ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ‘ಯುವಕೃತಿ’

ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ ಅನಾವರಣ; ಉತ್ಸಾಹ ತೋರಿದ ಜನ
Last Updated 16 ಜನವರಿ 2023, 4:49 IST
ಅಕ್ಷರ ಗಾತ್ರ

ಧಾರವಾಡ: ವಿಭಿನ್ನ ಕರಕುಶಲ ವಸ್ತುಗಳು, ವೈವಿಧ್ಯಮಯ ತಿಂಡಿ, ತಿನಿಸು, ಆಟಿಕೆಗಳು, ಆಲಂಕಾರಿಕ ವಸ್ತುಗಳು, ಪೇಂಟಿಂಗ್‌ಗಳು, ಯುವತಿಯರ ಗಮನ ಸೆಳೆದ ಆಕರ್ಷಕ ಕಿವಿಯೋಲೆ, ಬ್ರಾಸ್ಲೆಟ್‌, ಬಳೆಗಳು ಹಾಗೂ ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಉಡುಪುಗಳು ನೋಡುಗರ ಮನಸೂರೆಗೊಂಡವು.

ಈ ದೃಶ್ಯ ಕಂಡುಬಂದಿದ್ದು 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ಧಾರವಾಡದ ಕೆಸಿಡಿ ಫುಟ್ಬಾಲ್‌ ಮೈದಾನದಲ್ಲಿ ಆಯೋಜಿಸಿದ್ದ ಯುವಕೃತಿ ಪ್ರದರ್ಶನದಲ್ಲಿ.

ಹರಿಯಾಣ, ಪಂಜಾಬ್‌, ದೆಹಲಿ, ಉತ್ತರಾಖಂಡ, ತೆಲಂಗಾಣ, ಛತ್ತಿಸ್‌ಗಢ, ಸೇರಿದಂತೆ ವಿವಿಧ ರಾಜ್ಯಗಳ ನೆಹರು ಯುವ ಕೇಂದ್ರದ ಸದಸ್ಯರು ತಮ್ಮ ರಾಜ್ಯದ ವಿಶೇಷ ವಸ್ತುಗಳನ್ನು ಪ್ರದರ್ಶನದೊಂದಿಗೆ ಮಾರಾಟಕ್ಕಿಟ್ಟಿದ್ದರು. ಜೊತೆಗೆ ರಾಜ್ಯದ ಮೈಸೂರು, ಮಂಗಳೂರು, ಮಂಡ್ಯ, ಧಾರವಾಡ, ಬೆಳಗಾವಿ ಹಾಗೂ ಸುತ್ತಲಿನ ವಿವಿಧ ಜಿಲ್ಲೆಗಳ ಸ್ಥಳೀಯ ಕರಕುಶಲ ವಸ್ತುಗಳು ಜನರನ್ನು ಆಕರ್ಷಿಸಿದವು.

ಬೆಳಿಗ್ಗೆಯಿಂದಲೇ ಮಳಿಗೆಯತ್ತ ತಂಡೋಪ ತಂಡವಾಗಿ ಬಂದ ವಿದ್ಯಾರ್ಥಿಗಳು, ಸಾರ್ವಜನಿಕರು, ಯುವಕರು ಉತ್ಸಾಹದಿಂದ ಮಾಹಿತಿ ಪಡೆದು, ಖರೀದಿಯಲ್ಲೂ ತೊಡಗಿದ್ದರು. ರಾಜಸ್ಥಾನ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ್‌ ಹಾಗೂ ಅಸ್ಸಾಂ ಉಡುಪು ಧರಿಸಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಸಾಮಾನ್ಯವಾಗಿತ್ತು.

ಬಳಸಿದ ಹೂವುಗಳಿಂದ ಕ್ಯಾಂಡಲ್ ತಯಾರಿಕೆ:

ಚಂಡೀಗಢದ ದೇವಸ್ಥಾನದಲ್ಲಿ ದೇವರ ಪೂಜೆ, ದೇವಸ್ಥಾನದ ಆಲಂಕಾರಕ್ಕೆ ಬಳಸುವ ಹೂವುಗಳನ್ನು ಚೆಲ್ಲದೇ ಅವುಗಳನ್ನು ಪುನರ್‌ಬಳಕೆ ಮಾಡಿ ಸ್ವಸಹಾಯ ಮಹಿಳೆಯರ ಸಂಘದವರು ಮೇಣದ ಬತ್ತಿಗಳನ್ನು ತಯಾರಿಸುತ್ತಾರೆ. ದೇವರ ಮುಂದೆ ದೀಪ ಹಾಗೂ ಅಗರಬತ್ತಿ ಬದಲು ಈ ಮೇಣದ ಬತ್ತಿಯನ್ನು ಹಚ್ಚಿದರೆ, ಬೆಳಕು ಹಾಗೂ ಸುವಾಸನೆ ಬೀರುತ್ತದೆ ಎಂದು ಚಂಡೀಗಢದ ನೆಹರು ಯುವ ಕೇಂದ್ರದ ಪ್ರತಿನಿಧಿ ಸತೀಶ್‌ ಕುಮಾರ ಮಾಹಿತಿ ನೀಡಿದರು.

ಗುಲಾಬಿ, ಸೂರ್ಯಕಾಂತಿ, ಮಲ್ಲಿಗೆ, ಸೇವಂತಿಗೆ, ಚಂಡು ಹೂ ಸೇರಿದಂತೆ ವಿವಿಧ ಹೂಗಳಿಂದ ಮಾಡಿದ ಮೇಣದ ಬತ್ತಿಗಳನ್ನು ₹ 100ಕ್ಕೆ ಒಂದರಂತೆ ಮಾರಾಟಕ್ಕೀಡಲಾಗಿತ್ತು. ಇವುಗಳು ಗರಿಷ್ಠ 2 ಗಂಟೆ ಬೆಳಗುತ್ತವೆ ಎಂದು ಅವರು ಮಾಹಿತಿ ನೀಡಿದರು.

ಆಕರ್ಷಿಸಿದ ಪುರುಲಿಯಾ ಕಲೆ:

ಪಶ್ಚಿಮ ಬಂಗಾಳದ ಪುರುಲಿಯಾ ಮುಕಾಶ್‌ (ಮುಖವಾಡ) ಕಲೆ ಜನರನ್ನು ಆಕರ್ಷಿಸಿತು. ಮಣ್ಣಿನಿಂದ ತಯಾರಿಸಿ, ನೈಜವಾಗಿ ಕಾಣುವಂತೆ ರೂಪಿಸಿದ ಮಣ್ಣಿನ ಮಹಾಕಾಳಿ, ಮಹಾದುರ್ಗಾ, ಶಿವ, ಬಂಗಾಲಿ ಹುಲಿ, ದೇವಿ ಹಾಗೂ ಮಹಿಳೆ ಹಾಗೂ ಪುರುಷರ ಮೂರ್ತಿಗಳು ಗಮನಸೆಳೆದವು. ₹ 200 ರಿಂದ ₹ 3,000 ದರ ನಿಗದಿಪಡಿಸಲಾಗಿದೆ ಎಂದು ಪಶ್ಚಿಮ ಬಂಗಾಳ ನೆಹರು ಯುವ ಕೇಂದ್ರದ ಪ್ರತಿನಿಧಿ ಮೃತ್ಯುಂಜಯ ಮಾಹಿತಿ ನೀಡಿದರು.

ಸ್ಥಳೀಯ ಹುಲಕೊಪ್ಪ ಗ್ರಾಮದ ಪರಸಪ್ಪ ಅವರು ಬಿದಿರಿನಿಂದ ತಯಾರಿಸಿದ ಆಟಿಕೆಗಳು, ಲ್ಯಾಂಪ್‌, ಹ್ಯಾಂಗಿಂಗ್‌ ವಾಲ್‌ಪೀಸ್‌, ಪೆನ್‌ಸ್ಟ್ಯಾಂಡ್‌, ಕೀ ಬಂಚ್‌ ಖರೀದಿಯಲ್ಲಿ ಜನ ತೊಡಗಿದ್ದರು. ವಿವಿಧ ರಾಜ್ಯಗಳ 80ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT