ಸೋಮವಾರ, ಫೆಬ್ರವರಿ 24, 2020
19 °C

ಯೋಗ ವಿಜ್ಞಾನವೂ ಹೌದು, ದೇಶಭಕ್ತಿಯೂ ಹೌದು: ವೆಂಕಯ್ಯ ನಾಯ್ಡು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ:  ಯೋಗಾಭ್ಯಾಸವು ಸುಂದರ ಕಲೆಯೂ ಹೌದು , ವಿಜ್ಞಾನವೂ ಹೌದು; ನಿತ್ಯ ಯೋಗಾಸನ ಮಾಡಿ ದೇಶಭಕ್ತಿ ತೋರುವ ಜೊತೆಗೆ ಅಮೂಲ್ಯ ಮಾನವ ಸಂಪತ್ತು ನಿರ್ಮಿಸಬಹುದು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರದಲ್ಲಿ ಭಾನುವಾರ ಮಾತನಾಡಿದರು.

ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ತೆಲುಗು ಭಾಷೆಯಲ್ಲಿ ಮಾತನಾಡಿದರು.

ಯೋಗಗುರು ಬಾಬಾ ರಾಮದೇವ್ ಅವರು ದೇಶದ ಎಲ್ಲ ಭಾಗಗಳಲ್ಲೂ  ಪತಂಜಲಿ ಯೋಗ ತಲುಪಿಸಿದ್ದಾರೆ. ಅವರು ವಯಸ್ಸಿನಲ್ಲಿ ನನಗಿಂತಲೂ ಚಿಕ್ಕವರಾಗಿದ್ದರೂ ಅವರ ಯೋಗ ಕೌಶಲಕ್ಕಾಗಿ ಅವರನ್ನು ಮೆಚ್ಚಿ ನಾನೂ ಕೂಡ ಗುರು ಎಂದು ಕರೆಯುವುದಾಗಿ ತಿಳಿಸಿದರು.

ನಾಗರಿಕರು, ಯೋಗದ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಯೋಗಾಭ್ಯಾಸವೂ ಕೂಡ ದೇಶಭಕ್ತಿಯಾಗಿದೆ. ಯೋಗಾಸವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯಕ್ಕೆ ಬೇಕು.ಯೋಗವು ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಪ್ರಾಚೀನ ಕೊಡುಗೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ ಅಂತರರಾಷ್ಟ್ರೀಯ ಯೋಗ ದಿನ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.ಕೋಸ್ಟರಿಕಾ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿನ ಶಾಲೆಗಳಲ್ಲಿ ಯೋಗಾಭ್ಯಾಸ ಕಡ್ಡಾಯಗೊಳಿಸಿದ್ದು ಕಂಡು ಸಂತಸವಾಯಿತು ಎಂದರು.

ವಸು ದೈವ ಕುಟುಂಬಕಂ ಕಲ್ಪನೆಯನ್ನು ಜಗತ್ತಿಗೆ ಭಾರತೀಯರು ನೀಡಿದ್ದಾರೆ. ಆಧುನಿಕ ದಿನಗಳಲ್ಲಿ ಟಿವಿ ಮಾಧ್ಯಮಗಳು ಅನೇಕ ಬೇಕು , ಬೇಡವಾದ ಕಾರ್ಯಕ್ರಮಗಳ ಪ್ರಸಾರ ಮಾಡುತ್ತಿರುವ ಮಧ್ಯೆಯೂ ಯೋಗಾಸನ ಪ್ರಸಾರ ಮಾಡುತ್ತಿರುವುದು ಸಂತಸ ತಂದಿದೆ. 

ನಮ್ಮ ಆರೋಗ್ಯ ರಕ್ಷಣೆಗೆ ಯೋಗ ಸರಳ ಮತ್ತು ಉಚಿತ ಸೂತ್ರವಾಗಿದೆ. ಮನಸ್ಸು ಕೇಂದ್ರೀಕರಿಸಿದರೆ ನಮ್ಮ ಎಲ್ಲಾ ಒತ್ತಡಗಳನ್ನು ನಿವಾರಿಸಿಕೊಳ್ಳಬಹುದು. ದೇಶದ ಜನಸಂಖ್ಯೆಯಲ್ಲಿ ಶೇ 60ರಷ್ಟು ಜನ 35 ವರ್ಷದೊಳಗಿನವರಿದ್ದಾರೆ.

ಯುವಜನತೆ ಸ್ವಯಂ ನಿಯಂತ್ರಣ, ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಬದಲಾದ ಆಹಾರ ಪದ್ಞತಿಯಿಂದ ಆರೋಗ್ಯ  ಕಳೆದುಕೊಳ್ಳುತ್ತಿದ್ದಾರೆ. ಸರಳ ಯೋಗಾಭ್ಯಾಸದಿಂದ ದೇಶಕ್ಕೆ ಅವರು ಅಮೂಲ್ಯ ಸಂಪತ್ತಾಗಬಹುದು  ಎಂದು‌ ಹೇಳಿದರು.

ಪ್ರತಿವರ್ಷ ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲು ವಿಶ್ವಸಂಸ್ಥೆ ಘೋಷಿಸುವ ಸಂದರ್ಭದಲ್ಲಿ ಯೋಗದ ಮಹತ್ವವನ್ನು ಸಾರಿ ಹೇಳಿದೆ.  ಜಗತ್ತಿನ ಎಲ್ಲಾ ದೇಶಗಳು ಯೋಗದ ಕಡೆಗೆ ವಾಲುತ್ತಿವೆ. ಭಾರತ ತನ್ನ ಇತಿಹಾಸದಲ್ಲಿ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ, ಭಾರತೀಯ ಸಮಾಜದ ಹಿಂದೂ ಧರ್ಮ ಕೇವಲ ಧರ್ಮವಷ್ಟೇ ಅಲ್ಲ,   ಶ್ರೇಷ್ಠ ಜೀವನ ಪದ್ಧತಿಯಾಗಿದೆ.
ಶರೀರ ,ಮನಸ್ಸು ಮತ್ತು ಆತ್ಮಗಳ ಏಕಾಗ್ರತೆಯಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸುಲಭ ಎಂದರು.

ನಾನು ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳಲ್ಲಿ ಕೆಲವು ಯೋಗಾಸನ ಕಲಿತಿದ್ದೇನೆ. ನನಗೆ ಈಗ 70 ವರ್ಷ ಸಮೀಪಿಸುತ್ತಿದ್ದರೂ ಪ್ರತಿನಿತ್ಯ ಒಂದು ತಾಸು ಬ್ಯಾಡ್ಮಿಂಟನ್ ಆಟವಾಡಿ, ಯೋಗ ಮಾಡುತ್ತೇನೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬೀದರ್ ಸಂಸದ ಭಗವಂತ ಖೂಬಾ, ಉದ್ಯಮಿ ಆನಂದ ಸಂಕೇಶ್ವರ, ಪತಂಜಲಿ ಯೋಗ ಸಮಿತಿಯ ಕರ್ನಾಟಕದ ಮುಖ್ಯಸ್ಥ ಭವರಲಾಲ್ ಆರ್ಯ ಮತ್ತಿತರರು, ಜಿಲ್ಲಾಧಿಕಾರಿ ದೀಪಾ ಚೋಳನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು