ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾಬ್ದಾರಿ ಐತೇನ್ರೀ, ರಾಜೀನಾಮೆ ಕೊಟ್ಟೋಗ್ರಿ... ಹೊರಟ್ಟಿ

ಯುವ ಸಂಸತ್‌ ಸ್ಪರ್ಧೆ: ವಿಧಾನ ಪರಿಷತ್‌ ಸಭಾಪತಿ ಹೊರಟ್ಟಿ ಉದ್ಘಾಟನೆ
Published 8 ನವೆಂಬರ್ 2023, 15:37 IST
Last Updated 8 ನವೆಂಬರ್ 2023, 15:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಚುನಾವಣೆ ವ್ಯಾಳೆ ಮತ ಕೇಳಾಕ ಬಂದಾಗ ಇದ್ದ ನಿಯತ್ತ ಎಲ್ಲೋತ್ರಿ, ಪ್ರಣಾಳಿಕೆಲಿ ಘೋಷಿಸಿದ ಯಾವ ಕೆಲ್ಸಾನೂ ಸರಿಯಾಗಿ ಆಗಿಲ್ಲ, ಆಶ್ವಾಸನೆ ಕೊಡೋದಷ್ಟ ಆಯ್ತು, ಜವಾಬ್ದಾರಿ ಏನಾದ್ರೂ ಐತೇನ್ರೀ. ಕೆಲ್ಸ ಮಾಡೋಕಾಗಲ್ಲ ಅಂದ್ರ ರಾಜೀನಾಮೆ ಕೊಟ್ಟೋಗ್ರಿ...’

ಹೀಗೆ ವಿರೋಧ ಪಕ್ಷದವರು ಹರಿಹಾಯ್ದರೆ, ‘ನೋಡ್ರಿ, ನಮ್ಮ ಕೆಲ್ಸ ನಾವ ಮಾಡಾಕಹತ್ತೀವಿ. ಸುಖಾಸುಮ್ಮನ ಆರೋಪ ಮಾಡಬ್ಯಾಡ್ರೀ’ ಆಡಳಿತ ಪಕ್ಷದವರು ಸಮಜಾಯಿಷಿ ನೀಡಿದರು.

ನಗರದ ಕೇಶ್ವಾಪುರ ಕಾನ್ವೆಂಟ್ ಸ್ಕೂಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಧಾರವಾಡ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಕಂಡು ಬಂದ ಅಣಕು ಸಂಭಾಷಣೆಗಳಿವು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಧಾರವಾಡ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿಧಾನಸಭೆ ಸಭಾಧ್ಯಕ್ಷರಾಗಿ ಬೆಲವಂತರ ಸರ್ಕಾರಿ ಪ್ರಾಥಮಿಕ ಶಾಲೆಯ ಭಾರತಿ ಪೂಜಾರ, ಮುಖ್ಯಮಂತ್ರಿಯಾಗಿ ಕುರಡಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಅನಿತಾ ಉಣಕಲ್, ವಿರೋಧ ಪಕ್ಷದ ನಾಯಕಿಯಾಗಿ ಹೊಸೂರ ಪ್ರಾಥಮಿಕ ಶಾಲೆಯ ಪ್ರಿಯಾಂಕ ಮುಳಗುಂದ ಪಾಲ್ಗೊಂಡಿದ್ದರು.

ಇದಕ್ಕೂ ಪೂರ್ವ ಯುವ ಸಂಸತ್‌ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ‘ಚುನಾವಣೆ ಸಂದರ್ಭ ನಡೆಯುವ ಭ್ರಷ್ಟಾಚಾರದ ಬಗ್ಗೆ ವಿದ್ಯಾರ್ಥಿಗಳು ಪಾಲಕರಿಗೆ ಅರಿವು ಮೂಡಿಸಬೇಕು. ಹಣ ಪಡೆದು ಮತ ಹಾಕದೆ, ಯೋಗ್ಯ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳಬೇಕು. ಜನಪರ ನಿಲುವು ಇರುವವರನ್ನು ಆಯ್ಕೆ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದರು.

‘ಚುನಾವಣೆ ವ್ಯವಸ್ಥೆ ಭ್ರಷ್ಟಾಚಾರದಿಂದ ತುಂಬಿದೆ. ಹಣ ನೀಡಿ ಮತ ಹಾಕಿಸಿಕೊಳ್ಳುವವರು ಒಂದೆಡೆಯಾದರೆ, ಹಣ ಪಡೆದು ಮತ ಚಲಾಯಿಸುವವರು ಮತ್ತೊಂದೆಡೆ. ಈ ವ್ಯವಸ್ಥೆ ನಿಲ್ಲಬೇಕು. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜೆಗಳೇ ಇಲ್ಲಿ ಸಾರ್ವಭೌಮರಾಗಿರಬೇಕು’ ಎಂದು ಹೇಳಿದರು.

‘ಬಹುಮತ ಪಡೆದ ಪಕ್ಷ ಆಡಳಿತ ಪಕ್ಷವಾಗಿ, ಮುಖ್ಯಮಂತ್ರಿ, ಸಚಿವರನ್ನು ಆಯ್ಕೆ ಮಾಡಿಕೊಂಡು ಸರ್ಕಾರ ರಚಿಸುತ್ತದೆ. ಬಹುಮತವಿಲ್ಲದ ಪಕ್ಷ ವಿರೋಧ ಪಕ್ಷಗಳಾಗಿ ಕಾರ್ಯನಿರ್ವಹಿಸುತ್ತವೆ. ಇವರ ಜವಾಬ್ದಾರಿ ಸಹ ದೊಡ್ಡದಿದ್ದು, ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಸರ್ಕಾರವನ್ನು ಎಚ್ಚರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT