ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಾನುಭವಿಗಳಿಗೆ ಕಳಪೆ ಪಡಿತರ ವಿತರಣೆ

ಹೊಸನಗರ ಪ್ರಗತಿ ಪರಿಶೀಲನಾ ಸಭೆ: ತನಿಖೆಗೆ ಶಾಸಕರ ಆಗ್ರಹ
Last Updated 1 ಸೆಪ್ಟೆಂಬರ್ 2018, 10:30 IST
ಅಕ್ಷರ ಗಾತ್ರ

ಹೊಸನಗರ: ಸಮಾಜಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿತರಿಸುತ್ತಿರುವ ಪಡಿತರದ ಗುಣಮಟ್ಟ ಕಳಪೆಯಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಹರತಾಳು ಹಾಲಪ್ಪ ದೂರಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರು ಆರೋಪಿಸಿದರು.

ಕೊಡಚಾದ್ರಿ ತಪ್ಪಲು, ವಾರಾಹಿ ನದಿ ದಡದಲ್ಲಿ ವಾಸಿಸುತ್ತಿರುವ ಹಸಲರು ಹಾಗೂ ಗೊಂಡರು ಜನಾಂಗದ ಫಲಾನುಭವಿಗಳು ಕಳಪೆ ಗುಣಮಟ್ಟದ ಮಾಸಿಕ ಪಡಿತರ ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಸುಮಾರು 40 ಕಿ.ಮೀ ದೂರ ಬರಬೇಕಾಗಿರುವುದು ದುರಂತ. ಪಡಿತರವನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ತಾಲ್ಲೂಕಿನಾದ್ಯಂತ ಪ್ರಕೃತಿ ವಿಕೋಪದ ಅತಿವೃಷ್ಟಿ ಹಾನಿ ಪ್ರಮಾಣವನ್ನು ಕಂದಾಯ, ಕೃಷಿ, ತೋಟಗಾರಿಕೆ ಸೇರಿ ಎಲ್ಲ ಇಲಾಖೆಗಳು ಸಮೀಕ್ಷೆ ಮಾಡಲು ಅವರು ಸೂಚಿಸಿದರು.

ತಾಲ್ಲೂಕಿನಲ್ಲಿ ಸುಮಾರು 10ಕ್ಕೂ ಹೆಚ್ಚು ಅಂಗನವಾಡಿ ಕಟ್ಟಡ ಕಾಮಗಾರಿಗಳು ಹಣಕಾಸಿನ ಮುಗ್ಗಟ್ಟಿನಿಂದಾಗಿ ಪೂರ್ಣಗೊಂಡಿಲ್ಲ. ಅವುಗಳನ್ನು ಪೂರ್ಣಗೊಳಿಸಲು ಹಣ ಮಂಜೂರು ಮಾಡುವಂತೆ ಎಪಿಎಂಸಿ ಅಧ್ಯಕ್ಷ ಬಂಡಿ ರಾಮಚಂದ್ರ ಮನವಿ ಮಾಡಿದರು.

‘ಹೋಬಳಿಗೊಂದು ಮೊರಾರ್ಜಿ ವಸತಿ ಶಾಲೆ ಇರಬೇಕು ಎಂಬುದು ಸರ್ಕಾರದ ಆದೇಶ. ಆದರೆ ಹೊಸನಗರ ತಾಲ್ಲೂಕಿನಲ್ಲಿ ಒಂದೂ ಇಲ್ಲ. ಹೊಸನಗರ, ರಿಪ್ಪನ್‌ಪೇಟೆಯಲ್ಲಿ ನಿವೇಶನ ಮಂಜೂರಾದರೂ ಕಾಮಗಾರಿ ಪ್ರಾರಂಭ ಆಗಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ ಸ್ವಾಮಿರಾವ್ ಆರೋಪಿಸಿದರು.

‘ಗಂಗಾ ಕಲ್ಯಾಣ ಯೋಜನೆ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಪರಿಶಿಷ್ಟ ವರ್ಗದ ಫಲಾನುಭವಿಗಳು ಶಿವಮೊಗ್ಗಕ್ಕೆ ತೆರಳಬೇಕಾದ ಪ್ರಸಂಗ ಬಂದಿದೆ. ಹೊಸನಗರದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಬಾಗಿಲು ಸದಾ ಬಂದ್ ಆಗಿರುತ್ತದೆ’ ಎಂದು ಕೆಡಿಪಿ ಸದಸ್ಯರು ಆರೋಪಿಸಿದರು.

ಅಡಿಕೆ ಬೆಳೆಗೆ ವ್ಯಾಪಕ ಕೊಳೆ ರೋಗ ಬಂದಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಬೇಕು ಎಂದು ಸದಸ್ಯರಾದ ಮತ್ತಿಮನೆ ಸುಬ್ರಹ್ಮಣ್ಯ, ಶೋಭಾ ಮಂಜುನಾಥ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ವೇತಾ ಬಂಡಿ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಾಸಪ್ಪ ಗೌಡ, ಉಪಾಧ್ಯಕ್ಷೆ ಸುಶೀಲಮ್ಮ, ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಭಟ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT