ಲೋಕಸಭೆ ಚುನಾವಣೆ: ಗರಿಗೆದರಿದ ರಾಜಕೀಯ, ಬಿಜೆಪಿ ಮುಖಂಡರಿಗೆ ಡಿಕೆಶಿ ಗಾಳ

7
ಅಭ್ಯರ್ಥಿ ಆಯ್ಕೆಗೆ ಕಮಲ ಪಾಳಯದ ಸಭೆ

ಲೋಕಸಭೆ ಚುನಾವಣೆ: ಗರಿಗೆದರಿದ ರಾಜಕೀಯ, ಬಿಜೆಪಿ ಮುಖಂಡರಿಗೆ ಡಿಕೆಶಿ ಗಾಳ

Published:
Updated:

ರಾಮನಗರ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್‌ ಮತ್ತೊಮ್ಮೆ ಸ್ಪರ್ಧೆಗೆ ಇಳಿಯುವುದು ಖಚಿತವಾಗಿದೆ. ಮುಂಬರುವ ಚುನಾವಣೆಯನ್ನು ಮುಂದಿಟ್ಟುಕೊಂಡೇ ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಸಂಸದ ಸುರೇಶ್ ಅನಿತಾ ಪರ ಪ್ರಚಾರದ ಉಸ್ತುವಾರಿ ಹೊತ್ತುಕೊಂಡಿದ್ದರು. ಈಗಾಗಲೇ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿರುವ ಸುರೇಶ್, ಪಕ್ಷ ಸಂಘಟನೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಡಿಕೆಎಸ್‌ ಪತ್ರ: ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಬರೆದಿರುವ ಪತ್ರ ಚನ್ನಪಟ್ಟಣದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಈ ಪತ್ರ ಬರೆದಿರುವ ಶಿವಕುಮಾರ್, ಸಿ.ಪಿ. ಯೋಗೇಶ್ವರ್ ಸೇರಿದಂತೆ ಯಾರು ಬೇಕಾದರೂ ಕಾಂಗ್ರೆಸ್ ಸೇರುವಂತೆ ಮುಕ್ತ ಆಹ್ವಾನವನ್ನೂ ನೀಡಿದ್ದಾರೆ.

‘ಕಾಂಗ್ರೆಸ್‌ ತತ್ವ, ಸಿದ್ಧಾಂತದಲ್ಲಿ ನಂಬಿಕೆ ಇರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಬಲವರ್ಧನೆ ಮೂಲಕ ಲೋಕಸಭೆ ಚುನಾವಣೆಗೆ ಬೇಕಾದ ಸಿದ್ಧತೆಯನ್ನೂ ಅವರು ಆರಂಭಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯ ಸಂದರ್ಭ ಯೋಗೇಶ್ವರ್‌ ಕಾಂಗ್ರೆಸ್‌ನಲ್ಲಿ ಇದ್ದರು. ಅವರ ಕ್ಷೇತ್ರದಿಂದ ಸುರೇಶ್‌ ಪರ ಅತಿ ಹೆಚ್ಚಿನ ಮತಗಳು ಚಲಾವಣೆ ಆಗಿದ್ದವು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಸಿಪಿವೈ ಬಿಜೆಪಿ ಸೇರಿರುವುದರಿಂದ ಪಕ್ಷದ ಮತ ಗಳಿಕೆಗೆ ಆಗುವ ನಷ್ಟ ಸರಿದೂಗಿಸಲು ಡಿಕೆಎಸ್‌ ಸಹೋದರರು ಈಗಲೇ ಯೋಜನೆ ಸಿದ್ಧಪಡಿಸುತ್ತಿದ್ದಾರೆ.

ಬಿಜೆಪಿ ಸಭೆ: ಉಪ ಚುನಾವಣೆಯಲ್ಲಿ ಮಖಭಂಗ ಅನುಭವಿಸಿರುವ ಬಿಜೆಪಿ ಕೂಡ ಚುನಾವಣೆಗೆ ಸಿದ್ಧತೆ ಆರಂಭಿಸಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರ ಸಭೆಯು ಬೆಂಗಳೂರಿನಲ್ಲಿ ನಡೆದಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆದಿದೆ.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್‌, ಶಾಸಕ ಕೃಷ್ಣಪ್ಪ, ಮುಖಂಡರಾದ ಸಿ.ಪಿ. ಯೋಗೇಶ್ವರ್, ಕಿರಣ್‌ ರೆಡ್ಡಿ, ಎಂ.ರುದ್ರೇಶ್ ಸಹಿತ ಹಲವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಯೋಗೇಶ್ವರ್ ಅವರನ್ನು ಕಣಕ್ಕೆ ಇಳಿಸಲು ಪಕ್ಷದ ಮುಖಂಡರು ಒಲವು ತೋರಿದ್ದಾರೆ. ಆದರೆ ಸಿಪಿವೈ ಈ ಬಗ್ಗೆ ಅಷ್ಟು ಆಸಕ್ತಿ ತೋರಿಸಿಲ್ಲ. ಮತ್ತೊಂದೆಡೆ, ಬಿಎಸ್‌ವೈ ಆಪ್ತ ಎಂ. ರುದ್ರೇಶ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆಯೂ ಚರ್ಚೆಯಾಗಿದ್ದು, ಸದ್ಯದಲ್ಲಿಯೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಮನಗರ ಉಪ ಉಪ ಚುನಾವಣೆಯಲ್ಲಿ ಆದ ಮುಜುಗರದಿಂದ ಪಾಠ ಕಲಿತಿರುವ ಬಿಜೆಪಿ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಪಕ್ಷದ ಮೂಲ ಕಾರ್ಯಕರ್ತರಿಗೇ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆಯೂ ಇದೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ
ಲೋಕಸಭೆ ಚುನಾವಣೆಯು ಏಪ್ರಿಲ್‌–ಮೇನಲ್ಲಿ ನಡೆಯುವ ಸಾಧ್ಯತೆ ಇದೆ. ಅದಕ್ಕೂ ಮುನ್ನ, ಅಂದರೆ ಮಾರ್ಚ್‌ನಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

ಜಿಲ್ಲೆಯ ರಾಮನಗರ, ಮಾಗಡಿ, ಕನಕಪುರ ಹಾಗೂ ಚನ್ನಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂಬಂಧ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗೆ ಈಗಾಗಲೇ ಪತ್ರ ರವಾನಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದೆ. ಇತ್ತ ಸ್ಥಳೀಯ ಮಟ್ಟದಲ್ಲಿ ಟಿಕೆಟ್‌ಗೆ ಲಾಬಿ ಆರಂಭವಾಗಿದೆ. ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಸ್ಪರ್ಧೆ ಮಾಡುತ್ತದೆಯೋ ಇಲ್ಲ ‘ದೋಸ್ತಿ’ ಫೈಟ್‌ ಏರ್ಪಡಲಿದೆಯೋ ಎನ್ನುವ ಕುತೂಹಲ ಕಾರ್ಯಕರ್ತರದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !