ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಜನ ಗೊಂದಲ ಪಡಬೇಕಿಲ್ಲ: ಶೆಟ್ಟರ್‌

ವಾರ್‌ ರೂಮ್‌ ಮಾಹಿತಿ ಆಧರಿಸಿ ಅನ್‌ಲಾಕ್‌ ಆದೇಶದಲ್ಲಿ ಜಿಲ್ಲೆ ಹೆಸರು ಕೈಬಿಡಲಾಗಿತ್ತು: ಶೆಟ್ಟರ್‌
Last Updated 20 ಜೂನ್ 2021, 12:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಐಸಿಎಂಆರ್ ವರದಿಯಲ್ಲಿ ಜಿಲ್ಲೆಯ ಪಾಸಿಟಿವಿಟಿ ದರ ಶೇ 5ಕ್ಕಿಂತಲೂ ಕಡಿಮೆಯಿದೆ. ಆದರೆ, ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಭೆಗೆ ವಾರ್ ರೂಮ್‌ನಿಂದ ಧಾರವಾಡ ಜಿಲ್ಲೆಯ ಪಾಸಿಟಿವಿ ದರ ಶೇ 5.7ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಇದರಿಂದ ಅನ್‌ಲಾಕ್ ಆದೇಶದಲ್ಲಿ ಜಿಲ್ಲೆಯ ಹೆಸರು ಕೈಬಿಟ್ಟಿತ್ತು’ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಹಾಗೂ ಕೋವಿಡ್ ಲಸಿಕಾ ಅಭಿಯಾನದ ಕುರಿತು ಅಧಿಕಾರಿಗಳ ಸಭೆ ನಡೆಸಿ, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

‘ಸರ್ಕಾರ ಹೊರಡಿಸಿದ ಪರಿಷ್ಕೃತ ಅನ್‌ಲಾಕ್ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಯಥಾವತ್ತಾಗಿ ಪಾಲಿಸಲಾಗುವುದು. ವ್ಯಾಪಾರ ವಹಿವಾಟಿಗೆ ಸಮಯ ಹೆಚ್ಚಿಸಲಾಗಿದೆ. ಬಿಆರ್‌ಟಿಎಸ್ ಸೇರಿದಂತೆ ಅಂತರ ಜಿಲ್ಲಾ ಬಸ್ ಓಡಾಟ ಪ್ರಾರಂಭಿಸಲಾಗುವುದು. ಅಂತರ ರಾಜ್ಯ ಬಸ್ ಓಡಾಟಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

‘ಜೂನ್ 21 ರಂದು ಕೋವಿಡ್ ಲಸಿಕಾ ಮೇಳಕ್ಕೆ ಚಾಲನೆ ನೀಡಲಾಗುವುದು. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಹಾಗೂ 18 ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನವರಿಗೆ ಲಸಿಕೆ ನೀಡಲಾಗುವುದು. ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪಿಗೆ ಸೇರಿದವರು ಮಾತ್ರ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬೇಕು. ಯುವ ಜನರು ಗೊಂದಲಕ್ಕೆ ಒಳಗಾಗುವುದು ಬೇಡ’ ಎಂದು ಹೇಳಿದರು.

‘ಅಗತ್ಯ ಪ್ರಮಾಣದಲ್ಲಿ ಲಸಿಕೆ ಜಿಲ್ಲೆಗೆ ಲಭ್ಯವಾಗಲಿದ್ದು, ಯಾರೂ ಅವರಸ ಪಡುವ ಅಗತ್ಯವಿಲ್ಲ‌. ಹೆಚ್ಚಿನ ಲಸಿಕೆ ಬಂದಾಗ ಕೈಗಾರಿಕೆ ಪ್ರದೇಶ ಸೇರಿದಂತೆ ಹೆಚ್ಚು ಮಂದಿ ಸೇರುವಲ್ಲಿ ಲಸಿಕೆ ಅಭಿಯಾನ ಆಯೋಜಿಸಲಾಗುವುದು. ಎಲ್ಲರಿಗೂ ಲಸಿಕೆ ನೀಡುವುದೇ ಕೋವಿಡ್ ಮೂರನೇ ಅಲೆ ಎದುರಿಸಲು ಕೈಗೊಳ್ಳುವ ಸಿದ್ಧತೆಯಾಗಿದೆ’ ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಕಮಿಷನರ್‌ ಲಾಬೂರಾಮ್‌, ಜಿ.ಪಂ. ಸಿಇಒ ಡಾ.ಬಿ. ಸುಶೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್, ಉಪ ವಿಭಾಗಾಧಿಕಾರಿ ಗೋಪಾಲಕೃಷ್ಣ, ಡಿಎಚ್‌ಒ ಡಾ. ಯಶವಂತ ಮದೀನಕರ್, ಡಾ. ಎಸ್.ಎಂ. ಹೊನಕೇರಿ, ತಹಶೀಲ್ದಾರ್ ಶಶಿಧರ ಮಾಡ್ಯಾಳ ಇದ್ದರು.

ಲಸಿಕಾ ಮೇಳಕ್ಕೆ ಚಾಲನೆ ಇಂದು

‘ಜಿಲ್ಲೆಯಲ್ಲಿ ಸದ್ಯ 38,020 ಕೋವಿಶೀಲ್ಡ್, 12,460 ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 50,480 ಲಸಿಕೆ ಲಭ್ಯವಿದೆ. ಜೂನ್ 21 ರಂದು‌ 27,000 ಜನರಿಗೆ ಲಸಿಕೆ ನೀಡುವ ಗುರಿಯಿದೆ. ಜಿಲ್ಲೆಯಲ್ಲಿ 201 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯ 67 ವಾರ್ಡ್‌ಗಳಲ್ಲಿ ಲಸಿಕಾ ಕೇಂದ್ರ ತೆರೆಯಲಾಗಿದೆ. ಹುಬ್ಬಳ್ಳಿ ಕಾರವಾರ ರಸ್ತೆ ಸಿ.ಆರ್. ಮೈದಾನದಲ್ಲಿ ಪೊಲೀಸ್ ಕುಟುಂಬಗಳಿಗೆ ಲಸಿಕೆ ಮೇಳ ಆಯೋಜಿಸಲಾಗಿದ್ದು, ಬೆಳಿಗ್ಗೆ 11ಕ್ಕೆ ಚಾಲನೆ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT