ಸೋಮವಾರ, ಜೂನ್ 21, 2021
27 °C
ಸಂವಿಧಾನ ಶಿಲ್ಪಿ ಜಯಂತಿ ಅಂಗವಾಗಿ ಪ್ರತಿಮೆ, ಭಾವಚಿತ್ರಕ್ಕೆ ಗೌರವಾರ್ಪಣೆ

‘ಅಂಬೇಡ್ಕರ್‌ ರಚಿತ ಸಂವಿಧಾನ ವಿಶ್ವಶ್ರೇಷ್ಠ’: ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಡಾ. ಬಾಬಾ ಸಾಹೇಬ ಅಂಬೇಡ್ಕರ್ ನೇತೃತ್ವದ ಸಮಿತಿಯು ನಮ್ಮ ದೇಶಕ್ಕೆ ವಿಶ್ವ ಶ್ರೇಷ್ಠ ಸಂವಿಧಾನ ನೀಡಿದ್ದು, ಈ ಸಂವಿಧಾನದ ಅಡಿಯಲ್ಲಿ ರೂಪಿತವಾಗಿರುವ ಕಾನೂನುಗಳು ದೇಶವಾಸಿಗಳಿಗೆ ನೆರವಾಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಡಾ.ಬಿ.ಆರ್‌.ಅಂಬೇಡ್ಕರ್ ಅವರ 129 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್‌ ರಚಿತ ಸಂವಿಧಾನದಿಂದಾಗಿ ಭಾರತೀಯರೆಲ್ಲರೂ ನೆಮ್ಮದಿಯಿಂದ ಬದುಕಲು ಮಾರ್ಗದರ್ಶಿಯಾಗಿದೆ. ಸಂವಿಧಾನದ ಅಡಿಯಲ್ಲಿ ಇಂದು ನಾವೆಲ್ಲರೂ ಕಾರ್ಯನಿರ್ವಹಿಸಲು ಅನುಕೂಲವಾಗಿದೆ’. ದೇಶದಲ್ಲಿ ಸಂವಿಧಾನವೇ ಸರ್ವಶ್ರೇಷ್ಠ. ಇದಕ್ಕೆ ಪರ್ಯಾಯ ಕಾನೂನುಗಳಿಲ್ಲ ಎಂದು ಹೇಳಿದರು.

‘ಸ್ವಾತಂತ್ರ್ಯನಂತರದಿಂದ ಈವರೆಗೆ ಸುಮಾರು 130 ಕೋಟಿ ಜನಸಂಖ್ಯೆಯಲ್ಲಿ ಜಾತಿ, ಧರ್ಮ, ಬಡ, ಶ್ರೀಮಂತ ಎಂಬ ಬೇಧಭಾವವಿಲ್ಲದೆ ನಾವೆಲ್ಲರೂ ಒಂದೇ ಎಂಬ ತಳಹದಿಯ ಮೇಲೆ ಒಗ್ಗಟ್ಟಾಗಿ ನಿಲ್ಲುವಲ್ಲಿ ಸಂವಿಧಾನ ಮಾರ್ಗದರ್ಶಿಯಾಗಿದ್ದು, ನಾವೆಲ್ಲರೂ ಇಂತಹ ಸಂವಿಧಾನಕ್ಕೆ ಬದ್ಧರಾಗಿ ನಡೆಯಬೇಕು’. ‘ಅಂಬೇಡ್ಕರ್ ಹೇಳಿದಂತೆ ಸಂವಿಧಾನವನ್ನು ನಾವು ಗೌರವಿಸಿದರೆ ನಮ್ಮನ್ನು ಸಂವಿಧಾನ ಗೌರವಿಸುತ್ತದೆ. ಭಾರತದ ಕಟ್ಟಕಡೆಯ ವ್ಯಕ್ತಿಗಾಗಿ ಈ ಸಂವಿಧಾನ ಎಂಬ ಅವರ ಧ್ಯೇಯವಾಕ್ಯಗಳು ಸಮಾಜಕ್ಕೆ ಸ್ಪೂರ್ತಿಯಾಗಿದ್ದು, ಎಲ್ಲರೂ ಸಂವಿಧಾನ ಬದ್ಧವಾಗಿ ನಡೆಯುವ ಮೂಲಕ ದೇಶದ ಸಮಗ್ರತೆ, ಏಕತೆ ಹಾಗೂ ಅಭಿವೃದ್ಧಿಗೆ ಶ್ರಮಿಸೋಣ’ ಎಂದು ಹೇಳಿದರು.

‘ಸಂವಿಧಾನದ ವ್ಯಾಪ್ತಿಯಲ್ಲಿ ಎಲ್ಲರೂ ಕಾನೂನುಗಳನ್ನು ಪಾಲಿಸುವ ಮೂಲಕ ವಿಶೇಷವಾಗಿ ಕೊರೊನಾ ನಿಯಂತ್ರಣಕ್ಕೆ ನೆರವಾಗುವ ಸಾಮಾಜಿಕ ಅಂತರ, ಇತರೆ ನಿಯಮ ಪಾಲನೆಯ ಮೂಲಕ ರೋಗ ನಿಯಂತ್ರಣಕ್ಕೆ ನೆರವಾಗಬೇಕು’ ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಜಿಲ್ಲಾಡಳಿತ ಹಾಗೂ ದಲಿತ ಸಮಾಜದಿಂದ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ, ಡಿಎಸ್‍ಪಿ ಲಕ್ಷ್ಮೀ ನಾರಾಯಣ್, ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋದ್ದಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ಧಣ್ಣ, ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಪ್ರಾಣೇಶ ಜಹಾಗೀರದಾರ, ಸಮಾಜದ ಮುಖಂಡರಾದ ಅಡಿವೆಪ್ಪ ಸಾಲಗಲ್, ಅಭಿಷೇಕ ಚಕ್ರವರ್ತಿ, ಜಿತೇಂದ್ರ ಕಾಂಬಳೆ, ಕ್ಯಾತನ್, ಚಂದ್ರಶೇಖರ್ ಕೊಡಬಾಗಿ, ಸುರೇಶ ಗೊಣಸಗಿ, ಸಿದ್ದು ರಾಯಣ್ಣ, ಶಾಂತಪ್ಪ ಶಹಾಪೂರ ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು