ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜುವಾರಿ’ ಹೆಸರಲ್ಲಿ ₹40 ಕೋಟಿ ಪಂಗನಾಮ

ಹಾಲಿ, ನಿವೃತ್ತ ಸೈನಿಕರು ಹೂಡಿದದ ಹಣ ಗುಳುಂ
Last Updated 13 ಜನವರಿ 2020, 10:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಮಿಳುನಾಡಿನ ಜುವಾರಿ ಸಿಮೆಂಟ್‌ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಎರಡು ಪಟ್ಟು ಹಣ ನೀಡುವುದಾಗಿ ನಂಬಿಸಿದ ನಿವೃತ್ತ ಸೈನಿಕ ಕೆ.ಮಣಿ, ವಿವಿಧ ರಾಜ್ಯಗಳ ಹಾಲಿ ಹಾಗೂ ನಿವೃತ್ತ 526 ಸೈನಿಕರಿಗೆ ₹40 ಕೋಟಿ ವಂಚಿಸಿರುವುದಾಗಿ ಮಾಜಿ ಸೈನಿಕರು ಆರೋಪಿಸಿದರು.

ಮೋಸಕ್ಕೊಳಗಾದ ಉತ್ತರ ಕರ್ನಾಟಕ ಭಾಗದ ನಿವೃತ್ತ ಸೈನಿಕರು ಭಾನುವಾರ ನಗರದ ಇಂದಿರಾ ಗಾಜಿನ ಮನೆಯ ಬಳಿ ಪ್ರತಿಭಟಿಸಿದ್ದಾರೆ.ಮದ್ರಾಸ್‌ ರೆಜಿಮೆಂಟ್‌ ಕಂಪನಿಯಲ್ಲಿ ಮುಖ್ಯ ಗುಮಾಸ್ತನಾಗಿದ್ದ ಕೆ.ಮಣಿ ನಿವೃತ್ತಿ ನಂತರ, ಚಾಮರಾಜನಗರದ ಎಂ.ಮಂಜುನಾಥ್, ತಮಿಳುನಾಡಿನ ಟಿ.ಇರ್ಷಾದ್ ಹಾಗೂ ಜಾನ್ಸನ್‌ ಮುತ್ತು ಜೊತೆ ಸೇರಿ ವಂಚಿಸಿದ್ದಾನೆ ಎಂದು ದೂರಿದರು.

‘ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕರ್ನಾಟಕದವರೂ ಹಣ ಹೂಡಿದ್ದಾರೆ. ಇವರಿಗೆಲ್ಲ ಬಾಂಡ್‌ ಹಾಗೂ ಚೆಕ್‌ಗಳನ್ನು ನೀಡಿದ್ದಾರೆ. ಚೆಕ್‌ಗಳನ್ನು ಬ್ಯಾಂಕಿಗೆ ಹಾಕಿದಾಗ, ಅವೆಲ್ಲವೂ ಬೌನ್ಸ್‌ ಆಗಿವೆ’ ಎಂದುಹಾವೇರಿಯ ನಿವೃತ್ತ ಸೈನಿಕ ಶಿವಣ್ಣ ಕಡ್ಲೆ ವಿವರಿಸಿದರು.

‘ಊಟಿಯಲ್ಲಿರುವ ಜುವಾರಿ ಸಿಮೆಂಟ್‌ ಕಂಪನಿ ಪ್ರಧಾನ ವ್ಯವಸ್ಥಾಪಕ ಎಂದು ಕೆ.ಮಂಜುನಾಥ ಎಂಬುವವರನ್ನು ಮಣಿ 2017ರಲ್ಲಿ ಪರಿಚಯಿಸಿದ್ದರು. ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ, ಹಾಲಿ ಮತ್ತು ನಿವೃತ್ತ ಸೈನಿಕರಿಂದ ಹೂಡಿಕೆ ಮಾಡುವಂತೆ ಮನವೊಲಿಸಿದ್ದರು.’ ಎಂದು ರಾಮದುರ್ಗದ ನಿವೃತ್ತ ಸೈನಿಕ ಬಸವರಾಜ ಟೋನಗಟ್ಟಿ ಹೇಳಿದರು.

‘ಲಾಭಾಂಶ ಕೊಡದೇ ಇದ್ದಾಗ ಚೆಕ್‌ಗಳನ್ನು ಬ್ಯಾಂಕಿಗೆ ಹಾಕಿದೆವು. ಬೌನ್ಸ್‌ ಆದ ಬಳಿಕವೇ ಅವರ ಬಗ್ಗೆ ಅನುಮಾನ ಹುಟ್ಟಿತು’ ಎಂದು ವಿವರಿಸಿದರು.

‘ಮಂಜುನಾಥ ನೀಡಿದ್ದ ಕಂಪನಿ ವಿಳಾಸ ಹುಡುಕಿಕೊಂಡು ಹೋದಾಗ, ಆ ಹೆಸರಿನ ಕಂಪನಿಯೇ ಇರಲಿಲ್ಲ. ಊಟಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲು ಹೋದಾಗ, ದೂರು ನೀಡಿದರೆ ಹಣ ಮರಳಿ ಬರುವುದಿಲ್ಲ ಎಂದು ಪೊಲೀಸರು ಹೇಳಿದ ಕಾರಣ, ಸಹಾಯ ಮಾಡಲು ಮನವಿ ನೀಡಿ ಬಂದೆವು. ಈ ವರೆಗೂ ಪೊಲೀಸರಿಂದ ನಮಗೆ ಯಾವ ಮಾಹಿತಿಯೂ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT