ರಂಜಿಸಿ, ಚಿಂತನೆಗೆ ಹಚ್ಚಿದ ಯಂಡಮೂರಿ ಮಾತು

7
ಆದರ್ಶ ಕಾಲೇಜಿನಲ್ಲಿ ಖ್ಯಾತ ಬರಹಗಾರ ಯಂಡಮೂರಿ ವೀರೇಂದ್ರನಾಥ್ ವಿಶೇಷ ಉಪನ್ಯಾಸ

ರಂಜಿಸಿ, ಚಿಂತನೆಗೆ ಹಚ್ಚಿದ ಯಂಡಮೂರಿ ಮಾತು

Published:
Updated:
Deccan Herald

ಹುಬ್ಬಳ್ಳಿ: ವೇದಿಕೆ ಮೇಲೆ ನಿಂತು ಹರಳು ಹುರಿದಂತೆ ಮಾತನಾಡುತ್ತಾ, ಸಂವಾದಕ್ಕೆ ಜತೆಯಾದ ವಿದ್ಯಾರ್ಥಿಗಳಿಗೆ ಚಾಕಲೇಟ್‌ ನೀಡುತ್ತಿದ್ದ ಆ ವ್ಯಕ್ತಿಯ ಮಾತುಗಳು ಅಲ್ಲಿದ್ದವರಲ್ಲಿ ನಗು, ಆಶ್ಚರ್ಯ, ಚಿಂತನೆ, ಪ್ರೇರಣೆ, ಬದಲಾವಣೆ ಮಾರ್ಗ ಇಷ್ಟು ಸುಲಭವಾ... ಎಂಬ ಉದ್ಗಾರಗಳನ್ನು ಮುಖದಲ್ಲಿ ಮೂಡಿಸುತ್ತಿತ್ತು. ಎವೆಯಿಕ್ಕದೆ ಆಲಿಸಿದ ಎರಡು ತಾಸಿನ ನಿರಂತರ ಉಪನ್ಯಾಸ ಮತ್ತಷ್ಟು ಬೇಕಿತ್ತು ಎಂಬ ಭಾವ ಅಲ್ಲಿದ್ದವರಲ್ಲಿ ಎದ್ದು ಕಾಣುತ್ತಿತ್ತು.

ಶಿಕ್ಷಕರ ದಿನಾಚರಣೆ ಅಂಗವಾಗಿ, ಲಿಂಗರಾಜನಗರದ ಆದರ್ಶ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ಎ ಡೇ ವಿತ್ ಯಂಡಮೂರಿ ವೀರೇಂದ್ರನಾಥ್‌’ ವಿಶೇಷ ಉಪನ್ಯಾಸದಲ್ಲಿ ಕಂಡುಬಂದ ದೃಶ್ಯವಿದು.

‘ಯಶಸ್ಸು ಎಂದರೇನು?’ ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳಲ್ಲಿ ಪುಂಖಾನುಪುಂಖವಾಗಿ ವ್ಯಾಖ್ಯಾನ ನೀಡುತ್ತಿದ್ದನ್ನು ಆಲಿಸಿದ ಯಂಡಮೂರಿ, ‘ನನ್ನ ಪ್ರಕಾರ ಯಶಸ್ಸು ಎಂದರೆ, ಇಂದು ನನ್ನ ಮುಖದಲ್ಲಿರುವ ನಗು ನಾಳೆಯೂ ಇರುತ್ತದೆ ಎಂಬ ವಿಶ್ವಾಸವೇ ಯಶಸ್ಸು’ ಎಂದಾಗ ಎಲ್ಲರದೂ ಮೌನ ಸಮ್ಮತಿ.

‘ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ ಚಿತ್ರ ಯಾವುದು? ದಂಗಲ್ ಚಿತ್ರದ ನಾಯಕ ಯಾರು?’ ಎಂಬ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದ ಕ್ರಮವಾಗಿ ‘ಗೋಲ್ಡ್‌’, ‘ಅಮಿರ್‌ಖಾನ್‌’ ಎಂಬ ಉತ್ತರಗಳು ತೂರಿ ಬಂದವು. ‘ಹಾಗಾದರೆ, ಆರ್ಕಿಮಿಡಿಸ್ ಸಿದ್ಧಾಂತ ಏನು?’ ಎಂದಾಗ ಸಭಾಂಗಣದಲ್ಲಿ ಮೌನ ಆವರಿಸಿತು.

‘ಓದುವ ವಯಸ್ಸಿನಲ್ಲಿ ನಿಮ್ಮ ಆದ್ಯತೆ ಏನಾಗಿರಬೇಕು ಎಂಬುದನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ಪಠ್ಯಕ್ಕೆ ಸಂಬಂಧವೇ ಇಲ್ಲದ ಸಿನಿಮಾ ಬಗ್ಗೆ ಕೇಳಿದಾಗ, ಸರಿಯಾಗಿ ಉತ್ತರಿಸುವ ನೀವು, ಪಠ್ಯದ ವಿಷಯವೊಂದನ್ನು ಕೇಳಿದಾಗ ಮೌನವಾಗುತ್ತೀರೆಂದರೆ, ಓದಿನೆಡೆಗಿನ ನಿಮ್ಮ ಆಸಕ್ತಿ ಬೇರೆಡೆಗೆ ತಿರುಗಿದೆ. ಅದನ್ನು ನಿಮ್ಮತ್ತ ತಿರುಸಿಕೊಂಡೆರೆ, ಪಠ್ಯ ಮತ್ತು ಪಠ್ಯೇತರ ವಿಷಯಗಳಲ್ಲೂ ನೀವು ಜಾಣರಾಗುತ್ತೀರಿ’ ಎಂದು ಕಿವಿಮಾತು ಹೇಳಿದರು.

‘ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರತಿ ಬಾರಿ ಶತಕ ಬಾರಿಸಿದಾಗ, ಮೂರ್ನಾಲ್ಕು ಬಾರಿ ಬ್ಯಾಟ್‌ ಮೇಲಕ್ಕೆತ್ತುತ್ತಾನೆ. ಆತನ ಬ್ಯಾಟ್‌ನಲ್ಲಿರುವ ಎಂಆರ್‌ಎಫ್‌ ಸ್ಟಿಕ್ಕರ್‌ ಆಗ ಎದ್ದು ಕಾಣುತ್ತದೆ. ಇದಕ್ಕಾಗಿ, ಆತ ಇನ್ಸೆಂಟಿವ್ ರೂಪದಲ್ಲಿ ₹ 30 ಲಕ್ಷ ಪಡೆಯುತ್ತಾನೆ. ಪಂದ್ಯ ಗೆದ್ದ ಬಳಿಕ, ಗಣ್ಯರ ಭೇಟಿ, ಅವರೊಂದಿಗೆ ಭೋಜನ... ಹೀಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಆತ, ಬೆಳಿಗ್ಗೆ 5ರ ಹೊತ್ತಿಗೆ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುತ್ತಾನೆ. ಇದೆಲ್ಲವನ್ನೂ ಟಿ.ವಿ.ಯಲ್ಲಿ ನೋಡುವ ನಾವು, ಪ್ರತಿ ತಿಂಗಳು ₹300 ಕೇಬಲ್ ಶುಲ್ಕ ಪಾವತಿಸುತ್ತೇವೆ. ನಮ್ಮೊಳಗೂ ಅವನಂತಹ ಸಾಧನೆಯ ಪ್ರೇರಣೆ ಮೊಳಕೆಯೊಡೆಯಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ’ ಎಂದು ನಿದರ್ಶನ ನೀಡಿದರು.

‘ಜ್ಞಾನದ ಜತೆಗೆ ಧೈರ್ಯ, ನಿರಂತರ ಶ್ರಮ, ವಿನಯ, ಹೊಸದರ ತುಡಿತ, ಉತ್ತಮ ಸಂವಹನ ಎಂತಹವರನ್ನೂ ಸಾಧನೆಗೆ ಪ್ರೇರೇಪಿಸುತ್ತವೆ. ಅದನ್ನು ವಿದ್ಯಾರ್ಥಿದೆಸೆಯಲ್ಲೇ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನಿಡಿದರು.

ಶ್ರೀ ಸದಾಶಿವ ವಿದ್ಯಾವರ್ಧಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕರಾರ, ನಿರ್ದೇಶಕರಾದ ಲಿಂಗರಾಜ ಪಾಟೀಲ, ಪ್ರೊ. ಎಸ್‌.ಬಿ. ಕುನ್ನೂರ, ಪ್ರೊ.ಬಿ.ಸಿ. ಗೌಡರ್ ಹಾಗೂ ಪ್ರೊ. ಡೇನಿಯಲ್ ಹೊಸಕೇರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !