲ್‌ ಮೊದಲ ವಾರದಿಂದ ಜೂನ್‌ ಅಂತ್ಯದವರೆಗೆ ಬೇಸಿಗೆ ಶಿಬಿರಗಳು ನಡೆಯುತ್ತಿದ್ದವು. ಈಗ ಕೋವಿಡ್‌ ಕಾರಣದಿಂದಾಗಿ ಎರಡು ವರ್ಷಗಳಿಂದ ಶಿಬಿರ ನಡೆದಿಲ್ಲ. ಹೋದ ವರ್ಷ ಮಾರ್ಚ್‌ನಲ್ಲಿ ಸೋಂಕು ಕಾಣಿಸಿಕೊಂಡಿತು. ಈ ಸಲದ ಶಿಬಿರದ ಆರಂಭದ ಅವಧಿಯಲ್ಲಿ ಎರಡನೇ ಅಲೆ ವೇಗ ಪಡೆದುಕೊಂಡಿತು.

ಈ ವರ್ಷ ಮಾರ್ಚ್‌ನಲ್ಲಿ ಸೋಂಕಿನ ಏರುಗತಿ ನಿಧಾನವಾಗಿದ್ದರಿಂದ ಕ್ರೀಡಾ ಅಕಾಡೆಮಿಗಳು ತರಬೇತಿಯ ಮಾಹಿತಿ ಪತ್ರಗಳನ್ನು ಮುದ್ರಿಸಿದ್ದವು. ಪ್ರವೇಶಾತಿಯನ್ನೂ ಪಡೆದುಕೊಂಡಿದ್ದವು. ದಿಢೀರನೆ ಏರಿದ ಸೋಂಕಿತರ ಪ್ರಕರಣಗಳಿಂದಾಗಿ ತರಬೇತಿ ಶಿಬಿರಗಳನ್ನು ಅರ್ಧದಲ್ಲಿಯೇ ಮೊಟಕುಗೊಳಿಸಲಾಯಿತು. ಹೀಗಾಗಿ ಕ್ರೀಡಾ ಅಕಾಡೆಮಿಗಳು ಮೈದಾನಗಳ ನಿರ್ವಹಣೆ, ಸಿಬ್ಬಂದಿ ವೇತನ, ವಿದ್ಯುತ್‌ ಬಿಲ್‌, ಕಟ್ಟಡ ಬಾಡಿಗೆ, ಕ್ರೀಡಾ ಸಾಮಗ್ರಿಗಳ ಸ್ವಚ್ಚತೆಗೆ ಸ್ವಂತ ಹಣ ಖರ್ಚು ಮಾಡಬೇಕಾಗಿದೆ.

‘ಅಥ್ಲೆಟಿಕ್ಸ್‌, ಕ್ರಿಕೆಟ್‌, ಬ್ಯಾಡ್ಮಿಂಟನ್‌, ಫುಟ್‌ಬಾಲ್‌, ಏರೋಬಿಕ್ಸ್‌ ಕ್ರೀಡೆಗಳ ಕಲಿಕೆಗೆ ನಿತ್ಯ 100 ಜನ ಬರುತ್ತಿದ್ದರು. ಹೋದ ವರ್ಷದ ಕೋವಿಡ್‌ ಸಂಕಷ್ಟದಿಂದ ಹೊರಬಂದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದೆವು. ಪ್ರತಿ ವರ್ಷ ದೊಡ್ಡ ಮೊತ್ತದ ಆದಾಯ ತಂದುಕೊಡುತ್ತಿದ್ದ ಬೇಸಿಗೆ ಶಿಬಿರದ ಅವಧಿಯಲ್ಲಿಯೇ ಮತ್ತೆ ಕೋವಿಡ್‌ ಬಂದಿದ್ದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ’ ಎಂದು ಹುಬ್ಬಳ್ಳಿಯ ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್‌ನ ಸ್ಥಾಪಕ ಹಾಗೂ ಅಥ್ಲೆಟಿಕ್‌ ಕೋಚ್‌ ವಿಲಾಸ ನೀಲಗುಂದ ನೋವು ತೋಡಿಕೊಂಡರು.

***

ಕಟ್ಟಡದ ಮಾಲೀಕರು ದೊಡ್ಡ ಮನಸ್ಸು ಮಾಡಿ ಬಾಡಿಗೆ ವಿನಾಯಿತಿ ನೀಡಿದರಷ್ಟೇ ಅಕಾಡೆಮಿ ನಡೆಸಲು ಸಾಧ್ಯವಾಗುತ್ತದೆ. ಎಲ್ಲ ಕ್ರೀಡಾ ಸಂಸ್ಥೆಗಳು ಇದೇ ಸಂಕಷ್ಟಕ್ಕೆ ತಲುಪಿವೆ.
-ರವಿಚಂದ್ರ ಬಾಲೆಹೊಸೂರು, ಮುಖ್ಯಸ್ಥ, ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್‌ ಅಕಾಡೆಮಿ

***

ಬೇಸಿಗೆ ಶಿಬಿರದಿಂದ ಉತ್ತಮ ಆದಾಯ ಲಭಿಸುತ್ತಿತ್ತು. ಈಗ ಆದಾಯವಂತೂ ದೂರದ ಮಾತಾಯಿತು. ಮೈದಾನದ ನಿರ್ವಹಣೆಗೆ ಮಾಸಿಕ ₹80 ಸಾವಿರ ಖರ್ಚಾಗುತ್ತಿದೆ.
-ಶಿವಾನಂದ ಗುಂಜಾಳ, ಮುಖ್ಯಸ್ಥ, ಬಾಣಜಿ ಡಿ. ಕಿಮ್ಜಿ ಕ್ರಿಕೆಟ್ ಅಕಾಡೆಮಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.