ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿದ ರಜೆ ದರ್ಬಾರು; ಶಾಲೆಗೆ ಮಕ್ಕಳು ಹಾಜರು

ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲರವ; ಆರತಿ ಬೆಳಗಿ, ಸಿಹಿ ಹಂಚಿ ಸ್ವಾಗತಿಸಿದ ಶಿಕ್ಷಕರು
Last Updated 16 ಮೇ 2022, 15:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೇಸಿಗೆ ರಜೆ ಮುಗಿದ ಬೆನ್ನಲ್ಲೇ ಸೋಮವಾರದಿಂದ ಶಾಲೆಗಳು ಪುನರಾರಂಭವಾಗಿದ್ದು, ರಜೆಯ ದರ್ಬಾರು ಮುಗಿಸಿರುವ ಚಿಣ್ಣರು ಶಾಲೆಗೆ ಹಾಜರಾದರು. ಕೋವಿಡ್ ಕಾರಣದಿಂದ ಎರಡು ವರ್ಷ ಹಿನ್ನಡೆ ಕಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಮತ್ತೆ ಗರಿಗೆದರಿದ್ದು, ಶಾಲಾವರಣದಲ್ಲಿ ಮಕ್ಕಳ ಕಲರವ ಆರಂಭವಾಯಿತು.

ಮೊದಲ ದಿನ ಮಕ್ಕಳನ್ನು ಸ್ವಾಗತಿಸುವುದಕ್ಕಾಗಿ ಹಲವೆಡೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ತಳಿರು ತೋರಣ, ಬಲೂನುಗಳಿಂದ ಅಲಂಕರಿಸಲಾಗಿತ್ತು. ಶಿಕ್ಷಕರು ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹೂ ನೀಡಿ ಸ್ವಾಗತಿಸಿದರು. ಕೆಲವೆಡೆ ಸಿಹಿ ಹಂಚಿ, ನೋಟ್‌ ಪುಸ್ತಕಗಳನ್ನು ವಿತರಿಸಲಾಯಿತು. ಕೆಲ ಶಾಲೆಗಳಲ್ಲಿ ಶಾರದೆಯ ಪೂಜೆ ನಡೆಯಿತು.

ಬೆಳಿಗ್ಗೆಯಿಂದಲೇ ಪೋಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಬಿಟ್ಟು ಹೋಗುತ್ತಿದ್ದ ದೃಶ್ಯ ಶಾಲೆಗಳ ಬಳಿ ಕಂಡುಬಂತು. ಮಕ್ಕಳು ಸಹ ಅತ್ಯುತ್ಸಾಹದಿಂದ ಶಾಲೆಗೆ ಬಂದರು. ಶಿಕ್ಷಕರಿಗೆ ಆತ್ಮೀಯವಾಗಿ ನಮಸ್ಕರಿಸಿ ತರಗತಿಗಳತ್ತ ಹೆಜ್ಜೆ ಹಾಕಿದರು. ಸಹಪಾಠಿಗಳನ್ನು ಕಂಡು ಸಂಭ್ರಮಿಸಿದರು.

‘ಮೊದಲ ದಿನ ಶೇ 40ರಷ್ಟು ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆರತಿ ಮಾಡಿ, ಸಿಹಿ ಹಂಚಿ, ಹೂ ನೀಡಿ ಹಾಗೂ ನೋಟ್‌ ಬುಕ್‌ಗಳನ್ನು ವಿತರಿಸಿ ಸ್ವಾಗತಿಸಲಾಗಿದೆ’ ಎಂದು ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಶಿವಳ್ಳಿಮಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಲಿಗುಡಿ’ ಪತ್ರಿಕೆ ಬಿಡುಗಡೆ

ಹುಬ್ಬಳ್ಳಿ: ತಾಲ್ಲೂಕಿನ ಕಿರೇಸೂರು ಪ್ರೌಢಶಾಲೆಯಲ್ಲಿ ಸೋಮವಾರ ಹುಬ್ಬಳ್ಳಿ ಕನ್ನಡ ಸಾಹಿತ್ಯ ಪರಿಷತ್ ಹಾಗೂಶಾಲೆ ಸಹಯೋಗದಲ್ಲಿ ‘ಸಾಲಿಗುಡಿ’ ಎಂಬ ದ್ವೈಮಾಸಿಕ ಪತ್ರಿಕೆಯನ್ನು ವಿದ್ಯಾರ್ಥಿಗಳು ಮತ್ತು ಗಣ್ಯರು ಬಿಡುಗಡೆಗೊಳಿಸಿದರು.

ಅತಿಥಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ,‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಡುತ್ತದೆ. ಮಕ್ಕಳು ಓದಿನಿಂದ ಸೃಜನಶೀಲತೆ ಬೆಳೆಸಿಕೊಳ್ಳಲು ಸಾಧ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಪತ್ರಿಕೆ ಸಂಪಾದಕ ಡಾ. ಲಿಂಗರಾಜ ರಾಮಾಪೂರ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಗ್ರಾಮಸ್ಥ ಸೋಮಣ್ಣ ಕಮಡೊಳ್ಳಿ, ವೈ.ಎಸ್. ರೇವಡಿಹಾಳ ಮಾತನಾಡಿದರು.

ಕಲಿಕಾ ಚೇತರಿಕೆ ವರ್ಷದ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಎಸ್‌ಡಿಎಂಸಿ ಸದಸ್ಯರಾದ ಈಶ್ವರಗೌಡ ಪಾಟೀಲ, ಮಹಾದೇವ ಹೂಲಿಕಟ್ಟಿ, ರಾಮು ಮೇಟಿ, ರಂಗಪ್ಪ ಹುಗ್ಗೆಣ್ಣವರ, ಎ.ವೈ. ದಾಟನಾಳ, ಅಶೋಕ ಈರಗಾರ, ಶಂಭುಲಿಂಗಪ್ಪ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT