ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಮುನಿಸಿಗೆ ತತ್ತರಿಸಿದ ಉಮಾಶ್ರೀ

Last Updated 15 ಮೇ 2018, 9:18 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ತೇರದಾಳದಿಂದ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ಸಚಿವೆ ಉಮಾಶ್ರೀ ಅವರ ಕನಸು ನನಸಾಗಿಲ್ಲ. ಬಾಗಲಕೋಟೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಎದುರು 17, 980 ಮತಗಳ ಅಂತರದಿಂದ ಸೋಲುಂಡರು.

ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲವರಿಗಷ್ಟೇ ಮಣೆ ಹಾಕಿದ್ದು ಪಕ್ಷದ ಮುಖಂಡರಾದ ಸುರೇಶ್‌ ಬನಹಟ್ಟಿ, ಮಹಾಲಿಂಗಪ್ಪ ಕೋಳಿಗುಡ್ಡ, ನಗರಸಭೆ ಮಾಜಿ ಅಧ್ಯಕ್ಷ ಕನೆಪ್ಪ ಹಾರೋಗೆರಿ ಅವರ ಮುನಿಸಿಗೆ ಕಾರಣವಾಗಿತ್ತು. ಈ ಭಿನ್ನಮತ ತಳಮಟ್ಟದ ಕಾರ್ಯಕರ್ತರ ಮೇಲೂ ಪರಿಣಾಮ ಬೀರಿತ್ತು. ಹಾಗಾಗಿ ಉಮಾಶ್ರೀ ಸೋಲಬೇಕಾಯಿತು ಎಂದು ವಿಶ್ಲೇಷಿಸಲಾಗಿದೆ.

ಬಿಜೆಪಿ ಅಭ್ಯರ್ಥಿ ಸಿದ್ದು 73,346 ಮತಗಳನ್ನು ಪಡೆದರೆ, ಉಮಾಶ್ರೀ ಅವರು 55,366 ಮತ ಪಡೆದರು. ಜೆಡಿಎಸ್‌ ಅಭ್ಯರ್ಥಿ ಬಸವರಾಜ್‌ ಪೊನ್ನೂರು ಅವರು 11,637 ಮತಗಳನ್ನು ಪಡೆದಿದ್ದಾರೆ.

ನೇಕಾರರಿಗೆ ಸ್ಪಂದಿಸದ ಉಮಾಶ್ರೀ: ಸ್ವತಃ ನೇಕಾರ ಸಮುದಾಯದವರೇ ಆದರೂ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ ಎಂಬ ಆಕ್ರೋಶ ಬಹುಸಂಖ್ಯಾತ ನೇಕಾರ ಮತದಾರರಲ್ಲಿತ್ತು. ನೇಕಾರರ ಸಾಲಮನ್ನಾ ಮಾಡಿದರೂ ಅದು ಪ್ರಮುಖ ಮೂರು ಸೊಸೈಟಿಗಳ ಫಲಾನುಭವಿಗಳಿಗೆ ಮಾತ್ರ ದಕ್ಕಿತು. ಪವರ್‌ಲೂಮ್‌ ನೇಕಾರರನ್ನು ಕಡೆಗಣಿಸಿದರು. ಇಲ್ಲಿನ ಕೆಎಚ್‌ಡಿಸಿ ನೌಕರರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬರೋಬ್ಬರಿ ಒಂದು ತಿಂಗಳು ಪ್ರತಿಭಟನೆ ನಡೆಸಿದಾಗಲೂ ಸೌಜನ್ಯಕ್ಕಾದರೂ ಬಂದು ಮಾತನಾಡಿಸಿಲ್ಲ. ಈ  ಸಿಟ್ಟನ್ನು ಅವರುಗಳು ಈಗ ತೀರಿಸಿಕೊಂಡಿದ್ದಾರೆ.

ಕೈ ಹಿಡಿಯದ ಅಭಿವೃದ್ಧಿ ಕೆಲಸ:

ವೆಂಕಟೇಶ್ವರ ಏತ ನೀರಾವರಿಗಾಗಿ ಇಲ್ಲಿನ ರೈತರು ನಾಲ್ಕುದಶಕಗಳಿಂದ ಹೋರಾಟ ನಡೆಸಿದ ಪರಿಣಾಮ ಸರ್ಕಾರ ₹174 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಿಸಿದ್ದರು. ಸಣ್ಣ ಪುಟ್ಟ ಸಮುದಾಯಗಳಿಗೂ ಸಮುದಾಯ ಭವನ ನಿರ್ಮಿಸಿದ್ದರು. ಕ್ಷೇತ್ರದಲ್ಲಿ ಉತ್ತಮ ರಸ್ತೆ ಸಂಪರ್ಕವನ್ನೂ ಕಲ್ಪಿಸಿದ್ದರು. ಆದರೂ ಇವು ಉಮಾಶ್ರೀ ಕೈ ಹಿಡಿಯಲಿಲ್ಲ.

ಕೆಲಸ ಮಾಡಿದ ಮೋದಿ ಅಲೆ: ಜಮಖಂಡಿಯಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣ ಯುವ ಸಮುದಾಯವನ್ನು ಆಕರ್ಷಿಸಿತು.

ಕ್ಷೇತ್ರದಲ್ಲಿ ಒಟ್ಟು 12 ಸಾವಿರ ಯುವ ಮತದಾರರಿದ್ದರು. ಅಲ್ಲದೇ ಸಿದ್ದು ಸವದಿ ಕಳೆದ ಚುನಾವಣೆಯಲ್ಲಿ ಕೆಜೆಪಿ ವಿರುದ್ಧ ಕೇವಲ 2005 ಮತಗಳಿಂದ ಸೋತಿದ್ದರು. ಈ ಅನುಕಂಪವೂ ಅವರ ಕೈ ಹಿಡಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT