ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತದೇಕ ಚಿತ್ತದ ಕಲಾಧ್ಯಾನ..

ಯುವ ಕಲಾವಿದರ ಶಿಬಿರ; ಮೈದಳೆದ ಪುಟ್ಟ ಭಾರತ
Last Updated 15 ಜನವರಿ 2023, 6:02 IST
ಅಕ್ಷರ ಗಾತ್ರ

ಧಾರವಾಡ: ಪ್ರಶಾಂತ, ಹಚ್ಚಹಸಿರು ವಾತಾವರಣ, ಅಲ್ಲಲ್ಲಿ ನೀರಿನ ಕಾರಂಜಿಗಳು. ತದೇಕ ಚಿತ್ತದಿಂದ, ಕಲ್ಪನೆಯ ಚಿತ್ರಗಳಿಗೆ ಮೂರ್ತ ರೂಪ ನೀಡುವಲ್ಲಿ ವಿವಿಧೆಡೆಯ ಯುವ ಕಲಾವಿದರು ತನ್ಮಯರಾಗಿದ್ದನ್ನು ಕಣ್ತುಂಬಿಕೊಂಡವರಿಗೆ ಒಂದು ಪುಟ್ಟ ಭಾರತವೇ ಮೈದಳೆದಂತೆ ಭಾಸವಾಯಿತು.

ಯುವ ಜನೋತ್ಸವದ ಅಂಗವಾಗಿ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಹಸಿರು ಉದ್ಯಾನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಯುವ ಕಲಾವಿದರ ಶಿಬಿರ’ದಲ್ಲಿ, ಬಿಹಾರ, ಛತ್ತೀಸಗಢ, ಕೇರಳ, ತೆಲಂಗಾಣ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಉತ್ತರಪ್ರದೇಶ, ಬೆಂಗಳೂರು, ಧಾರವಾಡ, ನವಲಗುಂದದ ಯುವ ಚಿತ್ರಕಲಾವಿದರು ಭಾಗವಹಿಸಿ, ತಮ್ಮ ಕೌಶಲ ಪ್ರದರ್ಶಿಸಿದರು.

ಹಸಿರು ಹಾಸಿನ ಹುಲ್ಲಿನ ಮೇಲೆ ತುದಿಗಾಲಲ್ಲಿ ಕೂತು, ಕುರ್ಚಿಗೆ ಒರಗಿ, ನೆಲಕ್ಕೆ ಒರಗಿಕೊಂಡು ಚಿತ್ರಗಳನ್ನು ಬಿಡಿಸುತ್ತಿದ್ದ ಕಲಾವಿದರ ಭಂಗಿಗಳು, ನೋಡುಗರಲ್ಲಿ ಕೌತುಕ ಮೂಡಿಸಿದವು. ಲ್ಯಾಂಡ್‌ಸ್ಕೇಪ್‌, ಪೊರ್ಟ್ರೇಟ್‌ ಮಾದರಿಯಲ್ಲಿ ಅಕ್ರ್ಯಾಲಿಕ್‌ ವರ್ಣ ಬಳಸಿದ ಕಲಾಕೃತಿಗಳೇ ಅಲ್ಲಿ ಹೆಚ್ಚಾಗಿ ಕಂಡು ಬಂದವು. ಬೆಟ್ಟಗುಡ್ಡಗಳ ನಡುವೆ ಹರಿಯುವ ಜಲಪಾತಕ್ಕೆ ಬಿಳಿ ಬಣ್ಣ ಬಳಿಯುತ್ತಲೇ ಪ್ರಕೃತಿಯ ಆರಾಧನೆ ಮಾಡಿದಳು ಆಂಧ್ರಪ್ರದೇಶದ ವಿದ್ಯಾರ್ಥಿನಿ.

ಕೇರಳದ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಟ್ಟ ಯುವತಿ, ಕಮಲದ ಹೂಗಳನ್ನು ಅಪ್ಪಿಕೊಂಡ ಭಂಗಿಯನ್ನು ಚಿತ್ರಿಸಿದ ಕೇರಳದ ಯುವ ಕಲಾವಿದೆ ನೋಡುಗರ ಮೆಚ್ಚುಗೆಗೆ ಪಾತ್ರರಾದರು.

ತಾಯಿ ಕಂದನನ್ನು ಅಪ್ಪಿದ ಬಗೆಯನ್ನು ಚಿತ್ರಿಸುತ್ತಲೇ ಕಲಾಪ್ರಿಯರ ಮನ ಗೆದ್ದವರು ಉತ್ತರ ಪ್ರದೇಶದ ಕಲಾವಿದ. ಅರುಣಾಚಲ ಪ್ರದೇಶದ ಕಲಾವಿದನ ಕೈಚಳಕದಲ್ಲಿ ರಂಗುರಂಗಾಗಿ ಬುದ್ಧ ಮೂಡಿ ಬಂದ. ಸಹಬಾಳ್ವೆಗೆ ಸಾಕ್ಷಿಯಾಗಿರುವ ವನ್ಯಜೀವಿಗಳ ಸಂರಕ್ಷಣೆಗೆ ತಮಿಳುನಾಡಿನ ಕಲಾವಿದೆ ಚಿತ್ರದ ಮೂಲಕ ಕರೆ ನೀಡಿದಳು.

ರಾಧೆಯ ಕೊಳಲಿನ ಕರೆಗೆ ಕೃಷ್ಣನನ್ನು ಕರೆಯಿಸೇ ಬಿಟ್ಟರು ನವಲಗುಂದದ ಕಲಾವಿದ. ಮಗಳಿಗೆ ಅಮ್ಮ ರೊಟ್ಟಿ ತಟ್ಟುವ ಕಲೆಯನ್ನು ತಿಳಿಸುವ ಜೊತೆಗೆ ಬದುಕಿನ ಬಾಣಲೆಯಲ್ಲಿ ಬೇಯುವ ಬಗೆಯನ್ನು ವಿವರಿಸಿದಂತಿತ್ತು ಧಾರವಾಡದ ಚಿತ್ರಕಲಾವಿದನ ಕೃತಿ. ಅಲ್ಲಲ್ಲಿ ಪ್ರಕೃತಿ ಆರಾಧನೆಯ ಚಿತ್ರಗಳೂ ಕಂಡುಬಂದವು.

ಯುವಶಕ್ತಿ: ಶಿಬಿರದಲ್ಲಿ ‘ಯುವಶಕ್ತಿ’ ಪರಿಕಲ್ಪನೆಯಡಿ ಸ್ವಾಮಿ ವಿವೇಕಾನಂದರ ವಿವಿಧ ಭಂಗಿಗಳನ್ನೂ ಹಲವು ಕಲಾವಿದರು ಚಿತ್ರಿಸಿದ್ದರು. ವಿವಿಧೆಡೆಯ ಒಟ್ಟು 37 ಯುವ ಚಿತ್ರ ಕಲಾವಿದರು, 37 ಶಿಲ್ಪ ಕಲಾವಿದರು, 35 ಛಾಯಾಚಿತ್ರ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT