ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಮನ ಗೆದ್ದ ‘ಕಥಿ ಕೇಳೂಣ ಬರ್ರಿ’

Last Updated 15 ಮಾರ್ಚ್ 2023, 4:59 IST
ಅಕ್ಷರ ಗಾತ್ರ

ಧಾರವಾಡ: ‘ಕಥಿ ಕೇಳೂಣ ಬರ್ರಿ’ ಎಂಬ ಬಾನುಲಿ ಸರಣಿ ಕಾರ್ಯಕ್ರಮದ ಮೂಲಕ ಧಾರವಾಡ ಆಕಾಶವಾಣಿ 25 ಕಂತುಗಳಲ್ಲಿ ಆಯ್ದ ಲೇಖಕರ ಆಸಕ್ತಿ ಮೂಡಿಸುವ ಕಥೆಗಳನ್ನು ಯಶಸ್ವಿಯಾಗಿ ಬಿತ್ತರಿಸಿದೆ.

ಮಾಸ್ತಿ ಅವರಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುವೆಂಪು, ಆನಂದಕಂದ, ಬಸವರಾಜ ಕಟ್ಟೀಮನಿ, ಯು.ಆರ್.ಅನಂತಮೂರ್ತಿ, ದೇವನೂರು ಮಹಾದೇವ, ಪಿ.ಲಂಕೇಶ್, ವೈದೇಹಿ, ಯಶವಂತ ಚಿತ್ತಾಲ, ಮಾಲತಿ ಪಟ್ಟಣಶೆಟ್ಟಿ, ವಿನಯಾ, ಸುನಂದಾ ಕಡಮೆ, ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಶಾಂತಿ ಕೆ.ಅಪ್ಪಣ್ಣ ಹೀಗೆ ಕನ್ನಡ ಕಥಾ ಪರಂಪರೆಯಲ್ಲಿನ ಪ್ರಾತಿನಿಧಿಕ ಕಥೆಗಾರರ ಆಯ್ದ ಕಥೆಗಳನ್ನು ಬಾನುಲಿಗೆ ಅಳವಡಿಸಿಕೊಂಡು, ಕೇಳುಗರಿಗೆ ಕೇಳಿಸಿತು.

ಕಥೆಗಾರರೂ ಆಗಿರುವ ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ 2022ರಸೆಪ್ಟೆಂಬರ್‌ನಲ್ಲಿ ಆರಂಭಗೊಂಡು 2023ರ ಫೆಬ್ರುವರಿವರೆಗೆ ವಾರಕ್ಕೊಂದು ಕಥೆಯಂತೆ ಬಿತ್ತರಿಸಲಾಯಿತು. ಧಾರವಾಡ ಆಕಾಶವಾಣಿ ಹಾಗೂ ಧಾರವಾಡ ವಿವಿಧಭಾರತಿ ಕೇಂದ್ರಗಳಿಂದ ಪ್ರಸಾರಗೊಂಡಿತು.

ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಪ್ರಾಯೋಜಿಸಿತು. ಡಾ. ಬಸು ಬೇವಿನಗಿಡದ ಮತ್ತು ಸುರೇಖಾ ಸುರೇಶ ಅವರು ಕಥೆಗಳನ್ನು ನಿರೂಪಿಸಿ, ಪಾತ್ರಗಳಿಗೆ ತಕ್ಕಂತೆ ವಾಚಿಸಿದರು. ಆಕಾಶವಾಣಿಯ ಶರಣಬಸವ ಚೋಳಿನ, ಅರುಣ ನಾಯಕ, ಶಶಿಧರ ನರೇಂದ್ರ, ರಾಖಿ ಹಾನಗಲ್, ಶೈಲಜಾ ರಾಜಕುಮಾರ್, ಉಷಾ ಕುಲಕರ್ಣಿ, ನವೀನ ಮಹಾಲೆ, ಕೆ. ಶಿವರಾಜ್ ಮುಂತಾದವರು ಪಾತ್ರಗಳಿಗೆ ಮಾತಿನ ಅಭಿನಯ ತೊಡಿಸಿದರು. ಚನ್ನಪ್ಪ ಅಂಗಡಿ, ಆನಂದ ಪಾಟೀಲ, ಪ್ರಕಾಶ ಖಾಡೆ, ವೈ.ಜಿ.ಭಗವತಿ ಅವರು ಬಾನುಲಿಗೆ ಅಳವಡಿಸಿದರು.

ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿದ ಲೇಖಕಿ ಡಾ. ವಿನಯಾ, ‘ಕಥೆಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಅಳವಡಿಸುವಲ್ಲಿನ ಶ್ರಮ ಈ ಕಾರ್ಯಕ್ರಮದ ಮೂಲಕ ಅರಿವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT