ಬರಡಾದ ನೆಲ, ಬರಿದಾದ ಬದುಕು

7
ಪ್ರಜಾವಾಣಿ ವಾರ್ತೆ

ಬರಡಾದ ನೆಲ, ಬರಿದಾದ ಬದುಕು

Published:
Updated:
Prajavani

ರಾಮನಗರ: ‘ಎರಡು ಎಕರೆಯಲ್ಲಿ ಬೆಳೆದ ತೊಗರಿಯ ಒಂದು ಕಾಳೂ ಕೈಗೆ ಸಿಕ್ಕಿಲ್ಲ. 900 ಅಡಿ ಕೊರೆಯಿಸಿದರೂ ಕೊಳವೆ ಬಾವಿಯಲ್ಲಿ ನೀರು ದಕ್ಕಿಲ್ಲ. ಹೀಗಾಗಿ ಕೃಷಿ ಮಾಡುವುದೇ ದುಸ್ತರವಾಗಿದೆ’

–ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರದೊಡ್ಡಿ ಗ್ರಾಮದ ನಿವೃತ್ತ ಯೋಧ ಮಹದೇವಯ್ಯ ಸಚಿವರ ಮುಂದೆ ಅಳಲು ತೋಡಿಕೊಂಡಿದ್ದು ಹೀಗೆ.

ಕೃಷಿ ಸಚಿವ ಶಿವಶಂಕರ ರೆಡ್ಡಿ ನೇತೃತ್ವದ ಸಚಿವ ಸಂಪುಟ ಉಪ ಸಮಿತಿಯು ಗುರುವಾರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನ ಕೈಗೊಂಡಿದ್ದು, ರಾಮನಗರ ಹಾಗೂ ಮಾಗಡಿ ತಾಲ್ಲೂಕಿನ ಹೊಲಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿತು. ಹುರುಳಿ, ತೊಗರಿ, ಜೋಳ, ರಾಗಿಯ ಬೆಳೆಗಳನ್ನು ಪರಿಶೀಲಿಸಿತು.

ಬಹುತೇಕ ಕಡೆ ಬೆಳೆಗಳ ಕಟಾವು ಮುಗಿದಿದ್ದು, ರೈತರು ರಾಗಿ ತೆನೆಗಳನ್ನು ಮೆದೆ ಹಾಕಿದ್ದರಿಂದ ಸಚಿವರ ತಂಡಕ್ಕೆ ನೋಡಲು ಹೆಚ್ಚಿನ ಬೆಳೆ ಸಿಗಲಿಲ್ಲ, ಕಾಲಿಟ್ಟ ಕಡೆಯಲ್ಲೆಲ್ಲ ಒಣಗಿದ ಕಡ್ಡಿಗಳು ಸಿಕ್ಕಿದವು. ಕುಂಬಾರದೊಡ್ಡಿಯಲ್ಲಿ ತೊಗರಿ, ಹುರುಳಿ ಬೆಳೆ ಹಾನಿಯನ್ನು ಪರಿಶೀಲಿಸಿದ ಸಚಿವರು ಅಲ್ಲಿಯೇ ಮಹದೇವಯ್ಯ ಅವರ ಹೊಲದಲ್ಲಿ ನರೇಗಾ ಯೋಜನೆ ಬಳಸಿಕೊಂಡು ನಿರ್ಮಾಣವಾಗಿದ್ದ ಕೃಷಿಹೊಂಡವನ್ನೂ ವೀಕ್ಷಿಸಿದರು. ಪಕ್ಕದಲ್ಲಿನ ಮಾವಿನ ತೋಟಕ್ಕೆ ಭೇಟಿ ಕೊಟ್ಟು ಈ ಬಾರಿಯ ಫಸಲಿನ ಮಾಹಿತಿ ಪಡೆದರು.

ನಂತರದಲ್ಲಿ ಸಚಿವರ ತಂಡವು ಮಾಗಡಿ ತಾಲ್ಲೂಕಿನ ಸೋಮಕ್ಕನ ಮಠ, ಪಣ್ಣಯ್ಯನ ಪಾಳ್ಯ ಹಾಗೂ ಗೊರೂರಿಗೆ ಭೇಟಿ ನೀಡಿತು. ಪಣ್ಣಯ್ಯನ ಪಾಳ್ಯದಲ್ಲಿ ರೈತ ಕಾಂತರಾಜಪ್ಪ ಎಂಬುವರು ಸಚಿವರ ಕಾಲಿಗೆ ಬಿದ್ದು ಪರಿಹಾರಕ್ಕೆ ಮೊರೆಯಿಟ್ಟ ಘಟನೆಯೂ ನಡೆಯಿತು.

ಸಚಿವರಾದ ಡಿ.ಕೆ. ಶಿವಕುಮಾರ್, ಡಿ.ಸಿ. ತಮ್ಮಣ್ಣ, ವೆಂಕಟರಮಣಪ್ಪ, ಎಸ್‌.ಆರ್. ಶ್ರೀನಿವಾಸ ಹಾಗೂ ಸ್ಥಳೀಯ ಶಾಸಕ ಎ.ಮಂಜುನಾಥ ಜೊತೆಗಿದ್ದರು.

**
ತರಾತುರಿಯಲ್ಲಿ ವೀಕ್ಷಣೆ
ಬರ ವೀಕ್ಷಣೆಗೆಂದು ಬಂದ ಸಚಿವರ ತಂಡವು ಅಧಿಕಾರಿಗಳೊಂದಿಗಿನ ಸಭೆಗೆ ಹೆಚ್ಚಿನ ಸಮಯ ಮೀಸಲಿಟ್ಟಿತು. ಹೀಗಾಗಿ ಕೆಲವೇ ಕೆಲವು ಪ್ರದೇಶಕ್ಕೆ ಅವರ ‘ವೀಕ್ಷಣೆ’ ಸೀಮಿತಗೊಂಡಿತು. ಅಧಿಕಾರಿಗಳು ಮೊದಲೇ ಗೊತ್ತು ಮಾಡಿದ್ದ ಜಾಗಕ್ಕೆ ಕಾಲಿಟ್ಟ ಸಚಿವರ ದಂಡು, ಅಲ್ಲಿ ಬೆರಳೆಣಿಕೆಯ ರೈತರ ಅಹವಾಲು ಆಲಿಸಿತು. ಅಲ್ಲಿ ಹೆಚ್ಚಿನ ಬೆಳೆಯೂ ಕಾಣಲಿಲ್ಲ. ಮಧ್ಯಾಹ್ನದ ಸಭೆಗೆ ಹಾಜರಾಗಬೇಕಾದ ಕಾರಣ ಸಚಿವ ಡಿ.ಕೆ. ಶಿವಕುಮಾರ್ ಆತುರದಲ್ಲಿಯೇ ವೀಕ್ಷಣೆ ಮುಗಿಸಿ ಸಚಿವರೊಂದಿಗೆ ನಿರ್ಗಮಿಸಿದರು. ಚನ್ನಪಟ್ಟಣ ಹಾಗೂ ಕನಕಪುರದತ್ತ ಅವರು ಮುಖ ಮಾಡಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !