ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ | ಪ್ರವಾಹಕ್ಕೆ ನಲುಗಿದ ಹೆಗಲತ್ತಿಯಲ್ಲಿ ನೀರಿಗೂ ಬರ

ಸಿಗದ ಪ್ರಕೃತಿ ವಿಕೋಪ ಪರಿಹಾರ: ತಿಂಗಳುಗಳು ಉರುಳಿದರೂ ಈಡೇರದ ಭರವಸೆ
Last Updated 20 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ): ಕಳೆದ ಆಗಸ್ಟ್ ತಿಂಗಳಿನಲ್ಲಿ ಉಂಟಾದ ಭೀಕರ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಕ್ಕಿ ನೆಲೆ ಕಳೆದುಕೊಂಡ ತಾಲ್ಲೂಕಿನ ಹೆಗಲತ್ತಿ ಗ್ರಾಮದ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಸರ್ಕಾರದ ಭರವಸೆ ಈಡೇರಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತವರು ಜಿಲ್ಲೆಯಲ್ಲಾದ ಪ್ರಕೃತಿ ವಿಕೋಪದ ಅನಾಹುತವನ್ನು ಖುದ್ದಾಗಿ ವೀಕ್ಷಿಸಿ ವಿಶೇಷ ಪ್ಯಾಕೇಜಿನ ಭರವಸೆ ನೀಡಿದ್ದರು. ಆದರೆ ಅದು ಕೇವಲ ಭರವಸೆಯಾಗಿಯೇ ಉಳಿದಿದೆ.

ನೆಲೆ ಕಳೆದುಕೊಂಡ ಕುಟುಂಬಗಳ ಬದುಕು ಈಗ ಅತಂತ್ರವಾಗಿದ್ದು, ಕುಡಿಯುವ ನೀರಿಗೂ ಗ್ರಾಮದ ಜನರು ಪರದಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ಶಿವಮೊಗ್ಗ-ತೀರ್ಥಹಳ್ಳಿ ಗಡಿಭಾಗದ ಮಂಡಗದ್ದೆ ಹೋಬಳಿಯ ಹೆಗಲತ್ತಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕೃಷಿ ಬದುಕು ಕಟ್ಟಿಕೊಂಡ 25ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ.

ಹೆಗಲತ್ತಿ ಗ್ರಾಮದ ಮಲೆ:ಮಹದೇಶ್ವರ ದೇವರ ಗುಡ್ಡ ಕುಸಿದು ಭಾರೀ ಅನಾಹುತ ಸೃಷ್ಟಿಯಾಗಿತ್ತು. ಕೃಷಿ ಭೂಮಿ ಮಣ್ಣಿನಲ್ಲಿ ಹೂತು ಹೋಗಿತ್ತು. ಫಸಲು ನೀಡುತ್ತಿದ್ದ ಅಡಿಕೆ ತೋಟ, ಭತ್ತದ ಗದ್ದೆಗಳು ಭೂ ಕುಸಿತದ ಹೊಡೆತಕ್ಕೆ ಸಿಲುಕಿ ಮಾಯವಾಗಿದ್ದವು. ಮನೆಗಳಿಗೆ ಹಾನಿ ಸಂಭವಿಸಿತ್ತು. ಕುಡಿಯುವ ನೀರಿನ ಬಾವಿ, ಕೊಳವೆಬಾವಿ, ಪಂಪ್‌ಸೆಟ್ ಎಲ್ಲವೂ ಕೆಸರು ಮಿಶ್ರಿತ ಮಣ್ಣಿನಲ್ಲಿ ಕೊಚ್ಚಿಹೋಗಿತ್ತು.

ಊರು ಕತ್ತಲ ಮೌನಕ್ಕೆ ಜಾರಿದಾಗ ಏಕಾಏಕಿ ಕುಸಿದ ಗುಡ್ಡ ಗ್ರಾಮದ ಜನರ ಬದುಕನ್ನು ಕಿತ್ತುಕೊಂಡಿತ್ತು. ಸರ್ಕಾರ ನೀಡಿದ ಪರಿಹಾರದ ಭರವಸೆ ಗ್ರಾಮದ ಜನರಲ್ಲಿ ಬೆಟ್ಟದಷ್ಟು ಆಸೆ ಹುಟ್ಟಿಸಿದ್ದರೂ ಕೈಗೆಟಕಿದ್ದು ಮಾತ್ರ ಕಡಿಮೆ.

9 ಸಂತ್ರಸ್ತ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ನೆರವಿನಡಿಯಲ್ಲಿ ತಲಾ ಒಂದೊಂದು ಕುಟುಂಬಕ್ಕೆ ₹ 35 ಸಾವಿರ ಪರಿಹಾರ ನೀಡಿ ಸರ್ಕಾರ ಕೈತೊಳೆದುಕೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ, ಎಂ.ರವಿಕುಮಾರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಸರ್ಕಾರದ ಉಸ್ತುವಾರಿ ಕಾರ್ಯದರ್ಶಿ, ಜಿಲ್ಲಾಧಿಕಾರಿ ಸೇರಿ ಅನೇಕರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬದವರ ನೆರವಿಗೆ ಸಹಕರಿಸುವ ಭರವಸೆ ನೀಡಿದ್ದರು. ಆದರೆ ಅದು ಈಡೇರಿಲ್ಲ ಎಂದು ದೂರುತ್ತಾರೆ ಸಂತ್ರಸ್ತರಾದ ಸೋಮು ಪೂಜಾರಿ, ಗೋಪಾಲ ಪೂಜಾರಿ.

ಗ್ರಾಮದ 19 ಸಂತ್ರಸ್ತರಿಗೆ ಕೇವಲ ₹ 3.5 ಲಕ್ಷ ಪರಿಹಾರ ಕೊಟ್ಟು ನಿಯಮದ ಹೆಸರಿನಲ್ಲಿ ಸರ್ಕಾರ ಜಾರಿ
ಕೊಂಡಿದೆ. ಗುಡ್ಡ ಜರಿದ ಸ್ಥಳಕ್ಕೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಭೂ ಕುಸಿತಕ್ಕೆ ನಿಖರ ವೈಜ್ಞಾನಿಕ ಕಾರಣಗಳನ್ನು ಕೊಡುವ ಜವಾಬ್ದಾರಿ ಸರ್ಕಾರ ನಿರ್ವಹಿಸಿಲ್ಲ ಎಂಬುದು ಗ್ರಾಮಸ್ಥರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT