ಜಿಲ್ಲಾಡಳಿತದ ವೆಬ್‌ ತಾಣದಲ್ಲಿ ಕನ್ನಡದ ಕಗ್ಗೊಲೆ!

7
ಇಂಗ್ಲಿಷ್‌ನಿಂದ ಯಥಾವತ್‌ ಅನುವಾದ; ಒಂದಕ್ಕೊಂದು ಅರ್ಥವಾಗದ ವಾಕ್ಯಗಳ ಬಳಕೆ

ಜಿಲ್ಲಾಡಳಿತದ ವೆಬ್‌ ತಾಣದಲ್ಲಿ ಕನ್ನಡದ ಕಗ್ಗೊಲೆ!

Published:
Updated:
Deccan Herald

ರಾಮನಗರ: ಜಿಲ್ಲಾಡಳಿತವು ರೂಪಿಸಿರುವ ವೆಬ್‌ಸೈಟ್‌ನಲ್ಲಿ ಕನ್ನಡ ಭಾಷೆಯ ಬಳಕೆ ಅಧೋಗತಿಗೆ ಇಳಿದಿದ್ದು, ಓದುಗರು ಕಣ್ಣು–ಬಾಯಿ ಬಿಡುವಂತಾಗಿದೆ.

‘ರಾಮನಗರ ಜಿಲ್ಲೆಯನ್ನು ಹಿಂದಿನ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಿಂದ 23 ಆಗಸ್ಟ್, 2007 ರಂದು ಕೆತ್ತಲಾಗಿದೆ’ –ಜಿಲ್ಲೆಯ ಬಗ್ಗೆ ಮಾಹಿತಿ ಹುಡುಕುವವರಿಗೆ ಹೀಗೆ ವೆಬ್‌ ತಾಣವು ಮಾಹಿತಿ ನೀಡುತ್ತದೆ! ಇಂಗ್ಲಿಷಿನ ವಾಕ್ಯಗಳನ್ನು ಅಸಂಬದ್ಧವಾಗಿ ಅನುವಾದಿಸಿ, ಕನಿಷ್ಠ ಅದನ್ನು ಭಾಷೆ ಬಲ್ಲವರಿಂದ ಓದಿಸದೇ ಹಾಗೆಯೇ ಹಾಕಲಾಗಿದೆ.

ರಾಜ್ಯದ ಆಡಳಿತ ಭಾಷೆ ಕನ್ನಡವಾದರೂ ನಮ್ಮ ರಾಮನಗರದ ವೆಬ್ ತಾಣ ಮೊದಲು ತೆರೆದುಕೊಳ್ಳುವುದು ಇಂಗ್ಲೀಷಿನಲ್ಲಿ. ಪುಟದ ಬಲಭಾಗದ ತುದಿಯ ಒಂದು ಮೂಲೆಯಲ್ಲಿ ಕನ್ನಡ ಎಂದು ಸಣ್ಣದಾಗಿ ಬರೆಯಲಾಗಿದೆ. ಅದನ್ನು ಕ್ಲಿಕ್ಕಿಸಿದರಷ್ಟೇ ಕನ್ನಡದ ಪುಟಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (ಎನ್ಐಸಿ) ನಿರ್ವಹಿಸುತ್ತಿರುವ https://ramanagara.nic.in/ ವಿಳಾಸದ ಈ ವೆಬ್‌ ತಾಣದಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆ ಬಳಕೆಯಾಗಿಲ್ಲ. ಸಾಕಷ್ಟು ಕಡೆಗಳಲ್ಲಿ ಕನ್ನಡದ ವಾಕ್ಯಗಳು ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವಂತೆ ಇವೆ. ಓದಿದಷ್ಟೂ ತಪ್ಪು ಅರ್ಥವನ್ನೇ ಕೊಡುತ್ತವೆ.

ಕೆಂಪೇಗೌಡ ಬಿಲ್ಡರ್‌: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ‘ವಾಸ್ತುಶಿಲ್ಪಿ, ಬಿಲ್ಡರ್‌ ಮತ್ತು ಮಾರ್ಗದರ್ಶಿ’ ಹೀಗೆಂದು ವೆಬ್‌ಸೈಟ್‌ ಹೇಳುತ್ತದೆ. ‘ಬಿಳಿ ಬೆಂಬಲಿತ ರಣಹದ್ದು’ ‘ಮಹಿಳೆಯರಿಗೆ ಮತ್ತು ಸಂತೃಪ್ತಿಗಾಗಿ ಶೌಚಾಲಯಗಳು’, ‘ಡೀಸೆಲ್ ಜನರೇಟರ್ಗಳ ಮೂಲಕ ಅಡ್ಡಿಪಡಿಸಿದ ವಿದ್ಯುತ್ ಸರಬರಾಜು’ ಮೊದಲಾದ ವಿಶೇಷಣಾ ವಾಕ್ಯಗಳನ್ನೂ ಇಲ್ಲಿ ಬಳಸಲಾಗಿದೆ.

ಇಲ್ಲಿನ ಕೆಲವು ಸುದ್ದಿಗಳಿಗೆ ಸಂಬಂಧವಿಲ್ಲದ ಚಿತ್ರಗಳನ್ನು ಬಳಸಲಾಗಿದೆ. ಮಂಚನಬೆಲೆ ಜಲಾಶಯದ ಕುರಿತು ವಿವರಿಸುವ ಸುದ್ದಿಗೆ ಕಣ್ವಾ ಜಲಾಶಯದ ಚಿತ್ರ ಬಳಕೆ ಮಾಡಲಾಗಿದೆ.

ಇಚ್ಛಾ ಶಕ್ತಿ ಅಗತ್ಯ: ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಕಾರ್ಯಾಗಾರಗಳ ಆಯೋಜನೆ ಮೂಲಕ ಕನ್ನಡ ಶಬ್ದಗಳನ್ನು ಸರಿಯಾದ ಪರಿಕ್ರಮದಲ್ಲಿ ಉಪಯೋಗಿಸುವ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾ.ಪಂ. ಸಿಬ್ಬಂದಿವರೆಗೆ ತರಬೇತಿ ನೀಡಬೇಕು. ನಿಜವಾಗಿ ಕನ್ನಡದಲ್ಲಿ ಆಡಳಿತ ಬರಬೇಕು. ಆಗ ಇಂತಹ ತಪ್ಪುಗಳು ಕಡಿಮೆ ಆಗುತ್ತವೆ’ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜು.

ಈ ಕುರಿತು ಜಿಲ್ಲಾಧಿಕಾರಿ ಕೆ. ರಾಜೇಂದ್ರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಕನ್ನಡಿಗರಾಗಿ ಕನ್ನಡವನ್ನು ಶುದ್ಧವಾಗಿ ಬಳಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ವೆಬ್‌ಸೈಟ್ ಈಚೆಗೆ ಅಪ್‌ಡೇಟ್‌ ಆಗಿದ್ದು, ಅದನ್ನು ಓದಲು ಆಗಿರಲಿಲ್ಲ. ಈ ಬಗ್ಗೆ ಪರಿಶೀಲಿಸಿ ಸೂಕ್ತ ತಿದ್ದುಪಡಿಗೆ ನಿರ್ದೇಶನ ನೀಡುತ್ತೇನೆ’ ಎಂದು ತಿಳಿಸಿದರು.

ವೆಬ್‌ಸೈಟ್‌ನಲ್ಲಿ ಕಂಡ ಕನ್ನಡದ ವಾಕ್ಯಗಳು
* ಒಂದು ದಿನಕ್ಕೆ 50 ಟನ್ಗಳಷ್ಟು ಕೊಕ್ಕನ್‌ ಪಟ್ಟಣಕ್ಕೆ ಆಗಮಿಸುತ್ತದೆ
* ಜಿಲ್ಲೆಯು ಪ್ರತಿ 1000 ಪುರುಷರಿಗೆ 976 ಹೆಣ್ಣು ಮಹಿಳೆಯರ ಅನುಪಾತ ಹೊಂದಿದೆ.
* ರಾಮನಗರ ಜಿಲ್ಲೆಯನ್ನು ಬೆಂಗಳೂರಿನಿಂದ ಕರ್ನಾಟಕ ರಾಜ್ಯ ರಾಜಧಾನಿ ರಸ್ತೆ ಮತ್ತು ರೈಲು ಮಾರ್ಗವನ್ನು ಒಂದು ಗಂಟೆಗಳೊಳಗೆ ತಲುಪಬಹುದು
* ರಾಮನಗರ ಎಂಬುದು ಭಾರತದ ರಾಜ್ಯ ಕರ್ನಾಟಕದ ಪಟ್ಟಣ ಮತ್ತು ನಗರ ಪುರಸಭೆ

ಅಪ್‌ಡೇಟ್‌ ಆಗದ ಮಾಹಿತಿ
ಜಿಲ್ಲಾ ಪಂಚಾಯಿತಿಗೆ ನೂತನ ಅಧ್ಯಕ್ಷರ ಆಯ್ಕೆಯಾಗಿ ತಿಂಗಳೇ ಕಳೆದಿದ್ದರೂ ಈ ವೆಬ್ ತಾಣದಲ್ಲಿ ಮಾತ್ರ ಇನ್ನೂ ಸಿ.ಪಿ. ರಾಜೇಶ್ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಅಷ್ಟೇ ಅಲ್ಲ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅವಧಿ ಮುಗಿದು ಸಾಕಷ್ಟು ದಿನವಾಗಿದ್ದರೂ ಇಲ್ಲೂ ಹಳೆಯ ಮಾಹಿತಿಯೇ ಇದೆ. ಇಲ್ಲಿಯೂ ಕನ್ನಡದ ಬಳಕೆ ಶೋಚನೀಯವಾಗಿದೆ.

* ಇಂತಹ ತಪ್ಪುಗಳಿಂದಾಗಿ ಕನ್ನಡ ನುಡಿಯ ಮಹತ್ವಕ್ಕೆ ಧಕ್ಕೆ ಬಂದಿದೆ. ಅಧಿಕಾರಿಗಳು ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆ ಬಗ್ಗೆ ಕಾಳಜಿ ವಹಿಸಬೇಕು
–ಸಿಂ.ಲಿಂ. ನಾಗರಾಜು, ಅಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು

* ವೆಬ್‌ಸೈಟ್‌ನ ಮಾಹಿತಿಯು ಈಚೆಗೆ ಅಪ್‌ಡೇಟ್ ಆಗಿದ್ದು, ಅದನ್ನು ಓದಿಲ್ಲ. ಕನ್ನಡ ಬಳಕೆಯಲ್ಲಿನ ದೋಷಗಳನ್ನು ಕೂಡಲೇ ಸರಿಪಡಿಸಲಾಗುವುದು
–ಕೆ. ರಾಜೇಂದ್ರ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !