ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಘೋಷಣೆ: ಹಾನಿ ಸಮೀಕ್ಷೆಗೆ ಜಂಟಿ ತಂಡ ಸಜ್ಜು

ಬರ ಪರಿಹಾರವಾಗಿ ಇನ್‌ಪುಟ್ ಸಬ್ಸಿಡಿ ಪ್ರಕಟದ ನಿರೀಕ್ಷೆ; ಸರ್ಕಾರದತ್ತ ಜಿಲ್ಲೆಯ 2 ಲಕ್ಷ ರೈತರ ಚಿತ್ತ...
Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಐದು ತಾಲ್ಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸುವುದು ಬಹುತೇಕ ಖಚಿತಪಟ್ಟಿದೆ. ಸ್ವಲ್ಪ ಆಚೀಚೆಯಾದರೆ ಮಾತ್ರ ಬಸವನಬಾಗೇವಾಡಿ ತಾಲ್ಲೂಕು ಬರಪೀಡಿತ ಪಟ್ಟಿಯಿಂದ ಹೊರಗುಳಿಯಬಹುದು, ಇಲ್ಲವೇ ಬರ ಪೀಡಿತ ಎಂದು ಘೋಷಣೆಯಾಗಲೂಬಹುದು.

ಕೇಂದ್ರದ ಮಾರ್ಗಸೂಚಿಯಂತೆ ಜಿಲ್ಲಾ ಕೃಷಿ ಇಲಾಖೆ ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಕಂದಾಯ, ಕೃಷಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿಕೊಟ್ಟಿದೆ. ವಿಜಯಪುರ, ಸಿಂದಗಿ, ಮುದ್ದೇಬಿಹಾಳ, ಇಂಡಿ ತಾಲ್ಲೂಕುಗಳು ಬರ ಪೀಡಿತ ಪ್ರದೇಶ ಎಂದು ಘೋಷಣೆಯಾಗುವುದು ಖಚಿತ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.

ಜುಲೈ, ಆಗಸ್ಟ್‌ನಲ್ಲಿ ಬಸವನಬಾಗೇವಾಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೇಂದ್ರದ ಮಾರ್ಗಸೂಚಿ ಪ್ರಕಾರ ಮೂರು ವಾರ ಸತತ ಮಳೆಯಾಗಿಲ್ಲ. ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ತೆಗೆದುಕೊಳ್ಳಲಿರುವ ನಿರ್ಧಾರದ ಮೇಲೆ ಬಾಗೇವಾಡಿ ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಮೀಕ್ಷೆಗೆ ಸಜ್ಜು: ‘ಬರಪೀಡಿತ ಪ್ರದೇಶ ಎಂದು ಘೋಷಣೆಯಾದ 15 ದಿನದೊಳಗೆ ಜಿಲ್ಲೆಯ ಎಲ್ಲೆಡೆ ಹಾನಿಗೊಳಗಾದ ಮುಂಗಾರಿ ಬೆಳೆಗಳ ಸಮೀಕ್ಷೆ ನಡೆಸಬೇಕು. ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಯ ತಳಹಂತದ ಅಧಿಕಾರಿಗಳ ತಂಡ ಪ್ರತಿ ಜಮೀನಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ವರದಿ ಸಲ್ಲಿಸಲಿದೆ’ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿನ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಂಟಿ ಸಮೀಕ್ಷೆಗೆ ತಂಡಗಳನ್ನು ರಚಿಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ. ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ, ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ, ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಸಹಾಯಕ ಸೇರಿದಂತೆ ಈ ಮೂವರ ತಂಡ ಪ್ರತಿ ಹಳ್ಳಿಯಲ್ಲೂ ಬೆಳೆ ಹಾನಿ ಸಮೀಕ್ಷೆ ನಡೆಸಲಿದೆ.

ಮುಂಗಾರು ಬೆಳೆಗಳು ಯಾವ ಪ್ರಮಾಣದಲ್ಲಿ ಹಾನಿಗೀಡಾಗಿವೆ. 33%ಗಿಂತ ಹೆಚ್ಚು ಹಾನಿಯಾಗಿದೆಯಾ. ಬೆಳವಣಿಗೆ ಕುಂಠಿತ ಎಷ್ಟಿದೆ ? ಮೊಳಕೆ, ಚಿಗುರಿನ ಪ್ರಮಾಣ, ಗಿಡಗಳ ಸಂಖ್ಯೆ ನಿಗದಿತ ಪ್ರಮಾಣದಲ್ಲಿದೆಯಾ ಎಂಬುದನ್ನು ಪರಿಶೀಲಿಸಿ ವರದಿ ನೀಡಲಿದೆ. ಕಾಯಂ ಸಿಬ್ಬಂದಿಯಿಲ್ಲದ ಕಡೆ ಪ್ರಭಾರದ ಹೊಣೆ ಹೊತ್ತ ಅಧಿಕಾರಿಗಳ ತಂಡ ಈ ಕೆಲಸ ನಿರ್ವಹಿಸಲಿದೆ.

ಈ ಎಲ್ಲಾ ತಂಡಗಳು ನೀಡುವ ವರದಿ ಕ್ರೋಢೀಕರಿಸಿ ನಾವು ಸರ್ಕಾರಕ್ಕೆ ನಷ್ಟ ಅಂದಾಜಿನ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಎಲ್ಲಾ ಜಿಲ್ಲೆಗಳ ಮಾಹಿತಿ ಸಂಗ್ರಹಿಸಿ, ಕೇಂದ್ರ ಸರ್ಕಾರದ ಕೃಷಿ ಇಲಾಖೆಗೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿಕೊಡುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ ಎರಡು ತಿಂಗಳು ಬೇಕು. ಇದರ ನಂತರ ಜಿಲ್ಲೆಯ ಎರಡು ಲಕ್ಷ ರೈತರಿಗೆ ಇನ್‌ಪುಟ್‌ ಸಬ್ಸಿಡಿ ಸಿಗುವ ಸಾಧ್ಯತೆ ಹೆಚ್ಚಿದೆ’ ಎಂದು ಅವರು ಮಾಹಿತಿ ನೀಡಿದರು.

ಸಹಾಯಧನ
‘ನಷ್ಟ ಅಂದಾಜಿನ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಮ್ಮತಿಯ ಮುದ್ರೆಯೊತ್ತಿದರೆ, ಇನ್‌ಪುಟ್‌ ಸಬ್ಸಿಡಿ ಹೆಸರಿನಲ್ಲಿ ಜಿಲ್ಲೆಗೆ ಅಂದಾಜು ₹ 130 ಕೋಟಿ ಆಸುಪಾಸು ಸಹಾಯಧನ ಕೃಷಿ ಪರಿಕರ ಖರೀದಿಗೆಂದು ಬಿಡುಗಡೆಯಾಗಲಿದೆ. ಇದರಿಂದ ಕನಿಷ್ಠ 2 ಲಕ್ಷ ರೈತರಿಗೆ ಸಹಕಾರಿಯಾಗಲಿದೆ’ ಎಂದು ಮಂಜುನಾಥ್‌ ತಿಳಿಸಿದರು.

‘ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಂಡ ರೈತರಿಗೂ ಕನಿಷ್ಠ ₹ 120ರಿಂದ 130 ಕೋಟಿ ವಿಮಾ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬೆಳೆ ವಿಮೆಗೆ ನೋಂದಾಯಿಸದ ರೈತರಿಗೆ ಇನ್‌ಫುಟ್‌ ಸಬ್ಸಿಡಿಯೇ ಆಧಾರವಾಗಲಿದೆ. ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಈ ಸಹಾಯಧನ ಅನುಕೂಲಕಾರಿಯಾಗಲಿದೆ. ಗರಿಷ್ಠ ಎರಡು ಹೆಕ್ಟೇರ್‌ವರೆಗೆ ಮಾತ್ರ ಇನ್‌ಪುಟ್‌ ಸಬ್ಸಿಡಿ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT