ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಜೋಡೊ ಯಾತ್ರೆಯಿಂದ ಬಿಜೆಪಿಗೆ ನಡುಕ: ಜಮೀರ್ ಅಹ್ಮದ್

Last Updated 22 ಅಕ್ಟೋಬರ್ 2022, 5:04 IST
ಅಕ್ಷರ ಗಾತ್ರ

ಧಾರವಾಡ: ‘ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ ಒಗ್ಗೂಡಿಸಿ ಯಾತ್ರೆಗೆ ನಿರೀಕ್ಷೆಗೂ ಮೀರಿ ಜನ ಬೆಂಬಲ ಲಭಿಸಿದೆ. ನಿತ್ಯ 25 ಸಾವಿರ ಜನ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ದೇಶದ ಇತಿಹಾಸದಲ್ಲಿ ಇದೊಂದು ಬೃಹತ್ ಯಾತ್ರೆಯಾಗಿ, ಚರಿತ್ರೆಯಲ್ಲಿ ದಾಖಲಾಗಿದೆ’ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವರ ಕೃಪೆಯಿಂದ ರಾಹುಲ್ ಗಾಂಧಿ ನಿತ್ಯ 25 ಕಿ.ಮೀ. ಪಾದಾಯತ್ರೆ ನಡೆಸಿದ್ದಾರೆ. ಅವರ ಈ ಯಾತ್ರೆಯೂ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಯಾತ್ರೆಗೆ ಜನ ಬೆಂಬಲಿಸುತ್ತಿರುವುದನ್ನು ನೋಡಿದ ಬಿಜೆಪಿಗೆ ಭಯ ಶುರವಾಗಿದೆ’ ಎಂದರು.

‘ಭಾರತದಲ್ಲಿ ಪಾದಯಾತ್ರೆ ಎಂಬ ಕಲ್ಪನೆ ಹುಟ್ಟು ಹಾಕಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧಿ. ಸ್ವಾತಂತ್ರ್ಯ ಪೂರ್ವದಲ್ಲೇ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದೀಗ ಮತ್ತೆ ರಾಹುಲ್ ಅವರು ದೇಶದಾದ್ಯಂತ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ ಇದನ್ನು ಸಹಿಸದ ಹಲವರು ಈ ಕುರಿತುಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್‌ಗೆ ಬೆಂಬಲ ಏಕೆ?: ‘ಅನುದಾನ ಕಡಿತಗೊಳಿಸಿದ ಜೆಡಿಎಸ್‌ಗೆ ಅಲ್ಪಸಂಖ್ಯಾತರು ಬೆಂಬಲ ಏಕೆ ಬೇಕು? ಸದ್ಯದ ಶಾಸಕ ಸ್ಥಾನಗಳನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಹೆಣಗುತ್ತಿದ್ದಾರೆ. 2023ರ ವಿಧಾನ ಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಕಿಂಗ್ ಮೇಕರ್ ಆಗಲು ಸಾಧ್ಯವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಜಮೀರ್ ಉತ್ತರಿಸಿದರು.

‘ಬಿಜೆಪಿ ದುರಾಡಳಿತಕ್ಕೆ ಆ ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಜಾತ್ಯಾತೀತ ಪಕ್ಷ. ಸಿದ್ದರಾಮಯ್ಯ ಸರ್ಕಾರದ ಉತ್ತಮ ಕೆಲಸವನ್ನು ನಾಡಿನ ಜನತೆ ಕೊಂಡಾಡಿದ್ದು, 2023ಕ್ಕೆ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ’ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ, ಪಾಲಿಕೆ ಸದಸ್ಯೆ ಡಾ. ಕವಿತಾ ಕಬ್ಬೇರ, ಶಂಭು ಸಾಲಿಮನಿ, ಗಣೇಶ ಮುಧೋಳ, ಬಸವರಾಜ ಕಿತ್ತೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT